ನಾಪೋಕ್ಲು, ಜೂ. ೨೫: ಮನೆ, ವ್ಯವಹಾರ, ಬೋಧನೆ ಮತ್ತು ಜೀವನದ ಎಲ್ಲ ಕ್ಷೇತ್ರಗಳಲ್ಲೂ ನಾವು ಸ್ವಚ್ಛ ಕನ್ನಡವನ್ನು ಬಳಸಬೇಕು. ಹಾಗೆ ಬಳಸಿದರೆ ಮಾತ್ರ ಕನ್ನಡ ಉಳಿದೀತು. ಮಾತೃಭಾಷೆಯ ಗೌರವ ಉಳಿಸುವಲ್ಲಿ ತಾಯಂದಿರ ಪಾತ್ರ ಮಹತ್ವ ಪೂರ್ಣವಾದುದು ಎಂದು ಮಡಿಕೇರಿ ಆಕಾಶವಾಣಿ ಕೇಂದ್ರದ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಅವರು ನುಡಿದರು.
ಕೊಡಗಿನ ಸಮರ್ಥ ಕನ್ನಡಿಗರು ಬಳಗದ ವತಿಯಿಂದ ಮಡಿಕೇರಿ ಲಯನ್ಸ್ ಸಭಾಂಗಣದಲ್ಲಿ ಬಾನುಲಿ ಸೇವೆಗಾಗಿ ತನಗೆ ನೀಡಿದ ಗೌರವ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು. "ಕನ್ನಡ ಇಂದು ಉಳಿದಿರುವುದು ತಾಯಂದಿರಿAದ. ಇಂಥ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಮಹಿಳೆಯರು ತಮ್ಮ ಹಲವು ಬೇನೆ ಬೇಸರಗಳನ್ನು ಮರೆಯುತ್ತಾರೆ. ಜೊತೆಗೆ ನಾಡು ನುಡಿಯ ಮಹತ್ವ್ವದ ಬಗ್ಗೆ ಅರಿವು ಬೆಳೆಸಿಕೊಳ್ಳಲು, ಅದು ಮನೆ ಮಕ್ಕಳಲ್ಲಿ ಹಂಚಿ ಮುಂದುವರಿಯಲು ಕಾರಣ ರಾಗುತ್ತಿದ್ದಾರೆ. ಇದು ಸಣ್ಣ ಕೆಲಸವಲ್ಲ" ಎಂದು ಸಂಪಾಜೆ ನುಡಿದರು.
ಮೂರು ದಶಕಗಳ ರೇಡಿಯೋ ಸೇವೆಗಾಗಿ ಸುಬ್ರಾಯ ಸಂಪಾಜೆ ಅವರನ್ನು ಪತ್ನಿ ಸಹಿತ ಸನ್ಮಾನಿಸಿದ ಹಿರಿಯರಾದ ಅಂಬೆಕಲ್ಲು ಸುಶೀಲ ಕುಶಾಲಪ್ಪ ಅವರು ಮಾತನಾಡಿ, "ಜಿಲ್ಲೆಯ ಮೂಲೆಮೂಲೆಗಳಲ್ಲಿರುವ ಪ್ರತಿಭೆಗಳಿಗೆ ಆಕಾಶವಾಣಿ ಮಾಧ್ಯಮ ಹೊರ ಜಗತ್ತಿನ ಬೆಳಕು ಕಾಣಿಸಿದೆ. ಈ ಕೆಲಸ ನಿರಂತರ ನಡೆಯುತ್ತಿರಬೇಕು" ಎಂದು ಮೆಚ್ಚು ನುಡಿಯಾಡಿದರು.
ಚಿತ್ರಾ ಆರ್ಯನ್ ಅವರು ಪ್ರಾರ್ಥಿಸಿದರು. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಹಾಗೂ ಸಮರ್ಥ ಕನ್ನಡಿಗರು ಬಳಗದ ಸಕ್ರಿಯ ಸದಸ್ಯೆ ಕಡ್ಲೇರ ತುಳಸಿ ಮೋಹನ್ ಅವರು ಅತಿಥಿಗಳನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಸಮರ್ಥ ಕನ್ನಡಿಗರು ಬಳಗದಿಂದ ಏರ್ಪಡಿಸಿದ್ದ ಬಹುಭಾಷಾ ಗೀತ ಗಾಯನ ಎಲ್ಲರ ಮನ ಸೆಳೆಯಿತು. ಬಳಗದ ಪ್ರಧಾನ ಸಂಚಾಲಕಿ ಹಾಗೂ ಸನ್ಮಾನ ಕಾರ್ಯಕ್ರಮದ ಸಂಯೋಜಕಿ ಕೆ. ಜಯಲಕ್ಷಿö್ಮ ಸ್ವಾಗತಿಸಿ, ವಂದಿಸಿದರು.