ಮಡಿಕೇರಿ, ಮೇ ೨೮ : ಜಿಲ್ಲೆಯಲ್ಲಿ ಮಳೆ - ಗಾಳಿಯ ಅಬ್ಬರ ಇಂದು ಕಡಿಮೆಯಾಗಲಿದೆ, ನಾಳೆಯಿಂದ ಒಂದಷ್ಟು ಸುಧಾರಿಸಿಕೊಳ್ಳಬಹುದೇನೋ ಎಂಬ ಜನರ ನಿರೀಕ್ಷೆ ಹುಸಿಯಾಗುತ್ತಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ-ಗಾಳಿಯ ಆರ್ಭಟ ಮತ್ತೂ ಮುಂದುವರೆಯುತ್ತಿದೆ. ಮಂಗಳವಾರ ಒಂದಷ್ಟು ತಗ್ಗಿದಂತಿದ್ದ ಮಳೆ ಮತ್ತೆ ರಾತ್ತಿಯಿಂದ ಆರ್ಭಟಿಸಿದೆ. ಜಿಲ್ಲೆಯಾದ್ಯಂತ ಮಳೆ-ಗಾಳಿಯ ರಭಸ ಹಿಂದಿನ ದಿನಗಳಂತೆಯೇ ಇರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು ಆತಂಕದ ಪರಿಸ್ಥಿತಿ ಕಾಡುತ್ತಲೇ ಇದೆ. ಮಳೆಯೊಂದಿಗೆ ಗಾಳಿಯ ಅಬ್ಬರ ಕಡಿಮೆಯಾಗದಿರುವುದು ಹಲವು ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ವಿದ್ಯುತ್ ವ್ಯವಸ್ಥೆ ಇನ್ನೂ ಸಮರ್ಪಕವಾಗಿಲ್ಲ. ಸೆಸ್ಕ್ನ ಸಿಬ್ಬಂದಿ ಉಂಟಾಗಿರುವ ಅನಾಹುತಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದಾರೆ. ನದಿ ತೊರೆಗಳಲ್ಲಿ ನೀರಿನ ಮಟ್ಟ ಯಥಾ ಸ್ಥಿತಿಯಲ್ಲಿದೆ. ಪ್ರಸ್ತುತ ಇಡೀ ಜಿಲ್ಲೆ ನೈಜ ಮಳೆಗಾಲದ ಸನ್ನಿವೇಶವನ್ನು ಎದುರಿಸುತ್ತಿದೆ. ದಿಢೀರನೇ ಎದುರಾದ ವಾತಾವರಣದ ಅಸಹಜತೆಯಿಂದಾಗಿ ಜನರು ಹಲವಷ್ಟು ಸಮಸ್ಯೆಗಳನ್ನು ಕಾಣುವಂತಾಗಿದೆ.
ಜಿಲ್ಲೆಯಲ್ಲಿ ಸರಾಸರಿ ೨.೫೦ ಇಂಚು ಮಳೆ ; ಈತನಕ ೨೩.೫೭ ಇಂಚು
ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಕಳೆದ ೨೪ ಗಂಟೆಗಳಲ್ಲಿ ಸರಾಸರಿ ೨.೫೦ ಇಂಚು ಮಳೆ ದಾಖಲಾಗಿದೆ. ಜನವರಿಯಿಂದ ಈತನಕ ಜಿಲ್ಲೆಯಲ್ಲಿ ೨೩.೫೭ ಇಂಚುಗಳಷ್ಟು ಮಳೆ ಸುರಿದಿದೆ. ಕಳೆದ ವರ್ಷ ಈ ಅವಧಿಯಲ್ಲಿ ೧೩.೦೩ ಇಂಚು ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ ಕಳೆದ ೨೪ ಗಂಟೆಗಳಲ್ಲಿ ೨.೬೩ ಇಂಚು ಮಳೆಯಾಗಿದೆ. ಜನವರಿಯಿಂದ ಈತನಕ ತಾಲೂಕಿನಲ್ಲಿ ೩೨.೨೪ ಇಂಚು ಮಳೆ ಬಿದ್ದಿದೆ. ಕಳೆದ ವರ್ಷ ಈ ಅವಧಿಯಲ್ಲಿ ೧೭.೯೦ ಇಂಚು ಮಳೆಯಾಗಿತ್ತು.
ವೀರಾಜಪೇಟೆ ತಾಲೂಕಿನಲ್ಲಿ ೨೪ ಗಂಟೆಗಳಲ್ಲಿ ೧.೩೭ ಇಂಚು, ಪೊನ್ನಂಪೇಟೆ ೧.೬೯, ಸೋಮವಾರಪೇಟೆ ೪.೮೫ ಹಾಗೂ ಕುಶಾಲನಗರ ತಾಲೂಕಿನಲ್ಲಿ ೨ ಇಂಚು ಮಳೆಯಾಗಿದೆ.
ಜನವರಿಯಿಂದ ಈತನಕ ವೀರಾಜಪೇಟೆ ತಾಲೂಕಿನಲ್ಲಿ ೨೪.೫೫ ಇಂಚು, ಪೊನ್ನಂಪೇಟೆ ೨೨.೪೯, ಸೋಮವಾರಪೇಟೆ ೨೦.೯೬ ಹಾಗೂ ಕುಶಾಲನಗರ ತಾಲೂಕಿನಲ್ಲಿ ೧೭.೬೦ ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಈ ಪ್ರಮಾಣ ವೀರಾಜಪೇಟೆ ತಾಲೂಕಿನಲ್ಲಿ ೯.೮೪, ಪೊನ್ನಂಪೇಟೆ ೧೩.೩೨, ಸೋಮವಾರಪೇಟೆ ೧೦.೦೪ ಹಾಗೂ ಕುಶಾಲನಗರ ತಾಲೂಕಿನಲ್ಲಿ ೧೪.೦೬ ಇಂಚುಗಳಾಗಿತ್ತು.
