ಚೆಟ್ಟಳ್ಳಿ, ಜೂ. ೨೭: ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಕೊಡಗಿನ ವಾತಾವರಣಕ್ಕೆ ಸೂಕ್ತವೆನಿಸುವ ವಿದೇಶಿ ಹಣ್ಣಿನ ತಳಿಗಳನ್ನು ಎಕ್ಷೋಟಿಕ್ ಫ್ರೂಟ್ ಬ್ಲಾಕ್‌ಗಳಲ್ಲಿ ಅಭಿವೃದ್ಧಿಪಡಿಸ ಲಾಗುತ್ತಿದೆ. ಕಳೆದ ವಾರ ಕೇಂದ್ರದಲ್ಲಿ ನಡೆದ ವೈವಿಧ್ಯತಾ ಮೇಳದಲ್ಲಿ ವಿದೇಶಿ ತಳಿಯ ಬ್ಲಾಕ್‌ಗಳನ್ನು ಉದ್ಘಾಟಿಸಲಾಯಿತು.

ವಿವಿಧ ದೇಶಗಳ ಹಣ್ಣುಗಳಾದ ೧೩ ವಿಧದ ರಾಂಬೂಟಾನ್, ೧೫ ವಿಧದ ಲಾಂಗಾನ್, ೫ ವಿಧದ ಡೂರೈನ್, ೨೦ ವಿಧದ ಅವಕಾಡೋ, ಅಭಿಯು, ಲುವಿಲುವಿ, ಜಬೋಟಿಕಾ ಸೇರಿದಂತೆ ಒಟ್ಟು ೫೦೦ ವಿದೇಶಿ ಹಣ್ಣಿನ ಗಿಡಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಹೊಸ ಬೆಳೆಗಳ ಪ್ರದೇಶ ವಿಸ್ತರಣೆಯಾಗುತ್ತಿರುವ ಈ ಹಂತದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು, ಸಂಶೋಧನಾ ಕೇಂದ್ರಗಳು ವಿದೇಶಿ ಹಣ್ಣುಗಳ ಕೃಷಿಯ ಅಧ್ಯಯನ ಮಾಡಿ ನಮ್ಮ ವಾತಾವರಣದಲ್ಲಿ ಅವುಗಳನ್ನು ಬೆಳೆಯಬಹುದಾದ ಅವಕಾಶ, ಸಾಮರ್ಥ್ಯ, ದೌರ್ಬಲ್ಯ ಹಣ್ಣುಗಳ ಮಾರುಕಟ್ಟೆ ಸಾಧ್ಯತೆ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿವೆ.

ಮಾರುಕಟ್ಟೆಯಲ್ಲಿ ವಿವಿಧ ತಳಿಯ ಹಣ್ಣಿನ ಗಿಡಗಳು ದೊರೆಯುತಿದ್ದು, ಕೊಡಗಿನ ವಾತಾವರಣಕ್ಕೆ ಸೂಕ್ತವಾದ ತಳಿಗಳನ್ನು ಆಯ್ಕೆಮಾಡಿಕೊಳ್ಳುವುದರ ಜೊತೆಗೆ ಕೃಷಿಯಲ್ಲಿ ವೈವಿಧ್ಯತೆಯನ್ನು ಉತ್ತೇಜಿಸಲು ಕೇಂದ್ರದಲ್ಲಿ ವಿವಿಧ ಹಣ್ಣಿನ ತಳಿಗಳ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಕೇಂದ್ರದ ಮುಖ್ಯಸ್ಥ ಡಾ. ಮುರುಳೀಧರ್ ಹಾಗೂ ತಜ್ಞರಾದ ಡಾ. ನಯನ್ ದೀಪಕ್ ಹೇಳುತ್ತಾರೆ.