ಐಗೂರು, ಜೂ. ೨೯: ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ನೆಟ್ಟ ಗಿಡಗಳನ್ನು ಆರೈಕೆ ಮಾಡುತ್ತ ಗಿಡಗಳು ಬೆಳೆಯುವ ತನಕ ಪೋಷಿಸಿಕೊಂಡು ಬರುವುದರ ಜೊತೆಗೆ ಪರಿಸರವನ್ನು ಸಂರಕ್ಷಿಸುವ ಕೆಲಸವನ್ನು ಮಾಡಬೇಕೆಂದು ಅರಣ್ಯ ಇಲಾಖೆಯ ಗಸ್ತು ಪಡೆಯ ಚಂದ್ರಶೇಖರ್ ಕರೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸೋಮವಾರಪೇಟೆ ವಲಯ ಅರಣ್ಯ ಇಲಾಖೆ ಜಂಟಿ ಆಶ್ರಯದಲ್ಲಿ ಕಾಜೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಗೋಪಾಲಕೃಷ್ಣ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ಔಷಧೀಯ ಸಸ್ಯಗಳ ಸುವಾಸನೆಯನ್ನು ಗುರುತಿಸುವ ಸ್ಪರ್ಧೆ, ಭೂಮಿಗೆ ಬಿದ್ದ ಬೀಜ ಮೊಳಕೆ ಒಡೆದು ಸಸಿಯಾಗಿ, ಹೂವಾಗಿ, ಹಣ್ಣಾಗುವ ಚಿತ್ರವನ್ನು ಬಿಡಿಸುವ ಸ್ಪರ್ಧೆ ಮತ್ತು ಪರಿಸರದ ಚಿತ್ರ ಬಿಡಿಸುವ ಸ್ಪರ್ಧೆಗಳು ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸೇವಾ ಪ್ರತಿನಿಧಿ ಚೆನ್ನಮ್ಮ ರಾಜು ಸ್ವಾಗತಿಸಿ, ಕೃಷಿ ಮೇಲ್ವಿಚಾರಕ ಹರೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ್, ಮುಖ್ಯ ಶಿಕ್ಷಕಿ ಸರಳಕುಮಾರಿ, ಕೃಷಿ ಮೇಲ್ವಿಚಾರಕ ಹರೀಶ್ ಕುಮಾರ್, ಪ್ರತಿನಿಧಿ ಚೆನ್ನಮ್ಮ ರಾಜು, ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.