ಕಾಂಗ್ರೆಸ್‌ನಲ್ಲಿ ಅಸಮಾಧಾನ, ಸಂಪುಟ ಪುನಾರಚನೆ ವದಂತಿ: ಇಂದು ಪಕ್ಷದ ಶಾಸಕರೊಂದಿಗೆ ಸುರ್ಜೇವಾಲಾ ಮಾತುಕತೆ

ಬೆಂಗಳೂರು, ಜೂ. ೨೯: ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಳ್ಳುತ್ತಿರುವಂತೆಯೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಸೋಮವಾರ ಪಕ್ಷದ ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ. ಸರ್ಕಾರದ ಕಾರ್ಯವೈಖರಿ ವಿರುದ್ಧ ಇತ್ತೀಚೆಗೆ ಅನೇಕ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ನಡೆಯುತ್ತಿರುವ ಈ ಸಭೆ ಮಹತ್ವ ಪಡೆದುಕೊಂಡಿದೆ. ಸೆಪ್ಟೆಂಬರ್ ನಂತರ ರಾಜ್ಯದಲ್ಲಿ ರಾಜಕೀಯ ಕ್ರಾಂತಿ ನಡೆಯಲಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಇತ್ತೀಚೆಗೆ ನೀಡಿದ ಹೇಳಿಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸೇರಿದಂತೆ ನಾನಾ ಚರ್ಚೆಗಳಿಗೆ ಕಾರಣವಾಗಿರುವಂತೇ ಸಭೆ ನಡೆಯುತ್ತಿದೆ. ಸಂಭಾವ್ಯ ಸಂಪುಟ ಪುನಾರಚನೆ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಕುರಿತು ಪಕ್ಷದೊಳಗೆ ಮಾತುಕತೆ ನಡೆಯುತ್ತಿವೆ. ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಸಂಪುಟ ಪುನಾರಚನೆಗೆ ಒತ್ತಡ ಹೆಚ್ಚಾಗುತ್ತಿದೆ. ಸುರ್ಜೇವಾಲಾ ಸಭೆ ಕುರಿತು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಹೌದು. ನಾಳೆ ಅವರು ಬರ್ತಿದ್ದು, ಖಂಡಿತವಾಗಿಯೂ ಸಭೆ ನಡೆಯಲಿದೆ. ಪ್ರತಿಯೊಬ್ಬರಿಗೂ ಅವರೇ ಮಾಹಿತಿ ನೀಡಲಿದ್ದಾರೆ. ನನಗೂ ಈ ಮಾಹಿತಿ ಸಿಕ್ಕಿದ್ದು, ನಮ್ಮ ಎಲ್ಲಾ ಶಾಸಕರಿಗೂ ತಿಳಿಸಿದ್ದೇನೆ ಎಂದು ಹೇಳಿದರು.

ಕೊಪ್ಪಳ: ಒಂದೇ ತಟ್ಟೆಯಲ್ಲಿ ತಿಂದು ಬೆಳೆದು ಪತ್ನಿ ಜೊತೆ ಚಕ್ಕಂದ; ನಡು ರಸ್ತೆಯಲ್ಲಿ ಗೆಳೆಯನನ್ನು ಕೊಚ್ಚಿ ಕೊಂದ ವ್ಯಕ್ತಿ!

ಕೊಪ್ಪಳ, ಜೂ. ೨೯: ತನ್ನ ಪತ್ನಿ ಜೊತೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದ ಸ್ನೇಹಿತನನ್ನು ಕೊಂದು ವ್ಯಕ್ತಿಯೋರ್ವ ಪೊಲೀಸರಿಗೆ ಶರಣಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮದ ಹೊರವಲಯದಲ್ಲಿ ನಾಗರಾಜ್ ಎಂಬಾತನ ಕೊಲೆಯಾಗಿತ್ತು. ಈ ಕೊಲೆ ಮಾಡಿದ ಬಳಿಕ ಆರೋಪಿ ಹನುಮಂತಪ್ಪ ನಡುರಸ್ತೆಯಲ್ಲಿ ಕೇಕೆ ಹಾಕುತ್ತಾ ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಗಂಗಾವತಿ ತಾಲೂಕಿನ ವೀಠಲಾಪುರ ಗ್ರಾಮದ ನಿವಾಸಿಗಳಾದ ನಾಗರಾಜ್ ಹಾಗೂ ಹನುಮಂತಪ್ಪ ಇಬ್ಬರೂ ಅಕ್ಕ-ಪಕ್ಕದ ಮನೆಯಲ್ಲಿ ವಾಸವಾಗಿದ್ದರು. ಒಂದೇ ತಟ್ಟೆಯಲ್ಲಿ ಊಟ ಮಾಡಿ ಬೆಳೆದಿದ್ದವರ ಮಧ್ಯೆ ಸ್ನೇಹ ಕೂಡ ಅಷ್ಟೇ ಗಾಢವಾಗಿತ್ತು. ಏಳು ವರ್ಷಗಳ ಹಿಂದೆ ಹನುಮಂತಪ್ಪ ಮದುವೆಯಾಗಿದ್ದನು. ದಿನಕಳೆದಂತೆ ಇವರ ಬಾಳಲ್ಲಿ ನಾಗರಾಜನ ಎಂಟ್ರಿಯಾಗಿತ್ತು. ತನ್ನ ಪತ್ನಿಯ ಜೊತೆ ನಾಗರಾಜ್ ಸಲುಗೆಯಿಂದ ಇರುವುದನ್ನು ನೋಡಿದ್ದ ಹನುಮಂತಪ್ಪ ಆಕ್ರೋಶಗೊಂಡಿದ್ದನು. ತನ್ನ ಪತ್ನಿಯ ಜೊತೆ ಅಕ್ರಮ ಸಂಬAಧ ಮುಂದುವರೆಸದAತೆ ಹನುಮಂತಪ್ಪ ನಾಗರಾಜ್‌ಗೆ ಹಲವು ಬಾರಿ ಎಚ್ಚರಿಸಿದ್ದನು. ಇದ್ಯಾವುದಕ್ಕೂ ನಾಗರಾಜ್ ಕ್ಯಾರೆ ಅಂದಿರಲಿಲ್ಲ. ಹೀಗಾಗಿ ನಾಗರಾಜನ ಮೇಲೆ ಹಗೆತನ ಬೆಳೆದಿತ್ತು. ಇಂದು ಬೆಳಿಗ್ಗೆ ನಾಗರಾಜ್ ಗಂಗಾವತಿಗೆ ಹೋಗುತ್ತಿರುವ ವಿಚಾರ ತಿಳಿದ ಹನುಮಂತಪ್ಪ ತನ್ನ ಸಹೋದರ ಸಿದ್ದರಾಮೇಶ್ ಜೊತೆ ಬಂದು ಮಧ್ಯದಾರಿಯಲ್ಲಿ ಬೈಕ್‌ಗೆ ಅಡ್ಡ ಹಾಕಿ ಕೊಡಲಿಯಿಂದ ಹೊಡೆದು ನಾಗರಾಜ್‌ನನ್ನು ಕೊಲೆ ಮಾಡಿದ್ದಾನೆ.

ಮಹಿಳೆಯನ್ನು ಕೊಂದು ಕಸದ ಲಾರಿಗೆ ಹಾಕಿದ ದುಷ್ಕರ್ಮಿಗಳು

ಬೆಂಗಳೂರು, ಜೂ. ೨೯: ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ಬಯಲಿಗೆ ಬಂದಿದ್ದು, ಮಹಿಳೆಯನ್ನು ಕೊಂದು ಹಾಕಿರುವ ದುಷ್ಕರ್ಮಿಗಳು ಶವವನ್ನು ಮೂಟೆಕಟ್ಟಿ ಕಸದ ಲಾರಿಗೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಚನ್ನಮ್ಮನಕೆರೆ ಠಾಣಾ ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್ ಬಳಿ ಈ ಘಟನೆ ನಡೆದಿದ್ದು, ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ತಡರಾತ್ರಿ ಆಟೋದಲ್ಲಿ ಮಹಿಳೆಯ ಶವ ತಂದಿದ್ದ ದುಷ್ಕರ್ಮಿಗಳು, ಮೈದಾನದ ಬಳಿ ನಿಲ್ಲಿಸಿದ್ದ ಕಸದ ಲಾರಿಯಲ್ಲಿಟ್ಟು ಪರಾರಿ ಆಗಿದ್ದಾರೆ. ೩೦ ರಿಂದ ೩೫ ವರ್ಷದ ಮಹಿಳೆ ಗುರುತು ಪತ್ತೆಗಾಗಿ ಪೊಲೀಸರಿಂದ ತನಿಖೆ ನಡೆದಿದ್ದು, ಅಪರಿಚಿತ ಮಹಿಳೆ ಶವ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಶನಿವಾರ ರಾತ್ರಿ ಸ್ಥಳೀಯ ವ್ಯಕ್ತಿಯೊಬ್ಬರು ಕಸ ಹಾಕಲು ಬಂದಿದ್ದರು. ಈ ವೇಳೆ ಯುವತಿಯ ತಲೆ ಕೂದಲು ಕಾಣಿಸಿದೆ. ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಶವದ ವಿಚಾರ ಬೆಳಕಿಗೆ ಬಂದಿದೆ.

೮೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ; ಅಧ್ಯಕ್ಷರಾಗಿ ಬಾನು ಮುಷ್ತಾಕ್

ಬಳ್ಳಾರಿ, ಜೂ. ೨೯: ಡಿಸೆಂಬರ್‌ನಲ್ಲಿ ಬಳ್ಳಾರಿಯಲ್ಲಿ ನಡೆಯಲಿರುವ ೮೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಲೇಖಕಿ ಹಾಗೂ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ. ಬಳ್ಳಾರಿಯಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಷಿ, ಬಳ್ಳಾರಿಯಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ೮೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಲೇಖಕಿ ಹಾಗೂ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದರು. ಇದರೊಂದಿಗೆ ದೀಪ ಬಾಸ್ತಿ ಅವರನ್ನು ಸಮ್ಮೇಳನದಲ್ಲಿ ಗೌರವಿಸಲಾಗುತ್ತದೆ ಎಂದರು.

ಮಣ್ಣು ಕುಸಿದು ಕಾರ್ಮಿಕರ ಸಾವು : ಐವರು ಸಿಲುಕಿರುವ ಶಂಕೆ

ಜೈಪುರ, ಜೂ. ೨೯: ರಾಜಸ್ಥಾನದ ಭರತ್‌ಪುರದಲ್ಲಿ ಭಾನುವಾರ ಬೆಳಿಗ್ಗೆ ಪೈಪ್‌ಲೈನ್ ಅಗೆಯುವ ಕೆಲಸದ ಸಮಯದಲ್ಲಿ ಮಣ್ಣು ಕುಸಿದು ನಾಲ್ವರು ಕಾರ್ಮಿಕರು ಮೃತಪಟ್ಟಿದ್ದು, ಐವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಜಂಗಿ ಕಾ ನಾಗ್ಲಾ ಗ್ರಾಮದ ಬಳಿ ಪೈಪ್‌ಲೈನ್ ಹಾಕಲು ಅಗೆದ ೧೦ ಅಡಿ ಆಳದ ಕಂದಕವನ್ನು ಕೆಲವು ಕಾರ್ಮಿಕರು ತುಂಬುತ್ತಿದ್ದಾಗ ಮಣ್ಣು ಕುಸಿದಿದೆ. ಹನ್ನೆರಡು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಕಾರ್ಮಿಕರ ಕೂಗು, ಚೀರಾಟ ಕೇಳಿ, ಇತರ ಕಾರ್ಮಿಕರು ಮತ್ತು ಯೋಜನಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಪ್ರಯತ್ನಗಳನ್ನು ಪ್ರಾರಂಭಿಸಿದರು. ಆದರೆ ಮಣ್ಣಿನ ಆಳ ಮತ್ತು ಭಾರದಿಂದಾಗಿ ರಕ್ಷಣಾ ಪ್ರಯತ್ನಗಳಿಗೆ ಅಡ್ಡಿಯುಂಟಾದವು. ರಕ್ಷಣಾ ತಂಡಗಳು ಮಣ್ಣು ತೆಗೆಯಲು ಮತ್ತು ಸಿಕ್ಕಿಬಿದ್ದ ಕಾರ್ಮಿಕರನ್ನು ಹೊರತರಲು ಮಣ್ಣು ತೆಗೆಯುವ ಯಂತ್ರಗಳನ್ನು ಬಳಸಿದವು. ಮಣ್ಣಿನಡಿಯಿಂದ ಆರು ಕಾರ್ಮಿಕರನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಅವರಲ್ಲಿ ಇಬ್ಬರು ಮೃತಪಟ್ಟರು. ಇನ್ನಿಬ್ಬರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇನ್ನೂ ಐದು ಮಂದಿ ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಲ್ತುಳಿತ: ಪುರಿ ಜಿಲ್ಲಾಧಿಕಾರಿ, ಎಸ್.ಪಿ. ವರ್ಗಾವಣೆ, ಪೊಲೀಸರ ಅಮಾನತು

ಪುರಿ, ಜೂ. ೨೯: ಒಡಿಶಾದ ಜಗದ್ವಿಖ್ಯಾತ ಪುರಿ ಜಗನ್ನಾಥ ದೇಗುಲದ ಐತಿಹಾಸಿಕ ರಥಯಾತ್ರೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬAಧಿಸಿದAತೆ ಒಡಿಶಾ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಪುರಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾವಣೆ ಮಾಡಿದೆ. ಮಾತ್ರವಲ್ಲದೇ ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, "ದೇವಾಲಯದ ಕಾಲ್ತುಳಿತದ ನಂತರ ಪುರಿ ಕಲೆಕ್ಟರ್ ಸಿದ್ಧಾರ್ಥ್ ಎಸ್ ಸ್ಪೆöÊನ್ ಮತ್ತು ಎಸ್ಪಿ ಬಿನಿತ್ ಅಗರ್ವಾಲ್ ಅವರನ್ನು ವರ್ಗಾವಣೆ ಮಾಡಲಾಗಿದೆ" ಎಂದು ಹೇಳಿದ್ದಾರೆ. ಕಾಲ್ತುಳಿತದ ಹಿನ್ನೆಲೆಯಲ್ಲಿ ಪುರಿ ಡಿಸಿಪಿ ಬಿಷ್ಣು ಚರಣ್ ಪತಿ ಮತ್ತು ಪೊಲೀಸ್ ಕಮಾಂಡೆAಟ್ ಅಜಯ್ ಪಧಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.