ಮಡಿಕೇರಿ, ಜೂ. ೩೦: ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆ (ಐಟಿಡಿಪಿ) ಕಚೇರಿಯಲ್ಲಿ ನೂತನವಾಗಿ ಅರಣ್ಯ ಹಕ್ಕು ಕೋಶ ಆರಂಭಿಸ ಲಾಗಿದೆ ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಎಸ್. ಹೊನ್ನೇಗೌಡ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕಕಾಲದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಅರಣ್ಯ ಹಕ್ಕು ಕೋಶವನ್ನು ಉದ್ಘಾಟಿಸಿದರು. ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರ ಮಾರ್ಗದರ್ಶನದಲ್ಲಿ ನಗರದ ಜಿ.ಪಂ. ಭವನದ ಐಟಿಡಿಪಿ ಕಚೇರಿಯಲ್ಲಿ ಅರಣ್ಯಹಕ್ಕು ಕೋಶ ತೆರೆಯಲಾಗಿದೆ.
ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಈ ಕೋಶ ಕಾರ್ಯನಿರ್ವಹಿಸಲಿದ್ದು, ಈಗಾಗಲೇ ಅರಣ್ಯ ಹಕ್ಕುಪತ್ರವನ್ನು ಪಡೆದಿರುವ ಕುಟುಂಬಗಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವುದು ಮತ್ತು ಸಂಗ್ರಹವಾಗಿರುವ ದತ್ತಾಂಶಗಳನ್ನು ಡಿಜಿಟಲೀಕರಣಗೊಳಿಸುವುದು ಅರಣ್ಯ ಹಕ್ಕು ಕೋಶದ ಪ್ರಮುಖ ಕಾರ್ಯ ವಾಗಿರುತ್ತದೆ ಎಂದು ಎಸ್. ಹೊನ್ನೇಗೌಡ ಮಾಹಿತಿ ನೀಡಿದರು. ಅರಣ್ಯ ಹಕ್ಕು ಪತ್ರ ಹೊಂದಿಲ್ಲದವರ ಮತ್ತು ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡಿರುವ ಕುಟುಂಬಗಳ ಕುರಿತು ಪುನರ್ ಪರಿಶೀಲನೆ ನಡೆಸಿ ಅರ್ಹ ಅರಣ್ಯವಾಸಿಗಳಿಗೆ ಅಗತ್ಯ ಸೌಕರ್ಯ ಒದಗಿಸಲು ಅರಣ್ಯ ಹಕ್ಕು ಕೋಶ ಪೂರಕವಾಗಿದೆ ಎಂದು ತಿಳಿಸಿದರು. ಅರಣ್ಯಹಕ್ಕು ಕಾಯ್ದೆಯಡಿ ಜಿಲ್ಲೆಯಲ್ಲಿ ೪೨೭೭ ಅರ್ಜಿಗಳು ಸ್ವೀಕೃತವಾಗಿದ್ದು, ೨೪೩೦ ಅರ್ಜಿಗಳನ್ನು ಅನುಮೋದಿಸಲಾಗಿದೆ. ಈ ಮೂಲಕ ವೈಯಕ್ತಿಕ ಹಾಗೂ ಕಿರು ಅರಣ್ಯ ಸಂಗ್ರಹಣೆಗಾಗಿ ೩೧೯೬೭.೮೨ ಎಕರೆ ಮಂಜೂರು ಮಾಡಲಾಗಿದೆ. ೧೮೪೭ ಅರ್ಜಿಗಳು ತಿರಸ್ಕೃತಗೊಂಡಿದ್ದು, ತಿರಸ್ಕೃತ ಅರ್ಜಿಗಳ ಪುನರ್ ಪರಿಶೀಲನೆಗೆ ಅರಣ್ಯ ಹಕ್ಕು ನಿಯಮದ ಬಗ್ಗೆ ಸಲಹೆ ನೀಡಲು ಕೋಶದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಐಟಿಡಿಪಿ ಇಲಾಖೆ ಅಧಿಕಾರಿಗಳು ಹೇಳಿದರು. ಈ ಕುರಿತಂತೆ ಯಾವುದೇ ದೂರು, ಸಲಹೆ ಮತ್ತು ಮಾಹಿತಿಗಳು ಬೇಕಿದ್ದಲ್ಲಿ ನೋಡಲ್ ಅಧಿಕಾರಿ ದೇವರಾಜ್ ೯೧೦೮೮೧೩೮೪೫, ಸಹಾಯಕ ನೋಡಲ್ ಅಧಿಕಾರಿ ಆಶಿಕ್ ೮೮೬೧೯೫೭೫೭೭, ತಾಂತ್ರಿಕ ಸಂಯೋಜಕರಾದ ಮಾದಯ್ಯ ೯೮೪೫೭೭೧೮೦೭, ತಾಂತ್ರಿಕ ಸಹಾಯಕ ಸಂಯೋಜಕರಾದ ಸಂಜಯ್ ೭೩೪೮೮೪೧೭೩೪ ರವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಎಸ್. ಹೊನ್ನೇಗೌಡ ತಿಳಿಸಿದ್ದಾರೆ.