ಕುಶಾಲನಗರ, ಜೂ. ೨೯: ಕುಶಾಲನಗರ ರೋಟರಿ ಸಂಸ್ಥೆ ರೈತ ಭವನದಲ್ಲಿ ಏರ್ಪಡಿಸಿದ್ದ ಪದಗ್ರಹಣ ಸಮಾರಂಭ ಹಾಗೂ ರೋಟರಿ ಸಂಸ್ಥೆಗೆ ೫೦ ವರ್ಷ ಪೂರೈಸಿರುವ ಹಿನ್ನೆಲೆ ‘ಹಸಿದವರಿಗೆ ಅನ್ನ’ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕುಶಾಲನಗರ ರೋಟರಿ ಸಂಸ್ಥೆ ಹಾಗೂ ಸ್ಥಳೀಯ ನಿಸರ್ಗ ಹೊಟೇಲ್ ಸಹಯೋಗದೊಂದಿಗೆ ಹಸಿದವರಿಗೆ ಅನ್ನ ಎಂಬ ವಿನೂತನ ಯೋಜನೆಯ ಅನುಷ್ಠಾನಕ್ಕೆ ಹಿರಿಯ ರೋಟರಿ ಸದಸ್ಯ ಎಸ್.ಕೆ. ಸತೀಶ್ ಚಾಲನೆ ನೀಡಿದರು.
ಜಿಲ್ಲಾ ರೋಟರಿ ಮಾಜಿ ರಾಜ್ಯಪಾಲರು ಆದ ಪದಗ್ರಹಣ ಅಧಿಕಾರಿ ಎಂ. ರಂಗನಾಥ್ ಭಟ್ ಅವರು ೨೦೨೫-೨೬ನೇ ಸಾಲಿನ ಕುಶಾಲನಗರ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ಮನು ಪೆಮ್ಮಯ್ಯ ಹಾಗೂ ಕಾರ್ಯದರ್ಶಿ ಎಚ್.ಪಿ. ಮಂಜುನಾಥ್ ಹಾಗೂ ಪದಾಧಿಕಾರಿಗಳಿಗೆ ಪ್ರತಿಜ್ಞೆ ವಿಧಿ ಬೋಧಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಪ್ರತಿಯೊಬ್ಬ ರೋಟರಿ ಸದಸ್ಯರು ಸಾಮಾಜಿಕ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು. ನಾನು, ನನ್ನ ಏಳಿಗೆ ಆದರೆ ಸಾಲದು. ಸಮುದಾಯದ ಅಭಿವೃದ್ಧಿ ಕೂಡ ಆಗಬೇಕು ಎಂಬುದೇ ರೋಟರಿ ಧ್ಯೇಯ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆ ನಡೆಸುತ್ತಿರುವ ಸಮಾಜಮುಖಿ ಕೆಲಸ ಎಲ್ಲರಿಗೂ ಮಾದರಿಯಾಗಿದೆ. ಅದೇ ರೀತಿ ಕುಶಾಲನಗರ ರೋಟರಿ ಸಂಸ್ಥೆ ೫೦ನೇ ವಸಂತಕ್ಕೆ ಕಾಲಿಟ್ಟಿರುವುದು ಹರ್ಷ ತಂದಿದೆ ಎಂದರು. ರೋಟರಿ ಸಂಸ್ಥೆ ಹಲವು ದಶಕಗಳಿಂದ ಸಾಮಾಜಿಕ ಚಟುವಟಿಕೆ ಮಾಡುವ ಮೂಲಕ ಸಂಸ್ಥೆ ಜನ ಮಾನಸದಲ್ಲಿ ಉಳಿದಿದೆ ಎಂದರು.
ರೋಟರಿ ಸಂಸ್ಥೆ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಮನು ಪೆಮ್ಮಯ್ಯ ಮಾತನಾಡಿ, ಕುಶಾಲನಗರ ರೋಟರಿ ಸುವರ್ಣ ಮಹೋತ್ಸವಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ವಿವಿಧ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಜಿಲ್ಲೆಯ ಗಡಿಭಾಗ ಕಾವೇರಿ ಸೇತುವೆ ಬಳಿ ಜೀವನದಿ ಕಾವೇರಿ ನಾಮಫಲಕ ಹಾಕಲು ಉದ್ದೇಶಿಸಲಾಗಿದೆ. ಜೊತೆಗೆ ಪ್ರವಾಸೋದ್ಯಮ ಜಿಲ್ಲೆಯಾದ ಕೊಡಗಿನಲ್ಲಿ ಪ್ಲಾಸ್ಟಿಕ್ ಬಾಟಲ್ ನಿಷೇಧಕ್ಕೆ ರೋಟರಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ. ಹಸಿದವರಿಗೆ ಅನ್ನ ಎಂಬ ವಿನೂತನ ಯೋಜನೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು. ಈ ಸಂದರ್ಭ ಸಹಾಯಕ ಗವರ್ನರ್ ಉಲ್ಲಾಸ್ ಕೃಷ್ಣ, ಮಾಜಿ ಸಹಾಯಕ ರಾಜ್ಯಪಾಲ ಡಾ. ಹರೀಶ್ ಶೆಟ್ಟಿ, ವಲಯ ಲೆಫ್ಟಿನೆಂಟ್ ಎಂ.ಎA. ಪ್ರಕಾಶ್ ಕುಮಾರ್, ಡಾ. ಎಚ್.ವಿ. ರಾಕೇಶ್ ಪಟೇಲ್, ಸ್ಥಳೀಯ ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಸಿ.ಬಿ. ಹರೀಶ್, ಮಾಜಿ ಕಾರ್ಯದರ್ಶಿ ಡಿ.ಡಿ. ಕಿರಣ್ ಪಾಲ್ಗೊಂಡಿದ್ದರು. ನೂತನ ಕಾರ್ಯದರ್ಶಿ ಎಚ್.ಪಿ. ಮಂಜುನಾಥ್ ವಂದಿಸಿದರು. ಈ ಸಂದರ್ಭ ಕುಶಾಲನಗರ ರೋಟರಿಯಲ್ಲಿ ೫೦ ವರ್ಷ ಪೂರೈಸಿದ ಹಿರಿಯ ಸದಸ್ಯ ಎಂ.ಎA. ಚಂಗಪ್ಪ ಹಾಗೂ ಎಸ್.ಕೆ. ಸತೀಶ್ ಹಾಗೂ ಮಾಜಿ ಅಧ್ಯಕ್ಷೆ ಶೋಭಾ ಸತೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕುಶಾಲನಗರ ರೋಟರಿ ಪದಾಧಿಕಾರಿಗಳು ಸೇರಿದಂತೆ ಜಿಲ್ಲೆಯ ವಿವಿಧ ರೋಟರಿ ಕ್ಲಬ್‌ಗಳ ಅಧ್ಯಕ್ಷರು ಸದಸ್ಯರು ಇದ್ದರು.