* ಕೆರೆಗಳನ್ನು ಉಳಿಸಿ... ಕಾಡಾನೆಗಳ ಸಮಸ್ಯೆ ನೀಗಿಸಿ...! * ನಂಜರಾಯಪಟ್ಟಣ ಗ್ರಾಮಸಭೆಯಲ್ಲಿ ನಿವಾಸಿಗಳ ಅಳಲು...
ಮಡಿಕೇರಿ, ಜೂ. ೨೭: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಗ್ರಾಮಸಭೆ ಪಂಚಾಯಿತಿ ಅಧ್ಯP್ಷÀ ಚೆಟ್ಟಡ್ಕ ಎಲ್. ವಿಶ್ವ ಅವರ ಅಧ್ಯಕ್ಷತೆ ಯಲ್ಲಿ ಹೊಸಪಟ್ಟಣದ ಸಮುದಾಯ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖೆಯಲ್ಲಿನ ವಿಚಾರಗಳು ಹಾಗೂ ಸಾರ್ವಜನಿಕರಿಗೆ ದೊರಕುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಹೊಸಪಟ್ಟಣ, ವಿರೂಪಾಕ್ಷಪುರ ವ್ಯಾಪ್ತಿಯಲ್ಲಿ ಹುಲಿಗಳೆರಡು ಕಾಣಿಸಿ ಕೊಂಡು ಕಾಡಂಚಿನ ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದು ಈ ಬಗ್ಗೆ ಅರಣ್ಯಾಧಿಕಾರಿಗಳು ನಿಗಾವಹಿಸ ಬೇಕು. ಸಾರ್ವಜನಿಕರಿಗೆ ಯಾವುದೇ ಜೀವಹಾನಿ ಆಗದಂತೆ ತುರ್ತು ಕ್ರಮ ವಹಿಸುವಂತೆ ಗ್ರಾ.ಪಂ. ಸದಸ್ಯ ಆರ್.ಕೆ. ಚಂದ್ರು ಒತ್ತಾಯಿಸಿದರು.
ದಾಸವಾಳ ಗ್ರಾಮದಲ್ಲಿ ಕಾಡಾನೆ ಹಾವಳಿಗೆ ಅಳವಡಿಸಿರುವ ರೈಲ್ವೇ ಬ್ಯಾರಿಕೇಡ್ ಹಾಳಾಗಿದ್ದು ಸರಿಪಡಿಸಬೇಕೆಂದು ಗ್ರಾಮಸ್ಥರಾದ ಸಚಿನ್ ಆಗ್ರಹಿಸಿದರು.
ಮೀನುಕೊಲ್ಲಿ, ಆನೆಕಾಡು ಅರಣ್ಯ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದಲ್ಲಿ ಕಾಡು ಮರಗಳ ಹನನವಾಗುತ್ತಿದೆ. ಇಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳ ನೆರವಿನಿಂದಲೇ ನಡೆಯುತ್ತಿದೆ ಎಂದು ಮಾವಾಜಿ ರವಿ ನೇರವಾಗಿ ಆರೋಪಿಸಿದರು.
ಜಂಟಿ ಕಾರ್ಯಾಚರಣೆ ಮಾಡಿ ಮರಗಳ್ಳರನ್ನು ಸದೆಬಡಿಯಬೇಕೆಂದು ಒತ್ತಾಯಿಸಿದರು. ಈ ಆರೋಪಕ್ಕೆ ಸದಸ್ಯ ಆರ್.ಕೆ. ಚಂದ್ರು ಧ್ವನಿಗೂಡಿಸಿದರು.
ಹೊಸಪಟ್ಟಣ ಗ್ರಾಮದಲ್ಲಿ ಎರಡು ಕೆರೆಗಳಿದ್ದು ಸರ್ವೆ ನಂಬರ್ ೩೨ ರಲ್ಲಿದ್ದ ೨.೪೦ ಎಕರೆ ಜಾಗದಲ್ಲಿದ್ದ ಕೆರೆಯನ್ನು ಕಂದಾಯ ಇಲಾಖೆ ಖಾಸಗಿ ವ್ಯಕ್ತಿಗೆ ಮಂಜೂರಾತಿ ಮಾಡಿದೆ.
