ಸುಂಟಿಕೊಪ್ಪ, ಜೂ. ೨೧: ಇಂದಿನ ದಿನಗಳಲ್ಲಿ ಯುವಜನತೆಯು ದುಶ್ಚಟಗಳಿಗೆ ದಾಸರಾಗುವ ಮೂಲಕ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ವಿಷಾದನೀಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಹೇಳಿದರು.
ಸುಂಟಿಕೊಪ್ಪ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಜಾಗೃತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಜನತೆ ತಂಬಾಕು ಸೇರಿದಂತೆ ಇನ್ನಿತರ ದುಶ್ಚಟಗಳಿಗೆ ಆಕರ್ಷಿತರಾಗಿ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ. ತಂಬಾಕು ಸೇರಿದಂತೆ ದುಶ್ಚಟಗಳಿಗೆ ಯುವಜನತೆಯು ಆಕರ್ಷಿತಗೊಳ್ಳದೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ನಿಟ್ಟಿನಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದ್ದು, ಯುವಜನತೆಯು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳುವಂತೆ ಕಿವಿಮಾತು ಹೇಳಿದರು.
ಸುಂಟಿಕೊಪ್ಪ ಪೊಲೀಸ್ ಠಾಣೆಯ ಎಎಸ್ಐ ಸುರೇಶ್ ಮಾತನಾಡಿ, ಅಪ್ರಾಪ್ತ ಮಕ್ಕಳು ತಂಬಾಕು ಖರೀದಿಸುವುದು ಮತ್ತು ಅಂಗಡಿಯವರು ಮಾರಾಟ ಮಾಡುವುದು ಕಾನೂನು ರೀತಿಯ ಅಪರಾಧ ದಂಡದೊAದಿಗೆ ಜೈಲು ಶಿಕ್ಷೆಗೂ ಒಳಗಾಗಬಹುದಾಗಿದೆ ಆದುದರಿಂದ ಅಂಗಡಿಯವರು ತಂಬಾಕು ಸೇರಿದಂತೆ ಗುಟ್ಕಾ ಪದಾರ್ಥಗಳನ್ನು ಅಪ್ರಾಪ್ತ ಮಕ್ಕಳಿಗೆ ಮಾರಾಟ ಮಾಡುವುದು, ಕೊಂಡುಕೊಳ್ಳುವುದು ಕಾನೂನಿನಡಿ ಅಪರಾಧವಾಗಿದೆ ಎಂದು ಮಾಹಿತಿ ನೀಡಿದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಮಾರಂಭದ ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿಯ ಸದಸ್ಯ ಡಿ. ನರಸಿಂಹ, ಸುಂಟಿಕೊಪ್ಪ ಪ್ರೌಢಶಾಲೆಯ ಸಹಶಿಕ್ಷಕಿ ಚಿತ್ರ. ಯೋಜನಾಧಿಕಾರಿ ಪುರುಷೋತ್ತಮ್, ಒಕ್ಕೂಟ ಅಧ್ಯಕ್ಷೆ ಲೀಲಾವತಿ, ಸೇವಾ ಪ್ರತಿನಿಧಿಗಳಾದ ಯಶೋಧ ಹಾಗೂ ನಂದಿನಿ ಉಪಸ್ಥಿತರಿದ್ದರು.
ಸಂತೋಷ್ ಕಾರ್ಯಕ್ರಮ ನಿರೂಪಿಸಿ, ಸೇವಾ ಪ್ರತಿನಿಧಿ ಚಿತ್ರ ಸ್ವಾಗತಿಸಿ, ಶಿಕ್ಷಕ ಪ್ರಕಾಶ್ ವಂದಿಸಿದರು.