ವೀರಾಜಪೇಟೆ, ಜೂ. ೯: ದೈವಜ್ಞ ಸಮಾಜದವರ ಕೊಡುಗೆ ಈ ನಾಡಿಗೆ ಅಪಾರ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಹೇಳಿದರು.
ವೀರಾಜಪೇಟೆಯ ನಿಸರ್ಗ ಬಡಾವಣೆಯಲ್ಲಿ ನಿರ್ಮಿಸಲಾದ ದೈವಜ್ಞ ಬ್ರಾಹ್ಮಣರ ಸಮಾಜದ ನೂತನ ಕಟ್ಟಡದ ಉದ್ಘಾಟನ ಸಮಾರಂಭದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಪೊನ್ನಣ್ಣ ಅವರು ನಾಡಿನ ಎಲ್ಲಾ ಪ್ರಮುಖ ಕಾರ್ಯಗಳಲ್ಲಿ ದೈವಜ್ಞ ಸಮಾಜದ ಕೊಡುಗೆ ಅತ್ಯಂತ ಮಹತ್ವದ್ದಾಗಿದ್ದು, ಈ ಸಮಾಜದ ಏಳಿಗೆಗಾಗಿ ಎಲ್ಲಾ ರೀತಿಯ ಸಹಾಯ ಮಾಡಲು ಸಿದ್ಧ ಇರುವುದಾಗಿ ಹೇಳಿದರು.
ದೈವಜ್ಞ ಬ್ರಾಹ್ಮಣರು ಒಂದೂಗೂಡಿ ಯಾರ ಅರ್ಥಿಕ ನೆರವು ಪಡೆಯದೆ ತಮ್ಮ ಸಮಾಜಕ್ಕಾಗಿ ಒಂದು ಸುಸಜ್ಜಿತ ಭವನ ನಿರ್ಮಿಸಿರುವುದು ಅತ್ಯಂತ ಪ್ರಶಂಸನಿಯ. ಇದರಿಂದ ಜನಾಂಗದ ಆಚಾರ ವಿಚಾರ ಸಂಸ್ಕೃತಿ ಪರಂಪರೆಗಳನ್ನು ಉಳಿಸಲು ನೀವು ಒಂದೆಡೆ ಸೇರಲು ಇದು ಸಹಕಾರಿಯಾಗಿದೆ.
ಯಾವುದೇ ಜನಾಂಗವಾಗಿರಲಿ ಅವರ ಸಂಸ್ಕೃತಿ, ಆಚಾರ, ವಿಚಾರ, ಪದ್ದತಿ, ಪರಂಪರೆ ಸಾಹಿತ್ಯ ಏನೇ ಇದ್ದರೂ ನಮ್ಮ ದೇಶವು ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತದೆ. ದೈವಜ್ಞ ಬ್ರಾಹ್ಮಣ ಸಮಾಜ ತಮ್ಮದೆ ಆದ ಸಂಸ್ಕೃತಿ ಹೊಂದಿದೆ ಅನೇಕ ಸಮಾಜಮುಖಿ ಕೆಲಸ ಮಾಡಿದ ಹಿರಿಮೆ ಹೊಂದಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕೊಡಗು ದೈವಜ್ಞ ಬ್ರಾಹ್ಮಣರ ಸಮಾಜದ ಅಧ್ಯಕ್ಷ ಉಲ್ಲಾಸ್ ಸಿ ಶೇಟ್ ವಹಿಸಿ ಮಾತನಾಡಿದರು.
ದೈವಜ್ಞ ಬ್ರಾಹ್ಮಣರ ಸಮಾಜ ಸ್ಥಾಪಕ ಅಧ್ಯಕ್ಷ ಎಂ.ಜಿ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಪುರಸಭೆಯ ಸದಸ್ಯೆ ಅನಿತಾ ಕುಮಾರ್, ಅಖಿಲ ಕರ್ನಾಟಕ ದೈವಜ್ಞ ಸಮಾಜದ ಅಧ್ಯಕ್ಷ ರವಿ ಎಸ್. ಗಾಂವ್ಕರ್, ಅಖಿಲ ಕರ್ನಾಟಕ ದೈವಜ್ಞ ಮಹಿಳಾ ಸಮಾಜದ ಅಧ್ಯಕ್ಷೆ ವಿನಯ್ ಆರ್ ರಾಯ್ಕರ್, ಮಂಗಳೂರಿನ ದೈವಜ್ಞ ಸೌರಭ ಪತ್ರಿಕೆ ಸಂಪಾದಕ ಪ್ರಶಾಂತ್ ಶೇಟ್, ಮಾಜಿ ಅಧ್ಯಕ್ಷ ಎಂ.ಜಿ ಉಲ್ಲಾಸ್, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಬಾಲಕೃಷ್ಣ ಹಾಗೂ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು .
ಕಾರ್ಯಕ್ರಮದಲ್ಲಿ ಸಂಘದ ಏಳಿಗೆಗಾಗಿ ದುಡಿದ ಹಾಗೂ ಕಟ್ಟಡ ನಿರ್ಮಾಣಕ್ಕೆ ಧನಸಹಾಯ ನೀಡಿದವರನ್ನು ಸನ್ಮಾನಿಸಲಾಯಿತು. ಬೆಳಿಗ್ಗೆ ನೂತನ ಕಟ್ಟಡದ ಉದ್ಘಾಟನೆಯನ್ನು ದೈವಜ್ಞ ಬ್ರಾಹ್ಮಣರ ಕರ್ಕಿ ಮಠದ ಜ್ಞಾನೇಶ್ವರಿ ಪೀಠದ ಪೀಠಾಧ್ಯಕ್ಷರಾದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿ ನೆರವೇರಿಸಿ ಆಶೀರ್ವಚನವನ್ನು ನೀಡಿದರು. ಉದ್ಘಾಟನಾ ಸಮಾರಂಭದ ಅಂಗವಾಗಿ ಎರಡು ದಿನಗಳ ಕಾಲ ಸಮಾಜದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಸಭಾ ಕಾರ್ಯಕ್ರಮದ ಬಳಿಕ ಸಂಜೆ ಆರು ಗಂಟೆಗೆ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.