ಮಡಿಕೇರಿ, ಜೂ. ೨೧: ಮಕ್ಕಳಲ್ಲಿ ಉಂಟಾಗುವ ಅತಿಸಾರ ಭೇದಿ ತಡೆಯುವಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ‘ಆರೋಗ್ಯ ಶಿಕ್ಷಣ’ ಮೂಲಕ ಜಿಲ್ಲೆಯಾದ್ಯಂತ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅತಿಸಾರ ಭೇದಿ ತಡೆಯುವಿಕೆ ಅಭಿಯಾನ ಕುರಿತು ಮಾಹಿತಿ ಪಡೆದು ಅವರು ಮಾತನಾಡಿದರು.

ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಪದೇ ಪದೇ ಅತಿಸಾರ ಭೇದಿ ಉಂಟಾಗುತ್ತದೆ. ಆದ್ದರಿಂದ ಅತಿಸಾರ ಭೇದಿ ತಡೆಯುವಲ್ಲಿ ಪ್ರತಿಯೊಬ್ಬರಲ್ಲಿಯೂ ಅರಿವು ಅಗತ್ಯ.

ಅತಿಸಾರ ಭೇದಿಯ ನಿಯಂತ್ರಣ ಮತ್ತು ತಡೆಯುವಿಕೆ ಕುರಿತು ಸ್ವಚ್ಛತೆ, ಪರಿಸರ ಶುಚಿತ್ವಕ್ಕೆ ಗಮನಹರಿಸಬೇಕು. ಓಆರ್‌ಎಸ್ ಮತ್ತು ಜಿಂಕ್ ಲಭ್ಯತೆ ಕಾಯ್ದುಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಅತಿಸಾರ ಭೇದಿ ತಡೆಗಟ್ಟುವಿಕೆ ಅಭಿಯಾನವು ಈಗಾಗಲೇ ಆರಂಭವಾಗಿದ್ದು, ಜುಲೈ, ೩೧ ರವರೆಗೆ ಸಮುದಾಯ ಮತ್ತು ಗ್ರಾಮೀಣ ಮಟ್ಟದಲ್ಲಿ ಜರುಗಲಿದೆ ಎಂದು ತಿಳಿಸಿದರು.

ಅತಿಸಾರ ಭೇದಿ ತಡೆಗಟ್ಟುವಿಕೆ ಅಭಿಯಾನದಡಿ ಸ್ವಚ್ಛತೆ ಇಲ್ಲದ ಪ್ರದೇಶಗಳಿಗೆ ಭೇಟಿ ನೀಡಿ ಅರಿವು ಮೂಡಿಸುವುದು, ಅಲೆಮಾರಿ ಜನರು ಹಾಗೂ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುವ ಜನರಿಗೆ ಅರಿವು ಮೂಡಿಸಲಾಗುತ್ತದೆ ಎಂದರು.

ಕೈತೊಳೆಯುವ ವೈಜ್ಞಾನಿಕ ವಿಧಾನವನ್ನು ಶಾಲಾ ಮಕ್ಕಳಿಗೆ ತಿಳಿಸುವಲ್ಲಿ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುತ್ತದೆ. ಭಿತ್ತಿಪತ್ರ ಹಾಗೂ ಗೋಡೆ ಬರಹಗಳ ಮೂಲಕ ಅರಿವು ಮೂಡಿಸುವುದು, ಶಾಲೆಗಳಲ್ಲಿ ಬೆಳಗ್ಗಿನ ಪ್ರಾರ್ಥನೆಯ ನಂತರ ಕೈತೊಳೆಯುವ ಮಹತ್ವ ಮತ್ತು ಲಾಭ ಕುರಿತು ಮಾಹಿತಿ ನೀಡಲಾಗುತ್ತದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ಅವರು, ಶಿಕ್ಷಣ ಬಗ್ಗೆ ವಸ್ತು ಪ್ರದರ್ಶನ ಏರ್ಪಡಿಸುವುದು, ತಾಯಂದಿರೊAದಿಗೆ ಸಮಾಲೋಚನೆ ಮತ್ತು ಪ್ರಾತ್ಯಕ್ಷಿಕೆ ಮಾಡುವುದು. ಓಆರ್‌ಎಸ್ ದ್ರಾವಣ ತಯಾರಿಕೆ ಮತ್ತು ಜಿಂಕ್ ಮಾತ್ರೆ ಬಳಕೆ, ಸ್ತನ್ಯಪಾನ ಸೇರಿದಂತೆ ಮುಂದುವರಿದ ಆಹಾರವನ್ನು ಉತ್ತೇಜಿಸುವ ಸಂಬAಧ ಅಂಗನವಾಡಿಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಂಗಧಾಮಪ್ಪ ಅವರು ಅತಿಸಾರ ಭೇದಿ ತಡೆಯುವ ಸಂಬAಧ ಶಾಲಾ ಮಕ್ಕಳಲ್ಲಿ ಜಾಥಾ ಏರ್ಪಡಿಸಿ ಅರಿವು ಮೂಡಿಸಲಾಗುತ್ತದೆ. ಶೌಚಾಲಯಗಳ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಪೌರಾಯುಕ್ತರಾದ ಎಚ್.ಆರ್. ರಮೇಶ್ ಮಾಹಿತಿ ನೀಡಿ ನಗರ ಪ್ರದೇಶಗಳಲ್ಲಿ ಸುರಕ್ಷಿತ ನೀರು ಪೂರೈಕೆ ಬಗ್ಗೆ ಗಮನಹರಿಸಲಾಗಿದೆ ಎಂದರು.

ಜಿಲ್ಲಾ ಸರ್ಜನ್ ಡಾ.ನಂಜುAಡಯ್ಯ ಅವರು ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಮತ್ತು ವೈದ್ಯರು ಪಾಲ್ಗೊಳ್ಳುವುದು. ಅತಿಸಾರ ಭೇದಿ ನಿಯಂತ್ರಣ ಅಭಿಯಾನ ಕುರಿತು ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಸೆಷನ್ ನಡೆಸುವುದು. ಗ್ರಾಮೀಣ ಆರೋಗ್ಯ ತರಬೇತಿ ಮೂಲಕ ಸಮುದಾಯ ಜಾಗೃತಿ ಕಾರ್ಯಕ್ರಮ ಆಯೋಜಿಸುವುದು. ಸಮುದಾಯದಲ್ಲಿ ಮೇಲ್ವಿಚಾರಣೆ ಹಾಗೂ ನಿರ್ವಹಣೆ ಮಾಡುವುದು ಹೀಗೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬಳಿಕ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಜನವರಿಯಿಂದ ಇಲ್ಲಿಯವರೆಗೆ ೩ ಪ್ರಕರಣ ಕಂಡು ಬಂದಿದ್ದು, ಮೂವರು ಸಹ ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶರತ್ ಕುಮಾರ್, ತಾಲೂಕು ವೈದ್ಯಾಧಿಕಾರಿಗಳಾದ ಡಾ.ಚೇತನ್ (ಮಡಿಕೇರಿ), ಡಾ.ಯತಿರಾಜು (ವೀರಾಜಪೇಟೆ), ಡಾ.ಇಂದೂಧರ (ಸೋಮವಾರಪೇಟೆ), ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ಪ್ರತಿನಿಧಿ ಡಾ.ಶ್ಯಾಮ್ ಅಪ್ಪಣ್ಣ, ಪರಿಸರ ಅಧಿಕಾರಿ ರಘುರಾಮ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.