ಸಿದ್ದಾಪುರ, ಜೂ. ೨೯: ನೆಲ್ಲಿಹುದಿಕೇರಿ ಗ್ರಾಮದ ಪ್ರವಾಹಪೀಡಿತ ನದಿತೀರದ ಪ್ರದೇಶಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದರು.
ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದಕಾಡು ಹಾಗೂ ಕುಂಬಾರಗುAಡಿ ಭಾಗದ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಿಂದ ನದಿತೀರದ ನಿವಾಸಿಗಳಿಗೆ ಮಳೆಗಾಲದ ಸಂದರ್ಭ ಪ್ರವಾಹದಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಈ ಭಾಗದಲ್ಲಿ ನದಿ ತೀರದ ಬಳಿ ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಯನ್ನು ಕೂಡಲೇ ಮುಕ್ತಾಯಗೊಳಿಸಲು ಸೂಚಿಸಲಾಗುವುದೆಂದು ತಿಳಿಸಿದರು. ಇದೇ ಸಂದರ್ಭ ಗ್ರಾಮಸ್ಥರು ಮಾತನಾಡಿ, ಬೆಟ್ಟದ ಕಾಡು ಭಾಗದ ರಸ್ತೆಗಳು ತೀವ್ರ ಹದೆಗೆಟ್ಟಿದ್ದು ವಾಹನಗಳು ಸಂಚರಿಸಲು ಸಮಸ್ಯೆ ಎದುರಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಬರಡಿ ಭಾಗಕ್ಕೆ ಭೇಟಿ ನೀಡಿದ ಶಾಸಕರ ಬಳಿ ಗ್ರಾಮಸ್ಥರು ರಸ್ತೆಗಳನ್ನು ದುರಸ್ತಿ ಪಡಿಸಿ ಕೊಡುವಂತೆ ಮನವಿ ಮಾಡಿದರು. ಕುಂಬಾರ ಗುಂಡಿ ಭಾಗದಲ್ಲೂ ರಸ್ತೆಯಲ್ಲಿ ಹೊಂಡ ಗುಂಡಿಗಳಾಗಿದೆ ಎಂದು ಶಾಸಕರ ಗಮನ ಸೆಳೆದರು. ಶಾಸಕರು ಮಳೆಯಿಂದ ಹಾನಿಯಾಗಿರುವ ಮನೆಗಳನ್ನು ಪರಿಶೀಲನೆ ನಡೆಸಿದರು. ಅಲ್ಲದೆ ಇತ್ತೀಚೆಗೆ ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ಭರಡಿಲು ಕವಿತಾ ಎಂಬವರ ನಿವಾಸಕ್ಕೆ ತೆರಳಿ ಯೋಗಕ್ಷೇಮ ವಿಚಾರಿಸಿದರು. ಬಳಿಕ ಮಾತನಾಡಿದ ಡಾ. ಮಂತರ್ ಗೌಡ, ಬೆಟ್ಟದ ಕಾಡು, ಕುಂಬಾರ ಗುಂಡಿ ಮತ್ತು ಬರಡಿ ಭಾಗದ ರಸ್ತೆಗಳ ಅಭಿವೃದ್ಧಿಯನ್ನು ಮುಂದಿನ ಅನುದಾನದಲ್ಲಿ ಮಾಡಿಕೊಡಲಾಗುವುದೆಂದು ಭರವಸೆ ನೀಡಿದರು. ನದಿ ತೀರದ ನಿವಾಸಿಗಳು ಮಳೆಗಾಲದ ಸಂದರ್ಭದಲ್ಲಿ ಎಚ್ಚರದಿಂದ ಇರಬೇಕೆಂದು ಹೇಳಿದರು.
ಶಾಸಕರ ಭೇಟಿ ಸಂದರ್ಭ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ವಿ.ಪಿ. ಶಶಿಧರ್, ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷಿö್ಮ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಹಕೀಂ ಸಫಿಯ ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಸುನಿತಾ ಮಂಜುನಾಥ್, ಬಶೀರ್ ಯುವ ಕಾಂಗ್ರೆಸ್ ಮುಖಂಡ ಸಂಶುದ್ದೀನ್ ಸಾಬು ವರ್ಗೀಸ್ ಹಾಗೂ ಇನ್ನಿತರರು ಹಾಜರಿದ್ದರು.