ಸಿದ್ದಾಪುರ, ಜೂ. ೨೧ : ಕಾಡಾನೆಗಳು ಮನೆ ಅಂಗಳಕ್ಕೆ ಲಗ್ಗೆ ಇಟ್ಟು ದಾಂಧಲೆ ನಡೆಸಿರುವ ಘಟನೆ ಬಾಡಗ ಬಾಣಂಗಾಲ ಗ್ರಾಮದ ಹುಂಡಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಬಾಡಗ ಬಾಣಂಗಾಲ ಗ್ರಾಮದ ಹುಂಡಿಯ ನಿವಾಸಿ ಗುಡ್ಡಂಡ ಕಿಟ್ಟು ಹಾಗೂ ಮೊಣ್ಣಪ್ಪ ಅವರ ಮನೆಯಂಗಳಕ್ಕೆ ರಾತ್ರಿ ಸಮಯದಲ್ಲಿ ಕಾಡಾನೆಗಳ ಹಿಂಡು ಲಗ್ಗೆ ಇಟ್ಟು ದಾಂಧಲೆ ನಡೆಸಿವೆ. ಮನೆಯ ಬದಿಯಲ್ಲಿ ಇಟ್ಟಿದ್ದ ಹೂಕುಂಡಗಳು ಹಾಗೂ ನೀರಿನ ಪೈಪುಗಳನ್ನು, ಇನ್ನಿತರ ಸಾಮಗ್ರಿಗಳನ್ನು ತುಳಿದು ಹಾನಿಗೊಳಿಸಿದೆ.

ಕಾಫಿ ತೋಟದಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮನೆಯಂಗಳದಲ್ಲಿ ಕಾಡಾನೆಗಳು ದಾಳಿ ನಡೆಸಿ ಹಾನಿಗೊಳಿಸಿರುವ ಬಗ್ಗೆ ಮನೆ ಮಾಲೀಕರಾದ ಮೊಣ್ಣಪ್ಪ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ ಮೇರೆಗೆ ಸ್ಥಳಕ್ಕೆ ತಿತಿಮತಿ ವಲಯ ಉಪವಲಯ ಅರಣ್ಯ ಅಧಿಕಾರಿ ಶಶಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.