ಮಡಿಕೇರಿ, ಜೂ ೩: ವೀರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ ಮತ್ತು ವಿವಿಧ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಾಹಿತಿಗಳು ಮತ್ತು ಬರಹಗಾರ ಅರವಿಂದ ಚೊಕ್ಕಾಡಿ, ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ, ನಿವೃತ್ತ ಹಿರಿಯ ಕ್ರೀಡಾ ಅಧಿಕಾರಿ ಸಿ.ಪಿ. ಪೂಣಚ್ಚ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಅರವಿಂದ ಚೊಕ್ಕಾಡಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚು ಒತ್ತು ನೀಡುವಂತೆ ಕರೆ ಕೊಟ್ಟರು. ಇಂದಿನ ವಿದ್ಯಾರ್ಥಿಗಳು ಮತ್ತು ಯುವಜನತೆ ಕನ್ನಡ ಭಾಷೆಯ ಬಳಕೆ ಮತ್ತು ಅದರ ಸ್ಥಿತಿಗತಿಯನ್ನು ಉಲ್ಲೇಖಿಸುತ್ತಾ ಸಾಮಾಜಿಕ ಮಾಧ್ಯಮಗಳು ಬಳಸುವ ಭಾಷೆಯು ಜನಸಾಮಾನ್ಯರ ಭಾವನೆಗಳ ಮೇಲೆ ಬೀರುವ ಪರಿಣಾಮಗಳು ಹಾಗೂ ಅದರಿಂದ ಸಮಾಜದ ಮೇಲೆ ಉಂಟಾಗುತ್ತಿರುವ ವ್ಯತಿರಿಕ್ತವಾದ ಘಟನೆಗಳ ಬಗ್ಗೆ ಅರಿವು ಮೂಡಿಸಿದರು.
ಸಿ.ಪಿ. ಪೂಣಚ್ಚ ಅವರು ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಯಲ್ಲೂ ಆಸಕ್ತಿ ವಹಿಸಿದಾಗ ಮಾತ್ರ ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನಾವು ಸದೃಢವಾಗಿ ಮತ್ತು ಆರೋಗ್ಯಯುತವಾಗಿರಲು ಸಹಕಾರಿಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಯಾನಂದ ಕೆ.ಸಿ. ಅವರು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಪ್ರಸಕ್ತ ಸಾಲಿನ ಕಾಲೇಜಿನ ಸಾಧನೆಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳಿಗಾಗಿ ಕಾಲೇಜಿನಲ್ಲಿ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ೨೦೨೪-೨೫ನೇ ಸಾಲಿನ ‘ಅತ್ಯುತ್ತಮ ವಿದ್ಯಾರ್ಥಿ’ ಪ್ರಶಸ್ತಿಯನ್ನು ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಫಾತಿಮತ್ ರಾಹಿಲ ಅವರಿಗೆ ನೀಡಿ ಗೌರವಿಸಲಾಯಿತು. ಇದರೊಂದಿಗೆ ವಿವಿಧ ವಿಷಯಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನವನ್ನು ವಿತರಣೆ ಹಾಗೂ ವಿವಿಧ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿರುವ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕರ ವೇಣುಗೋಪಾಲ್ ಹೆಚ್.ಎಸ್. ಸ್ವಾಗತಿಸಿದರೆ, ಕಾಲೇಜಿನ ಐಕ್ಯೂ. ಎ.ಸಿ. ಸಂಚಾಲಕ ಚರಿತ ಎಂ.ಆರ್. ಅವರು ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ವಂದನಾರ್ಪಣೆಯನ್ನು ಕ್ರೀಡಾ ಸಮಿತಿ ಸಂಚಾಲಕ ಗುರುಪ್ರಸಾದ್. ಎನ್ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ತೃತೀಯ ಬಿ.ಕಾಂ ವಿದ್ಯಾರ್ಥಿ ಹರೀಶ್ ಪಿ. ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಬೋಧಕ-ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.