ಈಗ ಉಳಿದ ೩೦ ಸೆಂಟು ಜಾಗದಲ್ಲಿನ ಕೆರೆಯನ್ನು ಸಂರಕ್ಷಣೆ ಮಾಡಬೇಕು. ಸಾರ್ವಜನಿಕರ ಉಪಯೋಗಕ್ಕೆ ಕೆರೆಗೆ ಸೂಕ್ತ ರಸ್ತೆ ಒಸಗಿಸಬೇಕೆಂದು ಹೊಸಪಟ್ಟಣ ಗ್ರಾಮದ ನಿವಾಸಿ ಹೆಚ್.ಎಂ. ಸ್ವಾಮಿ ಒತ್ತಾಯಿಸಿದರು. ಮೂಲ ಸ್ಥಾನ ಬಿಟ್ಟು ಬದಲೀ ಪ್ರದೇಶಕ್ಕೆ ನಮ್ಮ ಜಾಗದ ದಾಖಲೆಗಳು ಬದಲಾಗಿದ್ದು ಇದರಿಂದ ಸಮಸ್ಯೆಗಳು ಉದ್ಭವವಾಗಿವೆ. ಮೊದಲಿಂದಲೂ ನಂಜರಾಯಪಟ್ಟಣ ಗ್ರಾ.ಪಂ.ಗೆ ತೆರಿಗೆ ಪಾವತಿಸುತ್ತಿದ್ದೇವೆ.
ಆದರೆ ನಮ್ಮ ಸರ್ವೆ ನಂಬರ್ ೪೯/೧ ರ ಜಾಗ ರಸೂಲ್‌ಪುರದಲ್ಲಿದ್ದು ಇದನ್ನು ಗುಡ್ಡೆಹೊಸೂರು ಗ್ರಾ.ಪಂ.ಗೆ ಸೇರಿಸಲಾಗಿದೆ. ನಮ್ಮನ್ನು ನಂಜರಾಯ ಪಟ್ಟಣ ಗ್ರಾ.ಪಂ.ಗೆ ವರ್ಗಾಯಿಸಿ ನಮಗೆ ನ್ಯಾಯ ಒದಗಿಸಿ ಎಂದು ಕಬ್ಬಿನಗದ್ದೆ ನಿವಾಸಿ ಮಣಿಕಂಠ, ವರುಣ್, ರಾಜಾ, ಲೋಕೇಶ್ ಮೊದಲಾದವರು ಸಭೆಯಲ್ಲಿ ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಸಭಾಧ್ಯಕ್ಷ ವಿಶ್ವ, ರಸೂಲ್ ಪುರದ ಏಳು ಕುಟುಂಬಗಳ ಸಮಸ್ಯೆಗಳನ್ನು ತಹಶೀಲ್ದಾರ್ ಗಮನಕ್ಕೆ ತಂದು ಪ್ರತ್ಯೇಕ ಸಭೆ ಮಾಡಿ ಶೀಘ್ರದಲ್ಲಿಯೇ ಪರಿಹಾರ ಕಾಣಲಾಗುವುದು ಎಂದರು. ಪಂಚಾಯಿತಿ ಉಪಾಧ್ಯಕ್ಷೆ ಪಿ.ಎಸ್. ಕುಸುಮಾ, ಸದಸ್ಯರಾದ ಅಯ್ಯಂಡ್ರ ಲೋಕನಾಥ್, ಜೆ.ಟಿ. ಜಾಜಿ, ಎಸ್.ಎಂ. ಸಮೀರ, ಮಾವಾಜಿ ರಕ್ಷಿತ್, ಗಿರಿಜಮ್ಮ ಇದ್ದರು.
ಕಾರ್ಯದರ್ಶಿ ಎಂ.ಆರ್. ಶೇಷಗಿರಿ, ಗ್ರಾಮ ಲೆಕ್ಕಿಗರಾದ ಸೋನು, ಸಚಿನ್, ಚೆಸ್ಕಾಂ ಅಭಿಯಂತರ ಸೋಮೇಶ್, ನರೇಗಾ ಅಭಿಯಂತರ ವಿಷ್ಣು, ಗ್ರಾಮೀಣಾಭಿವೃದ್ಧಿ ಇಲಾಖೆ ಅಭಿಯಂತರ ಚಿದಾನಂದ, ಅರಣ್ಯ ಇಲಾಖೆ ಮೀನುಕೊಲ್ಲಿ ವಿಭಾಗದ ಸಚಿನ್ ನಿಂಬಾಳ್ಕರ್, ಆನೆಕಾಡು ವಿಭಾಗದ ದೇವಯ್ಯ, ಆಹಾರ ಇಲಾಖೆಯ ಅಧಿಕಾರಿ ಸ್ವಾತಿ ಇದ್ದರು.
ಈ ಸಂದರ್ಭ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಾದ ಭಾಗೀರಥಿ, ಲಲಿತಾ ಅವರನ್ನು ಪಂಚಾಯಿತಿ ವತಿಯಿಂದ ಸನ್ಮಾನಿಸ ಲಾಯಿತು. ನೋಡಲ್ ಅಧಿಕಾರಿ ಯಾಗಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸ್ವಾಮಿ ಕಾರ್ಯನಿರ್ವಹಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎಸ್. ರಾಜಶೇಖರ್ ಸ್ವಾಗತಿಸಿ, ಆಶಾ ಕಾರ್ಯಕರ್ತೆ ರಾಣಿ ಪ್ರಾರ್ಥಿಸಿದರು.