ಪೊನ್ನಂಪೇಟೆ, ಮೇ ೨೮: ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಸಿ.ಇ.ಟಿ ಕಾಲೇಜಿನ ವಿದ್ಯಾರ್ಥಿನಿ ತೇಜಸ್ವಿನಿ (೧೯) ಎಂಬವಳು ಕಾಲೇಜಿನ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ತಾ. ೨೮ ರಂದು ಸಂಜೆ ನಡೆದಿದೆ.

ಮೃತ ವಿದ್ಯಾರ್ಥಿನಿ ರಾಯಚೂರು ಜಿಲ್ಲೆಯ ಲಿಂಗಸೂರಿನ ಮಹಾಂತಪ್ಪ ಎಂಬವರ ಏಕೈಕ ಪುತ್ರಿಯಾಗಿದ್ದು, ಪ್ರಥಮ ವರ್ಷದ ಎ.ಐ.ಎಂ.ಎಲ್ ಇಂಜಿನಿಯರಿAಗ್ ವ್ಯಾಸಂಗ ಮಾಡುತ್ತಿದ್ದಳು.

ಮೂರು ದಿನಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಆಕೆ, ಅಂದಿನ ಕಾರ್ಯಕ್ರಮಕ್ಕೆ ಬಾರದವರಿಗೆ ಇಂದು ಕೂಡ ಸಿಹಿ ಹಂಚಿದ್ದಳು. ತರಗತಿಯಿಂದ ಆಗಮಿಸಿದ ನಂತರ ಸಂಜೆ ೪ ಗಂಟೆಗೆ ಹಾಸ್ಟೆಲ್ ಸೇರಿಕೊಂಡಿದ್ದಾಳೆ ಎನ್ನಲಾಗಿದ್ದು, ಸಂಜೆ ೪.೩೦ ರ ಸಮಯದಲ್ಲಿ ಆಕೆಯ ಸಹಪಾಠಿ ಕೊಠಡಿಗೆ ಹೋದಾಗ ಬಾಗಿಲು ಒಳಗಿನಿಂದ ಲಾಕ್ ಮಾಡಿಕೊಂಡಿದ್ದಳು. ಎಷ್ಟೇ ಕೂಗಿದರೂ ಬಾರದಿದ್ದಾಗ ಹಾಸ್ಟೆಲ್ ಮೇಲ್ವಿಚಾರಕರಿಗೆ ವಿಷಯ ತಿಳಿಸಿ ಬಾಗಿಲು ತೆಗೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ನಂತರ ಪೊನ್ನಂಪೇಟೆ ಪೊಲೀಸರಿಗೆ ಮಾಹಿತಿ ತಿಳಿಸಲಾಗಿದೆ. ಮೃತ ವಿದ್ಯಾರ್ಥಿನಿಯ ಡೆತ್ ನೋಟ್ ಪತ್ತೆಯಾಗಿದ್ದು, ತನಗೆ ಓದಲು ಇಷ್ಟವಿಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಪೊನ್ನಂಪೇಟೆ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.