ಮಡಿಕೇರಿ, ಜೂ. ೨೧: ಸುಸ್ಥಿರ ಸಮಾಜ ಮತ್ತು ಸಬಲೀಕರಣವನ್ನು ಧ್ಯೇಯವಿಟ್ಟು ಕಾರ್ಯನಿರ್ವಹಿಸುತ್ತಿರುವ ಸಿದ್ರಾ ಫೌಂಡೇಶನ್‌ನ ವಾರ್ಷಿಕ ಸಭೆಯು ಕೊಡಗು ಮೇಕೇರಿಯಲ್ಲಿ ನಡೆಯಿತು.

ವಾರ್ಷಿಕ ಸಭೆ ಹಾಗೂ ನಾಯಕತ್ವ ತರಬೇತಿಯ ಅಧ್ಯಕ್ಷತೆಯನ್ನು ಸಿದ್ರಾ ಫೌಂಡೇಶನ್ ಸಂಸ್ಥಾಪಕರೂ ಮುಖ್ಯ ನಿರ್ದೇಶಕರೂ ಆದ ಶಿಹಾಬುದ್ದೀನ್ ನೂರಾನಿ ವಹಿಸಿದ್ದರು. ಸಭೆಯ ಮುಖ್ಯ ಅತಿಥಿಯಾಗಿ ಖ್ಯಾತ ಚಿಂತಕ ಹಾಗೂ ವಾಗ್ಮಿಗಳಾದ ಇಬ್ರಾಹಿಂ ಸಖಾಫಿ ಪುಝಕ್ಕಾಟ್ಟಿರಿ ಆಗಮಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಆಧುನಿಕ ಕಾಲದಲ್ಲಿನ ಸಮಾಜ ಸೇವೆ ಮತ್ತು ನೈತಿಕ ಶಿಕ್ಷಣದ ಅವಶ್ಯಕತೆ ಹಾಗೂ ಮಹತ್ವಗಳ ಬಗ್ಗೆ ಆಳವಾಗಿ ಬೋಧಿಸಿದರು. ದಿನನಿತ್ಯ ಹಸಿವನ್ನು ನೀಗಿಸುವ ಸಿದ್ರಾ ಫೌಂಡೇಶನ್ ಶಿಕ್ಷಣವನ್ನು ಕೊಟ್ಟು ಪ್ರಬುದ್ಧ ಸಮಾಜವನ್ನು ನಿರ್ಮಿಸಿ ದೇಶ ಸೇವೆಯಲ್ಲಿ ತೊಡಗಿಕೊಂಡ ಬಗ್ಗೆ ಶ್ಲಾಗಿಸಿದರು. ಸೇರಿದ್ದ ೪೦ ರಷ್ಟು ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿನಿಧಿಗಳಿಗೆ ವಿಶೇಷ ತರಬೇತಿಯನ್ನು ನೀಡಲಾಯಿತು.

ನಿರ್ದೇಶಕ ಉನೈಸ್ ನೂರಾನಿ ಹಾಗೂ ಸಂಘದ ವಿವಿಧ ರಾಜ್ಯಗಳ ನಾಯಕರು, ಪದಾಧಿಕಾರಿಗಳು ಹಾಗೂ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಮುಂದಿನ ವರ್ಷಾವಧಿಯಲ್ಲಿ ವಿವಿಧ ಪ್ರದೇಶಗಳಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿನ ಸೇವೆಯನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆ ಚರ್ಚಿಸಿ ಹಲವಾರು ಪರಿಣಾಮಕಾರಿ ಯೋಜನೆಗಳಿಗೆ ರೂಪುರೇಷೆ ತಯಾರಿಸಲಾಯಿತು

ಸಿದ್ರಾ ಫೌಂಡೇಶನ್ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ೨೦೨೫-೨೬ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಪುನರ್ ರಚಿಸಿ ಅಧಿಕೃತವಾಗಿ ಘೋಷಿಸಲಾಯಿತು. ಪ್ರಧಾನ ನಿರ್ದೇಶಕರಾಗಿ ಅಬ್ದುಲ್ ಶುಕೂರ್ ನುರಾನಿ ಅಸ್ಸಖಾಫಿ ಪುಣೆ, ಕಾರ್ಯನಿರ್ವಾಹಕ ನಿರ್ದೇಶಕರಾಗಿ ಫಾರೂಖ್ ನೂರಾನಿ ಅಸ್ಸಖಾಫಿ ಬಾಗಲಕೋಟೆ, ಮುಖ್ಯ ಕಾರ್ಯನಿರ್ವಾಹಕರಾಗಿ ಶರೀಫ್ ನೂರಾನಿ ಸಖಾಫಿ ಪುಣೆ ಹಾಗೂ ಸಿ.ಎಫ್.ಓ ಆಗಿ ಶಮೀರ್ ನೂರಾನಿ ಸಖಾಫಿ ಬಾಗಲಕೋಟೆಯವರನ್ನು ಆಯ್ಕೆ ಮಾಡಲಾಯಿತು. ಜೊತೆಗೆ ಸೋಷಿಯಲ್ ವೆಲ್ಫೇರ್, ಶಿಕ್ಷಣ, ಮಾರ್ಗದರ್ಶನ, ಕಾನೂನು ಸಲಹೆ ಸೇರಿದಂತೆ ವಿವಿಧ ವಿಭಾಗಗಳಿಗೆ ಸಮರ್ಥ ನಾಯಕರನ್ನು ನೇಮಿಸಲಾಯಿತು.