ಗೋಣಿಕೊಪ್ಪಲು, ಜೂ. ೨೮ : ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಆನೆ - ಮಾನವ ಸಂಘರ್ಷವನ್ನು ಹತೋಟಿಗೆ ತರುವ ಹಿನ್ನೆಲೆ ರೂ. ೨೧ ಕೋಟಿ ಅನುದಾನವನ್ನು ಸರ್ಕಾರದ ವತಿಯಿಂದ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲಿರ ಬೋಪಣ್ಣ ತಿಳಿಸಿದ್ದಾರೆ.

ಬಿ. ಶೆಟ್ಟಿಗೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸರ್ಕಾರದಿಂದ ಮಂಜೂರಾದ ಅನುದಾನದಲ್ಲಿ ಗ್ರಾಮೀಣ ಭಾಗವಾಗಿರುವ ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ರೂ. ೩.೫ ಕೋಟಿ ಅನುದಾನವನ್ನು ಮೀಸಲಿಟ್ಟು ಹಲವು ತಿಂಗಳ ಹಿಂದೆ ಕಾಮಗಾರಿ ಆರಂಭಕ್ಕೆ ಭೂಮಿಪೂಜೆಯನ್ನು ಶಾಸಕರು ನೆರವೇರಿಸಿದ್ದರು. ಆದರೆ ಇಲ್ಲಿಯ ತನಕ ಸಂಬAಧಿಸಿದ ಜಿಲ್ಲಾಡಳಿತ, ಅರಣ್ಯ ಇಲಾಖೆ ಅಧಿಕಾರಿಗಳು ಕಾಮಗಾರಿಗೆ ಚಾಲನೆ ನೀಡಿಲ್ಲ. ಕೂಡಲೇ ಕಾಮಗಾರಿಯನ್ನು ಆರಂಭಿಸಬೇಕು. ಈ ಭಾಗದಲ್ಲಿ ನಿರಂತರವಾಗಿ ಕಾಡುತ್ತಿರುವ ಕಾಡಾನೆ ಉಪಟಳವನ್ನು ತಪ್ಪಿಸುವಲ್ಲಿ ಈ ಕಾಮಗಾರಿ ಅತ್ಯಗತ್ಯ ಎಂದು ತಿಳಿಸಿದರು.

ಶಾಲೆಗೆ ಹಿಂದೇಟು : ಗ್ರಾಮದಲ್ಲಿರುವ ಬಹುತೇಕ ಶಾಲಾ ವಿದ್ಯಾರ್ಥಿಗಳು ಸ್ಥಳೀಯ ಸರ್ಕಾರಿ ಶಾಲೆಯನ್ನು ಅವಲಂಭಿಸಿದ್ದಾರೆ. ಶಾಲೆಗೆ ನಡೆದುಕೊಂಡೆ ತೆರಳಬೇಕಾಗಿದೆ. ಕಾಡಾನೆ ಉಪಟಳದಿಂದ ಬಹುತೇಕ ವಿದ್ಯಾರ್ಥಿಗಳು ಪ್ರಾಣಭಯದಿಂದಾಗಿ ಶಾಲೆಗೆ ಹೋಗುವುದನ್ನು ಬಿಟ್ಟಿದ್ದಾರೆ. ಇದರಿಂದ ಇವರ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ. ರಸ್ತೆ ಬದಿಯಲ್ಲಿಯೇ ಕಾಡಾನೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಸಹಜವಾಗಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.

