ಮಡಿಕೇರಿ, ಜೂ. ೮: ಕೊಡಗು ಜಿಲ್ಲೆಯ ಅಸ್ಮಿತೆಯಾಗಿರುವ ಸಮೃದ್ಧ ಪರಿಸರ ಕಾಪಾಡಿಕೊಂಡರೆ ಮಾತ್ರ ಭವಿಷ್ಯ ಸದೃಢವಾಗಿರುತ್ತದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಇದರೊಂದಿಗೆ ಅಭಿವೃದ್ಧಿ ಕಾರ್ಯಗಳಿಗೂ ಸಹಕಾರ ನೀಡುವೆ ಎಂದು ಮಡಿಕೇರಿ ವಿಭಾಗದ ನೂತನ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಅಭಿಷೇಕ್ ಹೇಳಿದರು.

ಬೆಂಗಳೂರು, ಹೆಚ್.ಡಿ. ಕೋಟೆಯಲ್ಲಿ ಕಾರ್ಯನಿರ್ವಹಿಸಿ ಮಡಿಕೇರಿ ವಿಭಾಗಕ್ಕೆ ನಿಯೋಜನೆಗೊಂಡಿರುವ ಅಭಿಷೇಕ್ ಅವರು ‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿ, ಕೊಡಗಿನಲ್ಲಿ ಕೆಲಸ ಮಾಡಲು ದೊರೆತ ಅವಕಾಶದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಕೊಡಗು ಅತ್ಯಂತ ರಮಣೀಯ ಹಾಗೂ ಹಸಿರು ತುಂಬಿರುವ ಪ್ರದೇಶ ವಾಗಿದ್ದು, ಇಲ್ಲಿನ ವಾತಾವರಣ ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿಕೊಂಡು ಜನರನ್ನು ಸೆಳೆಯುತ್ತಿದೆ. ಭೌಗೋಳಿಕವಾಗಿಯೂ ವಿಭಿನ್ನವಾಗಿರುವ ಈ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ದೊರೆತಿದ್ದು, ಇರುವಷ್ಟು ದಿನವೂ ಪರಿಸರ ರಕ್ಷಣೆಗೆ ಬದ್ಧನಾಗಿರುತ್ತೇನೆ. ಅದೇ ರೀತಿ ಜನರ ಬೇಕು-ಬೇಡಿಕೆಗಳಿಗೆ ಕಾನೂನು ಪರಿಧಿಯಲ್ಲಿ ಸ್ಪಂದಿಸುವುದರೊAದಿಗೆ ಮಾನವೀಯತೆಯಡಿಯಲ್ಲಿಯೂ ಕೆಲಸ ಮಾಡುತ್ತೇನೆ ಎಂದು ನುಡಿದರು.

ವನ್ಯಜೀವಿ ಉಪಟಳ ತಡೆ

ಜಿಲ್ಲೆಯಲ್ಲಿ ವನ್ಯಜೀವಿ ಉಪಟಳ ಅಧಿಕವಿರುವುದು ಗಮನಕ್ಕೆ ಬಂದಿದೆ. ಇದನ್ನು ತಪ್ಪಿಸಲು ಈಗಾಗಲೇ ಅನೇಕ ಯೋಜನೆಗಳು ರೂಪುಗೊಂಡಿವೆ. ಅದರ ಅನುಷ್ಠಾನಕ್ಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇನೆ ಎಂದು ಅಭಿಷೇಕ್ ಭರವಸೆಯ ಮಾತುಗಳನ್ನಾಡಿದರು.

ಕಾಡಾನೆ, ಹುಲಿ ಸೇರಿದಂತೆ ಇನ್ನಿತರ ವನ್ಯಜೀವಿಗಳ ದಾಳಿಯಿಂದ ಅನೇಕ ಸಾವು-ನೋವುಗಳು ಜಿಲ್ಲೆಯಲ್ಲಿ ಸಂಭವಿಸಿದೆ. ಇದರ ತಡೆಗೆ ಸ್ಥಳೀಯವಾಗಿ ತಂಡಗಳ ರಚನೆಯಾಗಿದ್ದು, ಕಾಡಾನೆ ಚಲನವಲನಗಳ ಮೇಲೆ ನಿಗಾಇಡಲಾಗಿದೆ. ವನ್ಯಜೀವಿ ಪೀಡಿತ ಪ್ರದೇಶ ಗುರುತಿಸಿ ಕಾಲಕಾಲಕ್ಕೆ ಜನರಲ್ಲಿ ಮಾಹಿತಿ ಒದಗಿಸಲಾಗುವುದು. ಅರಣ್ಯ ಇಲಾಖೆ ಇದರ ತಡೆಗೆ ಸದಾ ಸಿದ್ಧವಿರಲಿದೆ ಎಂದರು.

