ಮಡಿಕೇರಿ, ಜೂ. ೯: ಕಳೆದ ಕೆಲವು ದಿನಗಳ ಹಿಂದೆ ವಾತಾವರಣದ ಅಸಹಜತೆಯಿಂದಾಗಿ ಜಿಲ್ಲೆಯನ್ನು ತಲ್ಲಣಗೊಳಿಸುವಂತೆ ಮಾಡಿದ್ದ ಗಾಳಿ - ಮಳೆಯ ಅಬ್ಬರ ಕಡಿಮೆಯಾಗಿ ಬಿಸಿಲಿನ ಸನ್ನಿವೇಶ ಎದುರಾಗಿತ್ತು. ಇದೀಗ ಮತ್ತೆ ಮಳೆಯಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ.
ಭಾನುವಾರದಂದು ಸಂಜೆಯಿAದ ಜಿಲ್ಲೆಯ ಹಲವೆಡೆ ಒಂದಷ್ಟು ಮಳೆ ಸುರಿದಿತ್ತು. ಜತೆಗೆ ಗುಡುಗು - ಮಿಂಚು ಕಂಡು ಬಂದಿತ್ತು. ಹವಾಮಾನ ಇಲಾಖೆ ಇದೀಗ ಮಳೆಯ ಕುರಿತು ಮಾಹಿತಿ ನೀಡಿದೆ. ತಾ. ೧೨ ರಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಇದರೊಂದಿಗೆ ತಾ. ೧೨ ರಿಂದ ೧೪ರವರೆಗೆ ಕೊಡಗು ಸೇರಿದಂತೆ ರಾಜ್ಯದ ೧೦ ಜಿಲ್ಲೆಗಳಿಗೆ ಈ ಅವಧಿಯಲ್ಲಿ ರೆಡ್ ಅಲರ್ಟ್ ಘೋಷಣೆಯನ್ನು ಮಾಡಲಾಗಿದೆ. ಕೊಡಗು, ಹಾಸನ, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಬಿಜಾಪುರ, ಧಾರವಾಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆಯನ್ನು ನೀಡಲಾಗಿದೆ.
ಪ್ರಸ್ತುತ ವಾಡಿಕೆಯಂತೆ ಜಿಲ್ಲೆಯಲ್ಲಿ ಮುಂಗಾರು ಮಳೆಯ ಸಮಯವೂ ಇದಾಗಿದೆ. ಆದರೆ ಮೇ ೨೨ ರಿಂದ ವಾತಾವರಣದ ಅಸಹಜತೆಯಿಂದಾಗಿ ಹತ್ತು ದಿನಗಳ ಕಾಲ ಸುರಿದ ಭಾರೀ ಮಳೆ - ಗಾಳಿ ನಂತರದಲ್ಲಿ ಕಡಿಮೆಯಾಗಿತ್ತು. ಇದೀಗ ಮತ್ತೆ ಮಳೆಯ ಲಕ್ಷಣಗಳು ಕಂಡು ಬಂದಿವೆ.