ಶ್ರೀಮಂಗಲ, ಜೂ. ೯ : ದಕ್ಷಿಣ ಕೊಡಗಿನ ಕುಟ್ಟ ವ್ಯಾಪ್ತಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಕಾಡಿಗೆ ಆಟ್ಟುವ ಕಾರ್ಯಾಚರಣೆ ಹಾಗೂ ವನ್ಯಪ್ರಾಣಿಗಳ ಸಮಸ್ಯೆ ಬಗ್ಗೆ ಗ್ರಾಮಸ್ಥರೊಂದಿಗೆ ರಾಜ್ಯ ವನ್ಯಜೀವಿ ಸಂರಕ್ಷಣಾ ಸಮಿತಿ ಸದಸ್ಯ ಸಂಕೇತ್ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ಕುಟ್ಟ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಗ್ರಾಮಸ್ಥರು ದಿನನಿತ್ಯ ವನ್ಯಪ್ರಾಣಿಗಳ ಸಂಘರ್ಷದಿAದ ಸಾಕಷ್ಟು ಕಷ್ಟನಷ್ಟಗಳು ಅನುಭವಿಸುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಆಗಬೇಕೆಂದು ಒತ್ತಾಯ ಮಾಡಿದರು. ಕುಟ್ಟದ ಹೂವಿನ ಕಾಡು ಮತ್ತು ಫೈತ್ ಖಾಸಗಿ ತೋಟ ಮೂಲಕ ಕಾಡಾನೆಗಳ ಕಾರಿಡಾರ್ ಇದ್ದು ಇದು ಮುಚ್ಚಲ್ಪಟ್ಟಿದ್ದು ಇದನ್ನು ತೆರವುಗೊಳಿಸಿದರೆ ನೇರವಾಗಿ ಕಬಿನಿವರೆಗೆ ಕಾಡಾನೆಗಳು ಸಾಗಲು ಅವಕಾಶವಾಗುತ್ತದೆ ಎಂಬ ವಿಚಾರವನ್ನು ಸ್ಥಳೀಯ ಗ್ರಾಮಸ್ಥರು ಗಮನಕ್ಕೆ ತಂದರು.

ಕೊಡಗು ಜಿಲ್ಲೆಯ ಗ್ರಾಮದೊಳಗೆ ೧೮೫ ಕಾಡಾನೆಗಳಿವೆ ಎಂದು ಅಂದಾಜಿಸಲಾಗಿದ್ದು, ಇವುಗಳನ್ನು ಸೆರೆಹಿಡಿದು ಭದ್ರ ಕಾಡಾನೆ ಪುನರ್ವಸತಿ ಶಿಬಿರಕ್ಕೆ ಪುನರ್ ವಸತಿಗೆ ಕಳುಹಿಸಲು ಚಿಂತನೆ ನಡೆದಿದ್ದು, ಇದರೊಂದಿಗೆ ಜಿಲ್ಲೆಯಲ್ಲೂ ಪ್ರತ್ಯೇಕ ಕಾಡಾನೆ ಪುನರ್ವಸತಿ ಶಿಬಿರ ಸ್ಥಾಪನೆಗೆ ಸರ್ಕಾರದೊಂದಿಗೆ ಶಾಸಕ ಪೊನ್ನಣ್ಣ ಚರ್ಚೆ ನಡೆಸಿದ್ದಾರೆ ಎಂದು ಸಂಕೇತ್ ಹೇಳಿದರು.

ಕುಟ್ಟದ ಸಿಂಕೋನ ಭಾಗಕ್ಕೆ ಕೇರಳದಿಂದ (ಮೊದಲ ಪುಟದಿಂದ) ಕಾಡಾನೆ ಬಂದು ತೊಂದರೆ ನೀಡುತ್ತಿದ್ದು ಇದರ ಬಗ್ಗೆ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಂಕೇತ್ ಪೂವಯ್ಯ ಅವರು ಶಾಸಕ ಪೊನ್ನಣ್ಣ ಈ ಬಗ್ಗೆ ಚರ್ಚೆ ನಡೆಸಿದ್ದು ಇದನ್ನು ಸೆರೆ ಹಿಡಿಯಲು ಅನುಮತಿಯನ್ನು ಸದ್ಯದಲ್ಲಿ ದೊರಕಿಸಿ ಕೊಡಲಿದ್ದಾರೆ ಎಂದು ಭರವಸೆ ನೀಡಿದರು.

ರಾಪಿಡ್ ರೆಸ್ಪಾನ್ಸ್ ಟೀಮ್ ಹಾಗೂ ಎಲಿಫೆಂಟ್ ಟಾಸ್ಕ್ ಫೋರ್ಸ್ಗಳಲ್ಲಿ ಪರಿಣತಿ ಇರುವ ಸಿಬ್ಬಂದಿಗಳು ಇಲ್ಲ. ಪರಿಣತರ ತಂಡವನ್ನು ರಚನೆ ಮಾಡಬೇಕೆಂದು ಗ್ರಾಮಸ್ಥರು ಸಲಹೆ ನೀಡಿದರು.

