ಕುಶಾಲನಗರ, ಜೂ. ೨೧: ಕರ್ನಾಟಕ ರಾಜ್ಯ ನೇಕಾರ ಸಮುದಾಯ ಒಕ್ಕೂಟದ ಮೂಲಕ ರಾಜ್ಯದ ೩೧ ಜಿಲ್ಲೆಗಳು ಹಾಗೂ ೨೨೪ ವಿಧಾನಸಭಾ ಕ್ಷೇತ್ರಗಳಲ್ಲೂ ನೇಕಾರ ಸಮುದಾಯ ನಿಖರ ಮಾಹಿತಿ ತಿಳಿಯಲು ಪ್ರತ್ಯೇಕವಾಗಿ ಜಾತಿ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಒಕ್ಕೂಟದ ರಾಜ್ಯ ಅಧ್ಯಕ್ಷ ಬಿ.ಎಸ್. ಸೋಮಶೇಖರ್ ಹೇಳಿದರು.

ಕುಶಾಲನಗರ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಾಂತರಾಜು ನೇತೃತ್ವದ ಶಾಶ್ವತ ಆಯೋಗವು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿರುವ ಜಾತಿ ಗಣತಿ ವರದಿಯನ್ನು ನೇಕಾರ ಸಮುದಾಯ ಸ್ವಾಗತಿಸುತ್ತದೆ.

ಆದರೆ ರಾಜ್ಯದಲ್ಲಿರುವ ನೇಕಾರ ಸಮುದಾಯಗಳ ಜನಸಂಖ್ಯೆಯನ್ನು ದಾಖಲಿಸುವಲ್ಲಿ ಆಯೋಗವು ಕೈಗೊಂಡಿರುವ ಕ್ರಮ ಅವೈಜ್ಞಾನಿಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

೨೦೧೪-೧೫ನೇ ಸಾಲಿನಲ್ಲಿ ಆಯೋಗವು ಕೈಗೊಂಡ ಸಮೀಕ್ಷೆ ಪ್ರಕಾರ ೯.೩೦ ಲಕ್ಷ ಎಂದು ವರದಿ ನೀಡಿದೆ.

ಆದರೆ ರಾಜ್ಯದ ೨೨೪ ಕ್ಷೇತ್ರಗಳಲ್ಲಿ ನೇಕಾರ ಸಮುದಾಯ ೫೫ ಲಕ್ಷ ಜನಸಂಖ್ಯೆ ಇದೆ. ಆಯೋಗ ಸಲ್ಲಿಸಿದ ವರದಿ ತಪ್ಪಾಗಿದೆ. ಈ ಹಿನ್ನೆಲೆಯಲ್ಲಿ ನೇಕಾರ ಸಮುದಾಯ ನಿಖರ ಜನಸಂಖ್ಯೆ ತಿಳಿದು ದಾಖಲಿಸುವ ಮೂಲಕ ಸರ್ಕಾರಕ್ಕೆ ಒಕ್ಕೂಟದಿಂದ ವರದಿ ಸಲ್ಲಿಸಲಾಗುತ್ತದೆ ಎಂದರು.

ನೇಕಾರ ಸಮುದಾಯಗಳ ಮಠಾಧೀಶರು, ರಾಜಕೀಯ ಮುಖಂಡರು, ಸಮಾಜದ ಗಣ್ಯರುಗಳು ಸುಮಾರು ಐದಾರು ಸಭೆಗಳನ್ನು ನಡೆಸಿ ಮರು ಸಮೀಕ್ಷೆಗಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದರು.

ಇದಕ್ಕಾಗಿ ಪ್ರತ್ಯೇಕವಾದ ಆ್ಯಪ್ ಹಾಗೂ ಅರ್ಜಿ ನಮೂನೆ ಕೂಡ ಸಿದ್ಧಪಡಿಸಲಾಗುತ್ತಿದೆ. ನೇಕಾರ ಸಮುದಾಯವು ತನ್ನ ಸಮುದಾಯದ ನಿಖರ ಜನಸಂಖ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ತನ್ನದೇ ಆದ "ಆ್ಯಪ್" ಅನ್ನು ಸಿದ್ಧಪಡಿಸಿದೆ. ಈ ಮೂಲಕ ರಾಜ್ಯದಲ್ಲಿರುವ ನೇಕಾರರು ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರುಗಳ ಮಾಹಿತಿಯನ್ನು ಒದಗಿಸಲು ಅನುಕೂಲ ಕಲ್ಪಿಸಲಾಗಿದೆ.

ಕೊಡಗು ಜಿಲ್ಲಾ ನೇಕಾರ ಸಂಘದ ಅಧ್ಯಕ್ಷ ಟಿ.ಕೆ. ಪಾಂಡುರAಗ ಮಾತನಾಡಿ, ಕೊಡಗು ಜಿಲ್ಲೆಯಲ್ಲಿರುವ ದೇವಾಂಗ, ಕುರುಹಿನ ಶೆಟ್ಟಿ, ತಮಿಳು ದೇವಾಂಗ, ಪಟ್ಟಸಾಲಿ ಸಮಾಜ ಮತ್ತಿತರರು ತಮ್ಮ ಮಾಹಿತಿಯನ್ನು ಜಿಲ್ಲಾ ಸಮಿತಿಗೆ ನೀಡಬೇಕು ಎಂದರು.ರಾಜ್ಯ ಸಮಿತಿ ಆದೇಶದ ಮೇರೆ ಜಿಲ್ಲಾ ಹಾಗೂ ತಾಲೂಕು, ಹೋಬಳಿ ಸಮಿತಿಯ ಪದಾಧಿಕಾರಿಗಳು ತಮ್ಮ ಮನೆಗಳಿಗೆ ಭೇಟಿ ನೀಡಿದ ಸಂದರ್ಭ ತಮ್ಮ ಕುಟುಂಬ ವರ್ಗದ ಸಂಪೂರ್ಣ ಮಾಹಿತಿಯನ್ನು ನೀಡುವ ಮೂಲಕ ಜಾತಿಗಣತಿ ಸಮೀಕ್ಷೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ನೇಕಾರ ಸಮುದಾಯ ಒಕ್ಕೂಟದ ಉಪಾಧ್ಯಕ್ಷ ಎನ್. ಜಗದೀಶ್, ಪ್ರಧಾನ ಕಾರ್ಯದರ್ಶಿ ಶಿವಪ್ಪಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಉಮಾ ಜಗದೀಶ್ ಮುಖಂಡರಾದ ದಯಾನಂದ ಶೆಟ್ಟಿ, ರಾಜ್ಯ ನಿರ್ದೇಶಕರಾದ ಡಿ.ಕೆ. ತಿಮ್ಮಪ್ಪ, ಡಿ.ವಿ. ಜಗದೀಶ್ ಸವಿ ರಾಜೇಶ್, ಟಿ.ವಿ. ಪ್ರಕಾಶ್, ಗಜಾನನ, ರಮೇಶ್, ರಾಮಪ್ರಸಾದ್, ಪದ್ಮ ಮಹೇಶ್ ಇದ್ದರು.