ಮಡಿಕೇರಿ, ಜೂ. ೮: ಪದಗಳ ತರ್ಜುಮೆಗಿಂತ ಭಾವನೆಗಳನ್ನು ದಾಖಲಿಸುವ ಭಾವಾನುವಾದ ಪ್ರಕಾರವು, ಅನುವಾದ ಸಾಹಿತ್ಯದಲ್ಲಿ ಮಹತ್ವದ್ದಾಗಿರುತ್ತದೆ ಎಂದು ಪ್ರತಿಷ್ಟಿತ ಅಂತರರಾಷ್ಟಿçÃಯ ಬೂಕರ್ ಪ್ರಶಸ್ತಿ ಪಡೆದ ಮಡಿಕೇರಿಯ ಲೇಖಕಿ ದೀಪಾಭಾಸ್ತಿ ಅಭಿಪ್ರಾಯಪಟ್ಟಿದ್ದಾರೆ.
ಕೊಡಗು ಪತ್ರಕರ್ತರ ಸಂಘದ ವತಿಯಿಂದ ನಗರದ ಲಾಲಿ ಪೆಟಲ್ ಸಭಾಂಗಣದಲ್ಲಿ ಆಯೋಜಿತ ಪತ್ರಕರ್ತೆ ದೀಪಾಭಾಸ್ತಿಗೆ ಅಭಿನಂದನಾ ಸಮಾರಂಭ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಾನುಮುಷ್ತಾಕ್ ಅವರ ಎದೆಯ ಹಣತೆ ಕೃತಿ ಸೇರಿದಂತೆ ೬ ಕಥಾಸಂಕಲನಗಳಲ್ಲಿನ ೧೨ ಕಥೆಗಳನ್ನು ಆಯ್ಕೆ ಮಾಡಿ ಇಂಗ್ಲಿಷ್‌ನಲ್ಲಿ ಬರೆದ ಹಾರ್ಟ್ ಲ್ಯಾಂಪ್ ಕೃತಿ ಸಂಬAಧಿತ ಮಾಹಿತಿ ನೀಡಿದ ದೀಪಾಭಾಸ್ತಿ, ಕನ್ನಡದಿಂದ ಇಂಗ್ಲೀಷ್ ಗೆ ಅನುವಾದ ಮಾಡುವಾಗ ಖಂಡಿತವಾಗಿಯೂ ಪದಗಳನ್ನು ತರ್ಜುಮೆ ಮಾಡ ಬಾರದು. ಇದರ ಬದಲಿಗೆ ಮೂಲಕೃತಿಯಲ್ಲಿನ ಪದಗಳ ಭಾವವನ್ನು ಅರ್ಥೈಸಿಕೊಂಡು ತನ್ನದೇ ಶೈಲಿಯಲ್ಲಿ ಭಾವಾನುವಾದ ಮಾಡಿದರಷ್ಟೇ ಅನುವಾದ ಸಾಹಿತ್ಯಕ್ಕೆ ಗಟ್ಟಿತನ ದೊರಕುತ್ತದೆ ಎಂದು ಅಭಿಪ್ರಾಯಪಟ್ಟರು. ಪಂಪ, ಕುವೆಂಪು ಸೇರಿದಂತೆ ಕನ್ನಡದ ಅನೇಕ ಸಾಹಿತಿಗಳ ಅತ್ಯಂತ ಶ್ರೇಷ್ಟ ಕೃತಿಗಳು ಇನ್ನಾದರೂ ಇಂಗ್ಲೀಷ್‌ಗೆ ಅನುವಾದ ಗೊಂಡು ಜಾಗತಿಕವಾಗಿ ಓದುಗರನ್ನು ತಲುಪಬೇಕಾದ ಅಗತ್ಯವಿದೆ, ೧,೫೦೦ ವರ್ಷಗಳ ಇತಿಹಾಸವಿರುವ ಕನ್ನಡದ ಕೃತಿಗಳು ವಿಶ್ವವ್ಯಾಪಿ ಕನ್ನಡ ನೆಲದ ಸಾಹಿತ್ಯ ಕಂಪು ಬೀರಬೇಕಾಗಿದೆ ಎಂದೂ ಅವರು ಹೇಳಿದರು. ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಲು ಇತರ ಭಾಷೆಗಳ ಶ್ರೇಷ್ಟ ಕೃತಿಗಳು ಕನ್ನಡಕ್ಕೆ ಅನುವಾದ ವಾಗಬೇಕಾದ ಅಗತ್ಯತೆಯಿದೆ. ಪಕ್ಕದ ಕೇರಳದಲ್ಲಿನ ಮಲಯಾಳದಲ್ಲಿ ಅನುವಾದಕ್ಕೆ ಪ್ರಾಧಾನ್ಯತೆ ಇದೆ ಎಂದೂ ದೀಪಾ ಬಾಸ್ತಿ ಅಭಿಪ್ರಾಯಪಟ್ಟರು.
