ಶನಿವಾರಸಂತೆ, ಜೂ. ೨೧: ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಇರುವ ಕಾರ್ಯದರ್ಶಿಯವರ ವಸತಿ ಗೃಹದ ಮುಂಭಾಗ ಮಹಿಳೆಯೊಬ್ಬರು ತರಕಾರಿ ಮಾರಾಟಕ್ಕೆ ಅನಧಿಕೃತವಾಗಿ ಶೆಡ್ ನಿರ್ಮಿಸಿದ್ದು ಗ್ರಾಮ ಪಂಚಾಯಿತಿ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಶೆಡ್ ತೆರವುಗೊಳಿಸಲು ಮುಂದಾಯಿತು. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್, ಉಪಾಧ್ಯಕ್ಷ ಸರ್ದಾರ್ ಅಹಮ್ಮದ್, ಸದಸ್ಯ ಎಸ್.ಎನ್. ರಘು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ಗ್ರಾಮ ಲೆಕ್ಕಾಧಿಕಾರಿ ವಸಂತ್ ಕುಮಾರ್, ಸಿಬ್ಬಂದಿ ಭೇಟಿ ನೀಡಿ ಅಂಗಡಿ ತೆರವುಗೊಳಿಸಲು ಸಿದ್ಧರಾದಾಗ ತರಕಾರಿ ವ್ಯಾಪಾರಿ ಗೀತಾ ಮತ್ತು ಪಂಚಾಯಿತಿಯವರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಮಣಿದ ತರಕಾರಿ ವ್ಯಾಪಾರಿ ಗೀತಾ ಇನ್ನೆರೆಡು ದಿನಗಳಲ್ಲಿ ತಾವೇ ಅಂಗಡಿ ತೆರವುಗೊಳಿಸುವುದಾಗಿ ತಿಳಿಸಿದರು. ಪಂಚಾಯಿತಿ ಮಾನವೀಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಪ್ರತ್ಯೇಕ ಜಾಗ ನಿಗದಿಪಡಿಸಿ ವ್ಯಾಪಾರಿ ಗೀತಾರಿಗೆ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು ಅನಧಿಕೃತ ಅಂಗಡಿ ತೆರವು ಕಾರ್ಯ ಸ್ಥಗಿತಗೊಳಿಸಲಾಯಿತು.