ವೀರಾಜಪೇಟೆ, ಮೇ ೨೯: ವೀರಾಜಪೇಟೆ ನಗರದ ಕಾವೇರಿ ಸರ್ಕಲ್‌ನ ಮೂರ್ನಾಡು ರಸ್ತೆಯಲ್ಲಿ ಸುಮಾರು ನೂರು ವರ್ಷಗಳಿಗೂ ಹಿಂದೆ ನಿರ್ಮಿಸಿದ ಮಣ್ಣಿನ ಗೋಡೆಯ ಕಟ್ಟಡವು ಶಿಥಿಲಾವಸ್ಥೆಯಲ್ಲಿದೆ.
ಬಿಳುಗುಂದ ಖಾನ್ ಕುಟುಂಬಸ್ಥರಿಗೆ ಸೇರಿದ ಈ ಜಾಗದಲ್ಲಿ ಅನೇಕ ವರ್ಷಗಳಿಂದ ನೆಲ ಬಾಡಿಗೆ ಆಧಾರದಲ್ಲಿ ಅಂಗಡಿ ಮುಂಗಟ್ಟುಗಳನ್ನು ನಿರ್ಮಾಣ ಮಾಡಿಕೊಂಡು ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದರು. ಇತ್ತೀಚೆಗೆ ಈ ಜಾಗದ ಮಾಲೀಕರು ಕೂಡ ನಿಧನರಾಗಿದ್ದಾರೆ.
ಈ ಕಟ್ಟಡಗಳು ಮಾತ್ರ ಇಂದೊ ನಾಳೆಯೋ ಬೀಳುವ ಪರಿಸ್ಥಿತಿಗೆ ತಲುಪಿದೆ. ಮೇಲ್ಭಾಗದ ಮರಮುಟ್ಟುಗಳು ಗೆದ್ದಲು ಹುಳುಗಳು ತಿಂದು ಹೆಂಚುಗಳು ಕೂಡ ಬಿದ್ದು ಹೋಗುವ ಪರಿಸ್ಥಿತಿಗೆ ತಲುಪಿದೆ. ಈ ಕಟ್ಟಡದಲ್ಲಿ ಈಗಲೂ ಕೆಲವರು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಈಗ ಸುರಿಯುತ್ತಿರುವ ಮಳೆ ಹಾಗೂ ಗಾಳಿಗೆ ಕಟ್ಟಡ ಯಾವಾಗ ಕುಸಿದು ಬೀಳುತ್ತದೋ ಎನ್ನುವ ಭಯ ಸಾರ್ವಜನಿಕರಲ್ಲಿ ಕಾಡುತ್ತಿದೆ.
ಪುರಸಭೆ ಅಧಿಕಾರಿಗಳು ಇತ್ತ ಗಮನ ಹರಿಸಿ ಮುಂದೆ ಆಗುವ ದೊಡ್ಡ ಅನಾಹುತ ತಡೆಯಲು ಮುಂದಾಗಬೇಕಿದೆ. ಇದರ ಬಗ್ಗೆ ಕ್ರಮ ವಹಿಸಲು ಸಾರ್ವಜನಿಕರು ಮನವಿ ಮಾಡಿದ್ದಾರೆ.