ಡಾ. ಶಿವರಾಮ ಕಾರಂತರ ಅದೇ ಊರು - ಅದೇ ಮರ ಕೃತಿ ಮತ್ತು ಕೊಡಗಿನ ಗೌರಮ್ಮ ಅವರ ಕಥೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ಅದು ಖ್ಯಾತಿ ಪಡೆಯುತ್ತಿದ್ದ ಸಂದರ್ಭವೇ ಭಾನುಮುಷ್ತಾಕ್ ತನ್ನ ಸ್ನೇಹಿತೆಯ ಮೂಲಕ ನನ್ನನ್ನು ಸಂಪರ್ಕಿಸಿ ತನ್ನ ಕಥೆಗಳನ್ನು ಇಂಗ್ಲಿಷ್‌ಗೆ ಅನುವಾದಿಸುವಂತೆ ಕೋರಿದ್ದರು. ಹೀಗಾಗಿಯೇ ಅವರ ಎಲ್ಲಾ ಕಥಾಸಂಕಲನ ಓದಿ ತನಗೆ ಇಷ್ಟವಾದ ೧೨ ಕಥೆಗಳನ್ನು ಆಯ್ದು ಕೊಂಡು ಹಾರ್ಟ್ ಲ್ಯಾಂಪ್ ಕೃತಿಯಾಗಿಸಿದೆ ಎಂದು ದೀಪಾಭಾಸ್ತಿ ವಿವರಿಸಿದರು. ಅನುವಾದಕಳಾಗಿ ತನ್ನ ಮನಸ್ಸಿಗೆ ಇಷ್ಟವಾದ ಕಥೆಗಳನ್ನು ಮಾತ್ರ ಆಯ್ದುಕೊಂಡಿದ್ದೆ; ಹಲವು ಕಥೆಗಳು ಸುಂದರವಾಗಿದ್ದರೂ ಇಂಗ್ಲಿಷ್ ಓದುಗನಿಗೆ ಜಾನಪದ ಘಟನಾವಳಿಗಳ ಕಥಾ ಹಂದರವನ್ನು ತಲುಪಿಸುವುದು ಕಷ್ಟ ಎಂದೆನಿಸಿದ ಕಾರಣದಿಂದ ಅಂಥ ಕಥೆಗಳನ್ನು ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಅನುವಾದದಿಂದ ಕೈಬಿಟ್ಟಿದ್ದೆ; ಆ ಸಂದರ್ಭ ಮಾರುಕಟ್ಟೆಗೆ ಇಂಥ ಕಥೆಗಳು ಸಲ್ಲುತ್ತವೆಯೇ ಎಂದು ಯೋಚಿಸುವ ಗೊಡವೆಗೆ ಹೋಗಲಿಲ್ಲ ಎಂದೂ ದೀಪಾ ಭಾಸ್ತಿ ಹೇಳಿದರು
ಭಾನುಮುಷ್ತಾಕ್ ಅವರ ಕಥೆಗಳಲ್ಲಿ ಹೆಚ್ಚಾಗಿ ಮುಸ್ಲಿಮ್ ಸಮುದಾಯದ ಸಂಸ್ಕೃತಿ, ಆಚಾರಗಳ ಉಲ್ಲೇಖ ಇದ್ದುದರಿಂದಾಗಿ ಆ ಬಗ್ಗೆ ಕೂಲಂಕುಶವಾಗಿ ಅಧ್ಯಯನ ಮಾಡಿಯೇ ಹಾರ್ಟ್ ಲ್ಯಾಂಪ್ ಕೃತಿಯಲ್ಲಿ ಮೂಲ ಕಥೆಗಳಲ್ಲಿನ ಸಂಸ್ಕೃತಿ, ಆಚಾರ ವಿಚಾರಕ್ಕೆ ಧಕ್ಕೆಯಾಗದಂತೆ ಅನುವಾದ ಮಾಡಬೇಕಾದ ಸವಾಲು ತನಗಿತ್ತು ಎಂದೂ ಅವರು ಹೇಳಿದರು.