ಸುಸ್ಥಿರ ಪ್ರವಾಸೋದ್ಯಮಕ್ಕೆ ಒತ್ತು

ಪ್ರವಾಸೋದ್ಯಮ ಕ್ಷೇತ್ರ ಜಿಲ್ಲೆಯಲ್ಲಿ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದ್ದು, ಇದನ್ನು ಸುಸ್ಥಿರಗೊಳಿಸುವ ನಿಟ್ಟಿನ ಕೆಲಸಗಳು ಹೆಚ್ಚುಹೆಚ್ಚಾಗಿ ನಡೆಯಬೇಕೆಂದು ಅಭಿಷೇಕ್ ಅನಿಸಿಕೆ ವ್ಯಕ್ತಪಡಿಸಿದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕೇವಲ ಮೋಜು-ಮಸ್ತಿಗೆ ಕೊಡಗು ಎಂಬ ಧೋರಣೆ ಇರಬಾರದು. ಇಲ್ಲಿನ ವಾತಾವರಣವನ್ನು ಅಸ್ವಾಧಿಸಬೇಕು, ಪರಿಸರವನ್ನು ಕಣ್ತುಂಬಿಕೊಳ್ಳಬೇಕು. ಅದಕ್ಕೆ ಕಾಡಿನ ರಕ್ಷಣೆಯಾಗಲೇ ಬೇಕಾಗಿದೆ. ಅರಣ್ಯ ಇಲಾಖೆ ಅಧೀನದಲ್ಲೂ ಪ್ರವಾಸಿ ಕೇಂದ್ರಗಳಿದ್ದು, ಅಲ್ಲಿಯೂ ಅಗತ್ಯ ಸೌಕರ್ಯವನ್ನು ನೀಡಲಾಗುವುದು. ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಪೂರಕ ಯೋಜನೆಯನ್ನು ರೂಪಿಸಲಾಗುವುದು. ದಿನದ ೨೪ ಗಂಟೆಗಳು ಜನರ ಸಂಪರ್ಕಕ್ಕೆ ಸಿಗುತ್ತೇನೆ. ಮುಕ್ತವಾಗಿ ನನನ್ನು ಸಂಪರ್ಕಿಸಬಹುದು ಎಂದು ನೂತನ ಡಿಎಫ್‌ಓ ಅಭಿಷೇಕ್ ಹೇಳಿದರು.

ಚೆಕ್‌ಪೋಸ್ಟ್ನಲ್ಲಿ ಭದ್ರತೆ - ಸಂಪತ್ತು ಉಳಿವಿಗೆ ಕಟಿಬದ್ಧ

ಅರಣ್ಯ ಸಂಪತ್ತು ಉಳಿಸುವ ಮಹತ್ತರ ಜವಾಬ್ದಾರಿ ತನ್ನದಾಗಿದ್ದು, ಕಳ್ಳ ಸಾಗಾಣಿಕೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದರು.

ಚೆಕ್‌ಪೋಸ್ಟ್ಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗುವುದು. ಪ್ರತಿ ವಾಹನಗಳನ್ನು ತಪಾಸಣೆಗೊಳಪಡಿಸಲಾಗುವುದು. ಜನತೆ ಕೂಡ ಅಕ್ರಮಗಳು ಕಂಡುಬAದರೆ ಅರಣ್ಯ ಇಲಾಖೆ ಗಮನಕ್ಕೆ ತಂದು ಪರಿಸರ ಉಳಿವಿಗೆ ಕೈಜೋಡಿಸಬೇಕು. ಬೇಟೆಯಂತಹ ಘಟನೆಗಳು ನಡೆಯದಂತೆ ಅರಣ್ಯ ಇಲಾಖೆ ಎಚ್ಚರಿಕೆ ವಹಿಸಲಿದೆ ಎಂದರು.

‘ಹಾಡಿಗಳಲ್ಲಿ ಸೇರಿದಂತೆ ಅರಣ್ಯ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯ ನಡೆಸಲು ಇಲಾಖೆ ಅಡ್ಡಿಯುಂಟುಮಾಡುತ್ತಿದೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಸರಕಾರಿ ನೌಕರರು. ನಿಯಮ, ಕಾಯಿದೆಯಡಿಯಲ್ಲಿ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆ ನಡುವೆ ಕೆಲ ತಾಂತ್ರಿಕ ಗೊಂದಲಗಳಿವೆ. ಕಾನೂನಿನಡಿ ಅದನ್ನು ಬಗೆಹರಿಸಿಕೊಂಡು ಸಮಸ್ಯೆ ಪರಿಹರಿಸುವ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡುವೆ. ಕಾನೂನು ಬಿಟ್ಟು ಕೆಲಸ ಮಾಡುವುದು ಕಷ್ಟ ಸಾಧ್ಯ. ಆದರೆ, ಪರಿಹಾರೋಪಾಯಗಳಿದ್ದರೆ ಅದರಡಿ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಹೇಳಿದರು.