ಕುಶಾಲನಗರ, ಜೂ. ೨೯: ರಾಜ್ಯದಲ್ಲಿ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿನ ಅನುದಾನಿತ ಖಾಸಗಿ ಶಾಲೆಗಳಲ್ಲಿನ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ರಾಜ್ಯ ಸರ್ಕಾರ ಈ ಬಗ್ಗೆ ತುರ್ತು ಗಮನಹರಿಸಿ ೨೫ ಮಕ್ಕಳ ಅನುಪಾತದ ಸಂಖ್ಯೆಯ ಮಿತಿಯನ್ನು ಸಡಿಲಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಆಗ್ರಹಿಸಿದರು.
ಪ್ರವಾಸಿ ಮಂದಿರಲ್ಲಿ ಕೊಡಗು ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಅಹವಾಲು- ಸಮಸ್ಯೆಗಳನ್ನು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುದಾನಿತ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ಮಕ್ಕಳ ಸಂಖ್ಯೆ ಕೂಡ ಕಡಿಮೆ ಆಗುತ್ತಿರುವುದು. ಆದ್ದರಿಂದ ಸರ್ಕಾರ ೨೫ ಮಕ್ಕಳ ಅನುಪಾತದ ಸಂಖ್ಯೆಯ ಮಿತಿ ಸಡಿಲಗೊಳಿಸುವ ಮೂಲಕ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ಮಕ್ಕಳ ಕಲಿಕೆಗೆ ಹಾಗೂ ಶಿಕ್ಷಕರ ಸೇವಾ ಭದ್ರತೆಗೆ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಅನುದಾನಿತ ಶಿಕ್ಷಣ ಸಂಸ್ಥೆಗಳ ಸಮಸ್ಯೆ ಕುರಿತು ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ಭರವಸೆ ನೀಡಿದರು. ಶಿಕ್ಷಣಾಧಿಕಾರಿಗಳು ಅನುದಾನಿತ ಸಂಸ್ಥೆಗಳಿಗೆ ಫಲಿತಾಂಶ ಹಾಗೂ ಇನ್ನಿತರ ವಿಚಾರಗಳಿಗೆ ನೋಟೀಸ್ ನೀಡುವ ಮೂಲಕ ತೊಂದರೆ ನೀಡುತ್ತಿದ್ದಾರೆ ಎಂದು ಶಿಕ್ಷಕರು ಎಸ್.ಎಲ್. ಭೋಜೇಗೌಡ ಅವರಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಕೊಡಗು ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ನಾಗರಾಜ್ ತಾಲೂಕು ಘಟಕದ ಅಧ್ಯಕ್ಷ ವೆಂಕಟನಾಯಕ್ ಕಾರ್ಯದರ್ಶಿ ಆಶ್ವಿನಿ, ಪದಾಧಿಕಾರಿಗಳಾದ ಪವಿತ್ರ, ಸುರೇಶ, ಲೋಕೇಶ್, ಆಭಿಷೇಕ್ ಹಾಗೂ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರತ್ನಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹೆಚ್. ಎನ್. ಮಂಜುನಾಥ್, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಫಿಲಿಪ್‌ವಾಸ್ ಸೇರಿದಂತೆ ಇನ್ನಿತರರು ಹಾಜರಿದ್ದರು.