ಬೂಕರ್ ಪ್ರಶಸ್ತಿಯ ಅಂತಿಮ ಹಂತದಲ್ಲಿ ಇಟಾಲಿಯನ್, ಡ್ಯಾನಿಷ್, ಫ್ರೆಂಚ್ ಭಾಷೆಗಳ ಕೃತಿಗಳೂ ಇದ್ದವು. ವಿಶ್ವದ ಪ್ರಸಿದ್ದ ಅನುವಾದಕರಾದ ಸೋಫಿ ಹಗ್ಗೀಸ್ ಅವರ ಕೃತಿಯೂ ಅಲ್ಲಿತ್ತು. ಹೀಗಿದ್ದರೂ ತೀರ್ಪುಗಾರರು ಸರಳ , ಮನಸ್ಸಿಗೆ ಮುಟ್ಟುವ ಭಾಷಾ ಮತ್ತು ಭಾವಾನುವಾದ ಮೆಚ್ಚಿಕೊಂಡು ಹಾರ್ಟ್ಲ್ಯಾಂಪ್ ನ್ನು ಪ್ರಶಸ್ತಿಗೆ ಆಯ್ಕೆ ಮಾಡಿದರು ಎಂದೂ ದೀಪಾ ಭಾಸ್ತಿ ಹೇಳಿದರು.
ಚಿತ್ರರಂಗದಲ್ಲಿ ಆಸ್ಕರ್‌ನಂತೆಯೇ ಸಾಹಿತ್ಯಲೋಕದಲ್ಲಿ ಬೂಕರ್ ಪ್ರಶಸ್ತಿಗೆ ಮಹತ್ವವಿದೆ ಎಂದು ಹೇಳಿದ ದೀಪಾಭಾಸ್ತಿ, ಬೂಕರ್ ಪ್ರಶಸ್ತಿ ಲಭಿಸಿದ ಬಳಿಕ ಅನೇಕರು ತಮ್ಮ ಕೃತಿಗಳ ಅನುವಾದಕ್ಕಾಗಿ ಸಂಪರ್ಕ ಮಾಡುತ್ತಿದ್ದಾರೆ. ಆದರೆ ಇನ್ನೊಂದು ವರ್ಷ ಹಾರ್ಟ್ ಲ್ಯಾಂಪ್‌ಕೃತಿಯ ಪ್ರಚಾರಕ್ಕಾಗಿ ಭಾರತದ ವಿವಿಧೆಡೆ ಸೇರಿದಂತೆ ಜಗತ್ತಿನ ಹಲವಾರು ಕಡೆ ಸಾಹಿತ್ಯ ಉತ್ಸವಗಳಿಗೆ ತೆರಳಬೇಕಾಗಿದೆ. ಯಾವುದೇ ಕೃತಿ ರಚನೆಗೂ ಸಮಯದ ಕೊರತೆಯಿದೆ; ಭಾವಾನುವಾದಕ್ಕೆ ಕನಿಷ್ಟ ೨-೩ ವರ್ಷಗಳಾದರೂ ಸಮಯಾವಕಾಶ ಅಗತ್ಯವಾಗಿದೆ ಎಂದು ದೀಪಾ ಹೇಳಿದರು.
ಹೆಗ್ಗೋಡು ಗ್ರಾಮದ ಸಮುದ್ಯತಾ ವೆಂಕಟರಾಮು ಅವರು ರಚಿಸಿರುವ ‘ಇದೇ ಅಂದರೆ ಇದೆ, ಇಲ್ಲ ಎಂದರೆ ಇಲ್ಲ’ ಕೃತಿಯ ಇಂಗ್ಲೀಷ್ ಅನುವಾದ ಸಾಗಿದ್ದು, ಇದು ಕೂಡ ಬಹಳ ಸೊಗಸಾದ ಕೃತಿಯಾಗಲಿದೆ ಎಂದು ಹೇಳಿದ ದೀಪಾ, ಅನುವಾದ ಸಾಹಿತ್ಯ ತಾನು ಮೆಚ್ಚಿಕೊಂಡು ಬರೆದ್ದದ್ದಲ್ಲ. ಸ್ವಂತ ಕೃತಿಯ ರಚನೆ ಕಾರ್ಯವೂ ಬಾಕಿಯಿದೆ. ಪ್ರಬಂಧ, ಸಣ್ಣ ಕಥೆಗಳು ತನ್ನ ಮೆಚ್ಚಿನ ಸಾಹಿತ್ಯವಾಗಿದೆ ಎಂದೂ ಅವರು ಹೇಳಿದರು.
