ಸೋಮವಾರಪೇಟೆ, ಜೂ. ೯: ಭಾರತೀಯ ಕೃಷಿ ಅನುಸಂಧಾನ ಪರಿಷತ್, ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪ, ಕೃಷಿ ಇಲಾಖೆ ಸೋಮವಾರಪೇಟೆ, ಪುಷ್ಪಗಿರಿ ರೈತ ಉತ್ಪಾದಕರ ಸಂಘ, ಜಿಲ್ಲಾ ಆಡಳಿತ, ಕಾಫಿ ಮಂಡಳಿ, ಸಂಬಾರು ಮಂಡಳಿ ವತಿಯಿಂದ ಮುಂಗಾರು ಹಂಗಾಮಿನಲ್ಲಿ ಕೃಷಿಕರಿಗೆ ತಾಂತ್ರಿಕತೆಗಳು ಲಭ್ಯವಾಗುವಂತೆ ಮಾಡುವ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ತರಬೇತಿ ಕಾರ್ಯಕ್ರಮ ಸಮೀಪದ ಕೂತಿ ಗ್ರಾಮದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು. ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ವೀರೇಂದ್ರ ಕುಮಾರ್ ಮಾತನಾಡಿ ಲಾಭದಾಯಕ ಯೋಜನೆಗಳು, ಕೃಷಿಯಲ್ಲಿ ಹೆಚ್ಚು ಲಾಭವನ್ನು ಹೇಗೆ ಪಡೆಯಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಕೃಷಿಯಲ್ಲಿ ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ಮೂಲಕ ಅಧಿಕ ಇಳುವರಿ ಹಾಗೂ ಗುಣಮಟ್ಟದ ಉತ್ಪಾದನೆಗೆ ಆದ್ಯತೆ ನೀಡಬೇಕು. ಸ್ಥಳೀಯ ತಳಿಯ ಕಾಳುಮೆಣಸಿನ ಬಳ್ಳಿ ಬೆಳೆಯುವುದರ ಜೊತೆಯಲ್ಲಿಯೇ ಬೇರೆ ಬೇರೆ ತಳಿಯ ಕಾಳುಮೆಣಸು ಬೆಳೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಾಳುಮೆಣಸಿಗೆ ಏಪ್ರಿಲ್, ಮೇ ತಿಂಗಳಲ್ಲಿ ವಾರಕ್ಕೆ ಒಂದು ಬಾರಿ ೨೦ ರಿಂದ ೫೦ ಲೀಟರ್ ನೀರು ಹಾಕುವುದರಿಂದ ಬಳ್ಳಿಯಲ್ಲಿ ಗಂಡು-ಹೆಣ್ಣಿನ ತೀರಿಗಳು ಬರಲಿದ್ದು ಇದರಿಂದ ಸರಿಯಾಗಿ ಪರಾಗಸ್ಪರ್ಶ ನಡೆದು ಉತ್ತಮ ಫಸಲು ದೊರಕಲಿದೆ. ಶಾಂತಳ್ಳಿ ಹೋಬಳ್ಳಿ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುವುದರಿಂದ ಈ ಭಾಗಕ್ಕೆ ತೇವಂ, ಕೂರ್ಗ್ ಎಕ್ಸಲ್ ತಳಿಯನ್ನು ಬೆಳೆಯುವುದು ಸೂಕ್ತ. ಕೂರ್ಗ್ ಎಕ್ಸಲ್ ತಳಿಯು ಗೋಣಿಕೊಪ್ಪದ ಕೆ.ವಿ.ಕೆ. ಯಲ್ಲಿ ಲಭ್ಯವಿದ್ದು ಆಸಕ್ತರು ಪಡೆದುಕೊಳ್ಳಬಹುದು ಎಂದ ಅವರು, ಅಡಿಕೆ, ಕಾಫಿ, ಕಿತ್ತಳೆ ಬೆಳೆಯ ಬಗ್ಗೆಯೂ ಕೃಷಿಕರಿಗೆ ಮಾಹಿತಿ ನೀಡಿದರು. ಹುಣಸೂರಿನ ತಂಬಾಕು ಸಂಶೋಧನಾ ಕೇಂದ್ರದ ವಿಷಯ ತಜ್ಞ ಕೆ.ಪಿ. ರಾಘವೇಂದ್ರ ಅವರು ಮುಂಗಾರು ಹಂಗಾಮು ಅಭಿಯಾನ ಬಗ್ಗೆ ಹಾಗೂ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದ್ರು.
ಮಡಿಕೇರಿಯ ವಿಸ್ತರಣಾ ಸಂಸ್ಕರಣ ಘಟಕದ ದೇವರಾಜು ಅವರು, ಕಾಳು ಮೆಣಸಿನ ಕೃಷಿಯಲ್ಲಿನ ಸಮಸ್ಯೆಗಳ ನಿವಾರಣೆ ಬಗ್ಗೆ ಮಾಹಿತಿ ನೀಡಿದರು. ಮಡಿಕೇರಿ ಕೃಷಿ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ್ ಅವರು ಭತ್ತ ಬೇಸಾಯದ ಬಗ್ಗೆ ಹಾಗೂ ಕೃಷಿ ಇಲಾಖೆಯ ಸವಲತ್ತು ಬಗ್ಗೆ ಮಾಹಿತಿ ನೀಡಿರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಮಂಜುನಾಥ್ ವಹಿಸಿದ್ದರು. ಶಾಂತಳ್ಳಿ ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಶಾರದಾ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಕೂತಿ ಗ್ರಾಮಾಧ್ಯಕ್ಷ ಹೆಚ್.ಎಂ. ಜಯರಾಮ್, ಸೋಮವಾರಪೇಟೆಯ ಪುಷ್ಪಗಿರಿ ರೈತ ಉತ್ಪಾದನಾ ಸಂಸ್ಥೆಯ ಅಧ್ಯಕ್ಷ ಸತೀಶ್, ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್, ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್, ನಾಪಂಡ ಪೂಣಚ್ಚ, ವಿದ್ಯಾ ಮಧುಕುಮಾರ್, ಶನಿವಾರಸಂತೆ ಕೃಷಿ ಇಲಾಖೆಯ ಸಹಾಯ ತಾಂತ್ರಿಕ ವ್ಯವಸ್ಥಾಪಕಿ ವೇದಪ್ರಿಯಾ, ಕುಶಾಲನಗರ ಕೃಷಿ ಇಲಾಖೆಯ ಸಹಾಯ ತಾಂತ್ರಿಕ ವ್ಯವಸ್ಥಾಪಕಿ ಅರ್ಪಿತಾ, ಸ್ವಾಗತ್ ಇದ್ದರು.