ಭತ್ತದ ಗದ್ದೆಗಳು ಕಾಡಾನೆಗಳ ಉಪಟಳದಿಂದ ಪಾಳುಬಿಡಲಾಗಿದೆ. ಇದರಿಂದ ಭತ್ತದ ಕೃಷಿಗೆ ರೈತರು ಮುಂದೆ ಬರುತ್ತಿಲ್ಲ. ಕಾಡಾನೆಯ ನಿಯಂತ್ರಣವಾದಲ್ಲಿ ಭತ್ತದ ಗದ್ದೆಗಳಲ್ಲಿ ಕೆಲಸ ಆರಂಭವಾಗಲಿದೆ ಎಂದು ಹೇಳಿದ ಅವರು, ಇತ್ತೀಚೆಗೆ ಅಸ್ಸಾಂ ಕಾರ್ಮಿಕರ ಕಿರುಕುಳ ಹೆಚ್ಚಾಗುತ್ತಿದೆ. ರೈತರು, ಬೆಳೆಗಾರರು ಇವರಿಂದ ಅಂತರವನ್ನು ಕಾಯ್ದುಕೊಳ್ಳಬೇಕು. ಸೂಕ್ತವಾದ ದಾಖಲೆ ಇಲ್ಲದ ಕಾರ್ಮಿಕರನ್ನು ದೂರವಿಡಬೇಕು. ಅಗತ್ಯ ದಾಖಲೆಗಳನ್ನು ರೈತರು ಹಾಗೂ ಬೆಳೆಗಾರರು ಸಮೀಪದ ಪೊಲೀಸ್ ಠಾಣೆಗಳಿಗೆ ತಲುಪಿಸುವಂತಾಗಬೇಕು. ಮನೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಬೋಪಣ್ಣ ಮನವಿ ಮಾಡಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ್ ಕೇಚಮಯ್ಯ ಮಾತನಾಡಿ, ಬಿ. ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ದಾಖಲೆಯ ಮಳೆಯಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಳೆಯಿಂದಾಗಿ ಮುಂದೆ ಸಾಕಷ್ಟು ಸಮಸ್ಯೆಗಳು ರೈತರಿಗೆ ಎದುರಾಗಲಿವೆ. ಸಾಕಷ್ಟು ಮಳೆ ಸುರಿದಿದ್ದರೂ ಅಧಿಕಾರಿಗಳು ಇತ್ತ ರೈತರ ಕಷ್ಟವನ್ನು ಆಲಿಸುತ್ತಿಲ್ಲ ಎಂದು ಆರೋಪ ಮಾಡಿದರು.

ಕ್ಷೇತ್ರದ ಶಾಸಕರು ಈ ಭಾಗಕ್ಕೆ ನಿರೀಕ್ಷೆಗೂ ಮೀರಿ ಅನುದಾನವನ್ನು ರಸ್ತೆ ಅಭಿವೃದ್ಧಿಗಾಗಿ ನೀಡಿದ್ದಾರೆ. ರಸ್ತೆ ಕಾಮಗಾರಿಯೂ ಕೂಡ ಗುಣಮಟ್ಟದಿಂದ ಕೂಡಿತ್ತು. ಇದೀಗ ವಿಪರೀತ ಮಳೆಯಿಂದಾಗಿ ರಸ್ತೆ ಹಾಳಾಗಿದೆ. ಮುಂದೆ ಕಾಂಕ್ರಿಟ್ ರಸ್ತೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು. ಕಾಂಕ್ರಿಟ್ ರಸ್ತೆಯಿಂದ ಶಾಶ್ವತ ರಸ್ತೆ ನಿರ್ಮಾಣವಾಗಲಿದೆ. ಈ ಬಗ್ಗೆ ಜಿಲ್ಲಾಡಳಿತ ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಈ ಭಾಗದಲ್ಲಿ ವಿಪರೀತವಾಗಿ ಮಳೆ ಸುರಿಯುತ್ತಿರುವುದರಿಂದಾಗಿ ಒಂದೆಡೆ ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಇನ್ನೊಂದೆಡೆ ರಸಗೊಬ್ಬರ ಬೆಲೆ ಹೆಚ್ಚಳದಿಂದ ಈ ಭಾಗದ ಬೆಳೆಗಾರರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಫಿ ಉದುರುತ್ತಿದ್ದರೆ ಕರಿಮೆಣಸಿನ ಬಳ್ಳಿಗಳಿಗೆ ರೋಗ ಬಾಧೆ ಕಾಣಿಸಿಕೊಳ್ಳುತ್ತಿದೆ. ಇದರೊಂದಿಗೆ ವನ್ಯ ಪ್ರಾಣಿಗಳ ಉಪಟಳವನ್ನು ಎದುರಿಸುತ್ತಿದ್ದೇವೆ. ಈ ಭಾಗದಲ್ಲಿ ಹೈನುಗಾರಿಕೆಗೆ ರೈತರು ಒತ್ತು ನೀಡುತ್ತಿದ್ದಾರೆ.

ಆದರೆ ಹುಲಿಗಳ ಕಾಟದಿಂದಾಗಿ ರೈತರು ಕಂಗಾಲಾಗಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ನಿವೃತ್ತ ಯೋಧ ಕೊಲ್ಲೀರ ಸುಬ್ರಮಣಿ, ಚೇರಂಡ ರೋಶನ್, ಚೇರಂಡ ಜಗನ್, ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಪೂಣಚ್ಚಿರ ಮನೋಜ್ ಹಾಗೂ ಕೊಲ್ಲಿರ ಮಾದಪ್ಪ ಉಪಸ್ಥಿತರಿದ್ದರು. -ಹೆಚ್.ಕೆ.ಜಗದೀಶ್