ಆಧುನಿಕ ತಂತ್ರಜ್ಞಾನದ ಮಾಧ್ಯಮಗಳಿರುವ ಈ ಕಾಲದಲ್ಲಿ ಖಂಡಿತವಾಗಿಯೂ ವಿಶ್ವವ್ಯಾಪಿ ಓದುಗರ ಸಂಖ್ಯೆ ಇಳಿಮುಖವಾಗಿಲ್ಲ. ಬದಲಿಗೆ ಜ್ಞಾನ ಪಡೆಯುವ ನಿಟ್ಟಿನಲ್ಲಿ ಉತ್ತಮ ಕೃತಿಗಳನ್ನು ಓದುವವರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದು ಸಾಹಿತ್ಯ ಲೋಕಕ್ಕಿರುವ ಅತೀ ದೊಡ್ಡ ಭರವಸೆಯಾಗಿದೆ ಎಂದು ಅಭಿಪ್ರಾಯಪಟ್ಟ ದೀಪಾಭಾಸ್ತಿ, ಮೊದಲಿನ ಕಾಲದಲ್ಲಿ ಅನುವಾದಕರಿಗೆ ಅಷ್ಟೇನು ಮಹತ್ವ ಇರುತ್ತಿರಲಿಲ್ಲ. ಆದರೆ, ಬದಲಾದ ಸಾಹಿತ್ಯ ಲೋಕದಲ್ಲಿ ಮೂಲಲೇಖಕರಷ್ಟೇ ಅನುವಾದಕರೂ ಪ್ರಾಶಸ್ತö್ಯ ಪಡೆಯುತ್ತಾರೆ. ಈ ಕಾರಣದಿಂದಾಗಿಯೇ ಬೂಕರ್ ಪ್ರಶಸ್ತಿಯನ್ನು ಅನುವಾದಕರಿಗಾಗಿಯೇ ಮೀಸಲಿಡಲಾಗಿದೆ ಎಂದು ಹೆಮ್ಮೆಯಿಂದ ಹೇಳಿದರು.
ಬೂಕರ್ ಪ್ರಶಸ್ತಿ ದೊರಕುವ ನಿರೀಕ್ಷೆ ಖಂಡಿತಾ ಇರಲಿಲ್ಲ. ಪ್ರಕಾಶಕರ ಆಹ್ವಾನದ ಮೇರೆಗೆ ಲಂಡನ್‌ನಲ್ಲಿ ಆಯೋಜಿತ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ತೆರಳಿದ್ದೆ. ಪ್ರಶಸ್ತಿ ಘೋಷಣೆಯಾದ ಕ್ಷಣ ಅಲ್ಲಿನ ಸಂಭ್ರಮದ ವಾತಾವರಣದಲ್ಲಿ ಗಲಿಬಿಲಿಗೊಳಗಾದೆ. ನಂತರ ಭಾಷಣದಲ್ಲಿ ಡಾ. ರಾಜ್‌ಕುಮಾರ್ ಅವರ ಜೇನಿನ ಹೊಳೆಯೋ ಹಾಡನ್ನು ಆ ಕ್ಷಣದಲ್ಲಿ ಮನಸ್ಸಿಗೆ ತೋಚಿದಂತೆ ಸಾಂದರ್ಭಿಕವಾಗಿ ಉಲ್ಲೇಖಿಸಿದೆ. ಆ ಹಾಡು ಮತ್ತು ಡಾ.ರಾಜ್ ಕನ್ನಡದ ಪ್ರತಿನಿಧಿತ್ವ ಎಂದೆನಿಸಿತು. ಹೀಗಾಗಿ ಅಲ್ಲಿ ಹೇಳಿದ ಹಾಡು ಜಗತ್ತಿನಾದ್ಯಂತ ಪ್ರಸಿಧ್ದಿ ಪಡೆಯುವ ಮೂಲಕ ನನ್ನ ಉದ್ದೇಶ ಸಾರ್ಥಕವಾದಂತಾಯಿತು ಎಂದೂ ದೀಪಾ ಭಾಸ್ತಿ ಹರ್ಷ ವ್ಯಕ್ತಪಡಿಸಿದರು.
