ಕುಶಾಲನಗರ, ಜೂ. ೨೮: ಕುಶಾಲನಗರ ಮಡಿಕೇರಿ ರಸ್ತೆಯ ಐತಿಹಾಸಿಕ ಕೆರೆಯಾಗಿರುವ ತಾವರೆ ಕೆರೆ ಯಾವುದೇ ರೀತಿಯಲ್ಲಿಯೂ ಕನಿಷ್ಟ ಮಟ್ಟದಲ್ಲಿ ಅಭಿವೃದ್ಧಿಗೊಳ್ಳದಿದ್ದರೂ ಕಲುಷಿತ ನೀರು ಸೇರಿ ವಿಶಿಷ್ಟ ನೀಲಿ ಬಣ್ಣದ ಹೂಗಳು ಅರಳಿ ಪ್ರವಾಸಿಗರ ಮನ ಸೂರೆಗೊಳ್ಳುವಂತೆ ಆಗಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.

ತಾವರೆಕೆರೆಯಲ್ಲಿ ತಾವರೆಗಳು ಮಾಯವಾಗಿದ್ದು ಇದೀಗ ಕೆರೆಯ ಕಲುಷಿತ ನೀರಿನ ಪದರದಲ್ಲಿ ಪಾಚಿ ಉತ್ಪತ್ತಿಯಾಗಿ ಆ ಮೂಲಕ ಮನಮೋಹಕ ನೀಲಿ ಬಣ್ಣದ ಹೂಗಳ ದೃಶ್ಯ ಗೋಚರಿಸುದರೊಂದಿಗೆ ತಾವರೆ ಕೆರೆ ಇದೀಗ ದಾರಿಹೋಕರಿಗೆ ಹಾಗೂ ಪ್ರವಾಸಿಗರಿಗೆ ‘ಸೆಲ್ಫಿ’ ತಾಣವಾಗಿ ಪರಿವರ್ತನೆ ಗೊಂಡಿದೆ. ಇದರಿಂದ ಈ ಮೂಲಕ ಸಾಗುವ ವಾಹನಗಳು ದಿಢೀರ್ ನಿಲುಗಡೆಗೊಂಡು ಹೆದ್ದಾರಿ ರಸ್ತೆಯಲ್ಲಿ ಇತರ ವಾಹನಗಳ ಸಂಚಾರಕ್ಕೆ ಬಹುತೇಕ ತೊಡಕು ಉಂಟಾಗುತ್ತಿರುವ ದೃಶ್ಯ ಆಗಾಗ್ಗೆ ಕಂಡು ಬರುತ್ತಿದೆ.

ಈ ಕಾರಣಕ್ಕಾಗಿ ಕುಶಾಲನಗರ ಸಂಚಾರಿ ಪೊಲೀಸರು ಬೆಳಗ್ಗಿನಿಂದ ಸಂಜೆ ತನಕ ಸಮರ್ಪಕ ಸಂಚಾರ ವ್ಯವಸ್ಥೆ ಕಾಪಾಡಲು ಪರದಾಡುತ್ತಿರುವ ದೃಶ್ಯ ಕೂಡ ಎದುರಾಗುತ್ತಿದೆ.

ಸುಮಾರು ಮೂರು ಎಕರೆಗಿಂತಲೂ ಹೆಚ್ಚು ವಿಸ್ತಾರವುಳ್ಳ ತಾವರೆಕೆರೆಗೆ ಕಳೆದ ಹಲವು ವರ್ಷಗಳಿಂದ ಸಮೀಪದ ವಾಣಿಜ್ಯ ಕಟ್ಟಡಗಳಿಂದ ಹೊರ ಸೂಸುವ ಶೌಚ ಸೇರಿದಂತೆ ಕಲುಷಿತ ತ್ಯಾಜ್ಯ ಸೇರಿ ತಾವರೆ ಗಿಡಗಳು ಮಾಯವಾಗಿ ಪಾಚಿ ಬೆಳೆದಿದ್ದು (ಇದೇ ರೀತಿಯ ದೃಶ್ಯವನ್ನು ಹುಣಸೂರು ಸಮೀಪದ ಲಕ್ಷö್ಮಣತೀರ್ಥ ನದಿಯಲ್ಲಿ ಕೂಡ ಕಾಣಬಹುದು) ಅವುಗಳಲ್ಲಿ ನೀಲಿ ಬಣ್ಣದ ಹೂಗಳು ಅರಳಿ ನಿಂತಿರುವುದು ದಾರಿ ಹೋಕರನ್ನು ಆಕರ್ಷಣೆಗೆ ಒಳಪಡುವಂತೆ ಮಾಡಿದೆ.

ಕೆರೆ ಬಳಿ ವಾಹನಗಳನ್ನು ನಿಲ್ಲಿಸಿ ಸೆಲ್ಫಿ ತೆಗೆದುಕೊಳ್ಳುವ ಪ್ರವಾಸಿಗರ ಸಂಖ್ಯೆ ಕೂಡ ವಾರಾಂತ್ಯದಲ್ಲಿ ಹೆಚ್ಚಳವಾಗುತ್ತಿದೆ. ಇದರಿಂದ ಹೆದ್ದಾರಿ ರಸ್ತೆಯಲ್ಲಿ ಸಾಗುವ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ತಿರುವು ರಸ್ತೆ ಆದ ಕಾರಣ ಅಪಾಯದ ಆತಂಕ ಎಡೆ ಮಾಡಿದೆ.

ಹೆದ್ದಾರಿ ವಾಹನ ಸವಾರರು ಪೊಲೀಸರ ಮೊರೆ ಹೋದ ಹಿನ್ನೆಲೆಯಲ್ಲಿ ಇದೀಗ ತಾವರೆಕೆರೆಯ ಬಳಿ ಸಂಚಾರಿ ಪೊಲೀಸರ ನಿಯೋಜನೆ ಮಾಡಲಾಗಿದೆ.

ಕೋಟಿಗಟ್ಟಲೆ ವೆಚ್ಚದಲ್ಲಿ ತಾವರೆಕೆರೆಯನ್ನು ಅಭಿವೃದ್ಧಿಗೊಳಿಸುವ ಚಿಂತನೆ ನೆನೆಗುದಿಗೆ ಬಿದ್ದರೂ ಪ್ರಕೃತಿ ತಾನಾಗಿಯೇ ಪ್ರವಾಸಿಗರನ್ನು ಸ್ವಯಂ ಆಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಈ ತಾಣ ದಿಢೀರ್ ಯಶಸ್ಸು ಕಂಡಿದೆ ಎಂದರೆ ತಪ್ಪಾಗಲಾರದು.!

-ಚಂದ್ರಮೋಹನ್