ಕುಶಾಲನಗರ, ಜೂ. ೨೮: ಮುಸ್ಲಿಮರ ಸಮಸ್ಯೆಗಳಿಗೆ ಸ್ಪಂದಿಸಿದ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸು ವಂತೆ ಒತ್ತಾಯಿಸಿ ಬುಧವಾರ ಸಂಜೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕುಶಾಲನಗರ ಶಾಖೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಎಸ್.ಡಿ.ಪಿ.ಐ. ನಗರ ಅಧ್ಯಕ್ಷ ಜಕ್ರಿಯಾ ನೇತೃತ್ವದಲ್ಲಿ ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ ಸಂಘಟನೆ ಕಾರ್ಯಕರ್ತರು ಶಾಸಕ ರಮೇಶ್ ಬಂಡಿಸಿದ್ದೇಗೌಡ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದಿಂದ ಅವರನ್ನು ಕೂಡಲೇ ವಜಾ ಮಾಡಬೇಕು. ಶಾಸಕ ಸ್ಥಾನವನ್ನು ರದ್ದು ಪಡಿಸಬೇಕು ಎಂದು ಪ್ರತಿಭಟನಾ ಕಾರರು ಆಗ್ರಹಿಸಿದರು. ಈ ಸಂದರ್ಭ ಎಸ್.ಡಿ.ಪಿ.ಐ. ಸಂಘಟನೆಯ ಮುಖಂಡರು ಪಾಲ್ಗೊಂಡಿದ್ದರು.