ಅಜ್ಜನ ಗ್ರಂಥಾಲಯ ನೀಡಿದ ಪ್ರೇರಣೆ!
ತನ್ನ ಅಜ್ಜ ಡಾ.ನಂಜುAಡೇಶ್ವರ ಅವರ ಗ್ರಂಥಾಲಯದಲ್ಲಿದ್ದ ಅನೇಕ ಪುಸ್ತಕಗಳು ಬಾಲ್ಯದಲ್ಲಿಯೇ ಓದುವ ಆಸಕ್ತಿ ಹುಟ್ಟುಹಾಕಿತ್ತು. ತನ್ನ ದೊಡ್ಡಮ್ಮ ಕೂಡ ಲೇಖಕಿಯಾಗಿದ್ದು ತನಗೂ ಸ್ಫೂರ್ತಿ ನೀಡಿತ್ತು. ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ದಿಕ್ಸೂಚಿ ವಾರ್ತಾ ಸಂಚಿಕೆ ಮೂಲಕ ಸಣ್ಣ ಪುಟ್ಟ ಕವನಗಳ ಮೂಲಕ ಬರವಣಿಗೆ ಪ್ರಾರಂಭಿಸಿದ್ದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು. ಮಂಗಳ ಗಂಗೋತ್ರಿಯ ಪತ್ರಿಕೋದ್ಯಮ ಶಿಕ್ಷಣವೂ ಸಾಹಿತ್ಯದತ್ತ ಪ್ರೇರೇಪಿಸಿತ್ತು. ಇಂಗ್ಲಿಷ್ ಭಾಷಾ ಶಿಕ್ಷಣ ಪಡೆದ ಕಾರಣ ಇಂಗ್ಲಿಷ್ ಕೃತಿಗಳತ್ತ ಹೆಚ್ಚು ಆಕರ್ಷಿತನಾದೆ. ಹೀಗಿದ್ದರೂ ಕನ್ನಡದ ಪ್ರಮುಖ ಕೃತಿಗಳನ್ನು ಓದಿಕೊಂಡಿದ್ದೇನೆ ಎಂದೂ ದೀಪಾ ಹೇಳಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಹಸಿರ ಸಿರಿ ನಡುವೆ ತನ್ನ ಪಾಡಿಗೆ ತಾನು ಸಾಹಿತ್ಯ ರಚನೆಯಲ್ಲಿ ತೊಡಗಿದ್ದ ದೀಪಾ ಅವರ ಶ್ರಮಕ್ಕೆ ಶ್ಲಾಘನೀಯ ಪ್ರತಿಫಲ ಬೂಕರ್ ಪ್ರಶಸ್ತಿ ಮೂಲಕ ದೊರಕಿದೆ. ಈ ಮೂಲಕ ಕೊಡಗು ಜಿಲ್ಲೆಯೂ ವಿಶ್ವದ ಸಾಹಿತ್ಯಲೋಕದ ಬಾನಂಗಣದಲ್ಲಿ ರಾರಾಜಿಸುವಂತಾಗಿದೆ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ವಂದಿಸಿದ ಕಾರ್ಯಕ್ರಮದಲ್ಲಿ ಕೊಡಗು ಪತ್ರಕರ್ತರ ಸಂಘದ ಪರವಾಗಿ ದೀಪಾಭಾಸ್ತಿಯವರನ್ನು ಸನ್ನಾನಿಸಿ ಗೌರವಿಸಲಾಯಿತು, ಸಂಘದ ಸಲಹೆಗಾರರಾದ ಟಿ.ಪಿ.ರಮೇಶ್, ಬಿ.ಜಿ. ಅನಂತಶಯನ, ನಿರ್ದೇಶಕರು, ಸದಸ್ಯರು ಹಾಜರಿದ್ದರು.