ಈ ಬಗ್ಗೆ ಸಂಕೇತ್ ಪೂವಯ್ಯ ಅವರು ವಿವರಿಸಿ ವಿಶೇಷ ತಂಡ ರಚನೆ ಮಾಡಲು ಈಗಾಗಲೇ ಶಾಸಕರು ಆಲೋಚನೆ ಮಾಡಿದ್ದು ಅದು ಕಾರ್ಯಗತವಾಗಲಿದೆ. ದೊಡ್ಡ ಪ್ರಮಾಣದಲ್ಲಿ ವನ್ಯ ಪ್ರಾಣಿಗಳ ತಡೆಗೆ ಅನುದಾನವನ್ನು ಶಾಸಕರು ತರುತ್ತಿದ್ದು ಇವುಗಳ ವಿನಿಯೋಗಕ್ಕೆ ಕೆಲವು ವರ್ಷಗಳು ಬೇಕಾಗಲಿದೆ. ದೊಡ್ಡ ವ್ಯಾಪ್ತಿಯ ಅರಣ್ಯ ಪ್ರದೇಶವಾಗಿರು ವುದರಿಂದ ಇದರ ಸುತ್ತ ಬೇಲಿ ಹಾಕಲು ವರ್ಷ ತಗಲಲಿದೆ.

ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಎಲ್ಲೆಲ್ಲಿ ಕಾಡಾನೆಗಳ ಹಾವಳಿ ಇದೆ ಅಲ್ಲಿ ವೈಜ್ಞಾನಿಕವಾಗಿ ಅದನ್ನು ಸೆರೆ ಹಿಡಿಯಲು ಅಥವಾ ಅರಣ್ಯಕ್ಕೆ ಅಟ್ಟಲು ಕಾರ್ಯಚರಣೆ ನಡೆಸಲಾಗುತ್ತಿದೆ ಎಂದರು.

ಸಭೆಯಲ್ಲಿ ಕಾಡಾನೆಗಳ ಸಂಖ್ಯೆ ಅತಿಯಾಗಿ ಹೆಚ್ಚಾಗುತ್ತಿದ್ದು ಕಾಡಾನೆಗಳಿಗೆ ಸಂತಾನ ಹರಣ ಬಗ್ಗೆ ಗಮನ ಹರಿಸಬೇಕೆಂದು ಹಾಗೂ ಹೆಚ್ಚು ಕಾಡಾನೆ ಹಾವಳಿ ಇರುವ ಜಾಗದಲ್ಲಿ ಸೋಲಾರ್ ಬೇಲಿ ವ್ಯವಸ್ಥೆ ಹೆಚ್ಚಾಗಬೇಕೆಂದು ಸಲಹೆ ನೀಡಿದರು.

ಕೊಡಗಿನಲ್ಲಿ ಅವೈಜ್ಞಾನಿಕವಾದ ಅರಣ್ಯ ವಲಯ ಕಾರ್ಯ ವ್ಯಾಪ್ತಿಯು ಜಾರಿಯಲ್ಲಿದ್ದು ಕೆಲವು ಕಡೆ ಹುಣಸೂರು, ಕೆಲವು ಕಡೆ ಪೊನ್ನಂಪೇಟೆ, ಕೆಲವು ಕಡೆ ಶ್ರೀಮಂಗಲ ವ್ಯಾಪ್ತಿ ತಮ್ಮದು ಹಾಗೂ ತಮ್ಮದಲ್ಲ ಎಂದು ಅರಣ್ಯ ಅಧಿಕಾರಿಗಳು ಹೇಳಿಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಉಂಟಾಗುತ್ತಿರುವ ಸಮಸ್ಯೆಯ ಬಗ್ಗೆ ತೆರೆದಿಟ್ಟರು.

ಈ ಸಂದರ್ಭ ಶ್ರೀಮಂಗಲ ವಲಯ ಅರಣ್ಯಾಧಿಕಾರಿ ಅರವಿಂದ್, ತಾ.ಪಂ ಮಾಜಿ ಸದಸ್ಯ ಪಲ್ವಿನ್ ಪೂಣಚ್ಚ, ಮುಕ್ಕಾಟಿರ ನವೀನ್ ಅಯ್ಯಪ್ಪ, ಕುಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಹೆಚ್.ವೈ ರಾಮಕೃಷ್ಣ, ಮುಕ್ಕಾಟಿರ ರಾಜ ಮಂದಣ್ಣ, ಕೈಪಲೇರ ರಾಜ, ತೀತಿರ ಚಿಣ್ಣಪ್ಪ, ಕೈಪಲೇರ ದಿಲೀಪ್, ಬೊಜ್ಜಂಗಡ ಸೋಮಣ್ಣ, ಕಾಕೇರ ಸುರೇಶ್, ಕೈಪಲೇರ ದರ್ಶನ್, ಬೆಳೆಗಾರ ಎಸ್.ಎಲ್. ಮಹದೇವಪ್ಪ ಸೇರಿದಂತೆ ಹಲವರು ಗ್ರಾಮಸ್ಥರು ಭಾಗವಹಿಸಿದ್ದರು.

ಹರೀಶ್ ಮಾದಪ್ಪ