ಶನಿವಾರಸಂತೆ, ಜೂ. ೨೮: ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನರ್ಸರಿ ವಿಭಾಗದ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಮಕ್ಕಳಿಗೆ ಅಕ್ಷರ ಅಭ್ಯಾಸ ಕಾರ್ಯಕ್ರಮವನ್ನು ಪೂಜಾ ವಿಧಿವಿಧಾನಗಳಿಂದ ನೆರವೇರಿಸಲಾಯಿತು.

ಶ್ರೀರಾಮ ಮಂದಿರದ ಅರ್ಚಕ ಸುಹಾಸ್ ಭಟ್ ಮಕ್ಕಳ ಕಲಿಕಾ ಪ್ರಗತಿಗಾಗಿ ಪೂಜಾ ವಿಧಿ ನೆರವೇರಿಸಿ, ಪೋಷಕರಿಂದ ಮಕ್ಕಳ ಅಕ್ಷರಾಭ್ಯಾಸ ಮಾಡಿಸಿ ಪ್ರಾರ್ಥಿಸಿದರು. ನಂತರ ನಡೆದ ಪೋಷಕರ ಸಭೆಯಲ್ಲಿ ಪ್ರಭಾರ ಮುಖ್ಯಶಿಕ್ಷಕಿ ಜೆಸಿಂತಾ ಸಿಕ್ವೇರಾ ಮಾತನಾಡಿ, ಪೋಷಕರು ಪಾಲಿಸಬೇಕಾದ ಜವಾಬ್ದಾರಿ ಹಾಗೂ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ಮಾತನಾಡಿ, ಶತಮಾನದ ಸರ್ಕಾರಿ ಶಾಲೆ ಉತ್ತಮ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ನುರಿತ ಅನುಭವಿ ಶಿಕ್ಷಕರು ಬೋಧಿಸುತ್ತಿದ್ದು, ಮಕ್ಕಳ ಕಲಿಕೆ ಪ್ರಗತಿಯಲ್ಲಿದೆ. ಶಿಕ್ಷಕರ ಜತೆ ಪೋಷಕರು ಕೈಜೋಡಿಸಿದರೆ ಈ ಶಾಲೆಯನ್ನು ಒಂದು ಮಾದರಿ ಶಾಲೆಯಾಗಿ ಪರಿವರ್ತಿಸಬಹುದು ಎಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚರಣ್, ಸದಸ್ಯರು, ನರ್ಸರಿ ವಿಭಾಗದ ಅಧ್ಯಕ್ಷೆ ಮಮತಾ, ಶಿಕ್ಷಕಿಯರಾದ ರಜಿಯಾ, ಶಶಿಕಲಾ, ತಾರಾ, ಲಿಪಿಕಾ ಹಾಜರಿದ್ದರು.