ಹೋಬಳಿವಾರು ವಿವರ
ಕಳೆದ ೨೪ ಗಂಟೆಗಳಲ್ಲಿ ಮಡಿಕೇರಿ ಕ.ಸ.ಬಾ ೩.೨೮, ನಾಪೋಕ್ಲು ೨.೬೭, ಸಂಪಾಜೆ ೦.೪೪ ಹಾಗೂ ಭಾಗಮಂಡಲದಲ್ಲಿ ೪.೧೪ ಇಂಚು ಮಳೆಯಾಗಿದೆ. ವೀರಾಜಪೇಟೆ ಕಸಬಾ ೧.೩೪, ಅಮ್ಮತ್ತಿ ೧.೪೦, ಹುದಿಕೇರಿ ೨.೬೪, ಶ್ರೀಮಂಗಲ ೨.೪೪, ಬಾಳೆಲೆ ೦.೭೨, ಪೊನ್ನಂಪೇಟೆ ೧, ಸೋಮವಾರಪೇಟೆ, ಶನಿವಾರಸಂತೆ ೫, ಶಾಂತಳ್ಳಿ ೭, ಕೊಡ್ಲಿಪೇಟೆ ೨.೫೧, ಕುಶಾಲನಗರ ೧.೦೪ ಹಾಗೂ ಸುಂಟಿಕೊಪ್ಪದಲ್ಲಿ ೨.೯೨ ಇಂಚು ಮಳೆಯಾಗಿದೆ.
ಮುಳ್ಳೂರು: ಭಾರೀ ಮಳೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಸಮಿಪದ ನಿಡ್ತ ಗ್ರಾ.ಪಂ. ಸಭಾಂಗಣದಲ್ಲಿ ಮಳೆ ವಿಪತ್ತು ಮುಂಜಾಗ್ರತೆ ಟಾಸ್ಕ್ಫೋರ್ಸ್ ಸಭೆಯನ್ನು ನಿಡ್ತ ಗ್ರಾ.ಪಂ.ಅಧ್ಯಕ್ಷ ಟಿ.ಕೆ.ಅಶೋಕ್ ಅಧ್ಯಕ್ಷತೆಯಲ್ಲಿ ನಡೆಯಿತು. ನಿಡ್ತ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾ.ಪಂ.ಯಲ್ಲಿ ಮಳೆಯಿಂದ ಗ್ರಾಮಸ್ಥರಿಗೆ ಸಮಸ್ಯೆಯಾಗದಂತೆ ಮುಂಜಾಗ್ರತೆ ಕ್ರಮಕೈಗೊಳ್ಳುವ ಉದ್ದೇಶದಿಂದ ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆಯನ್ನು ನಡೆಸಲಾಯಿತು. (ಮೊದಲ ಪುಟದಿಂದ) ಸಭೆಯಲ್ಲಿ ಭಾಗವಹಿಸಿದ್ದ ನಿಡ್ತ ವೃತ್ತ ಗ್ರಾಮ ಆಡಳಿತ ಅಧಿಕಾರಿ ರಜಾಕ್ ಮಾತನಾಡಿ, ಗ್ರಾ.ಪಂ.ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ ಈ ಹಿನ್ನೆಲೆಯಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಶಿಥಿಲ ಸ್ಥಿತಿಯಲ್ಲಿರುವ ಮನೆಗಳನ್ನು ಗುರುತಿಸಿ ಎಚ್ಚರವಹಿಸುವುದು ಅಗತ್ಯ. ಮನೆ ಮಂದಿಯನ್ನು ಆಲೂರು ಸಿದ್ದಾಪುರ ಮೊರಾರ್ಜಿ ಶಾಲೆಯಲ್ಲಿ ತೆರೆದಿರುವ ಗಂಜಿ ಕೇಂದ್ರ ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದರು.
ಸಭೆಯಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಬೀಳುವ ಹಂತದಲ್ಲಿರುವ ಮರಗಳನ್ನು ತೆರವುಗೊಳಿಸುವುದು, ಬೀಳುವ ಹಂತದಲ್ಲಿರುವ ವಿದ್ಯುತ್ ಕಂಬಗಳನ್ನು ದುರಸ್ತಿಪಡಿಸುವುದು, ಮಳೆಯಿಂದ ಸಮಸ್ಯೆಯಾದಾಗ ಗ್ರಾಮಸ್ಥರು ಸಂಬAಧ ಪಟ್ಟ ಗ್ರಾ.ಪಂ., ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಮುಂದಾಗುವ ಅನಾಹುತವನ್ನು ತಪ್ಪಿಸಲು ಟಾಸ್ಕ್ಫೋರ್ಸ್ ಸಿದ್ಧ ಇರಬೇಕಾಗುತ್ತದೆ ಇನ್ನು ಮುಂತಾದ ಮುಂಜಾಗ್ರತಾ ಕ್ರಮದ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿ ವೇದಪ್ರಿಯಾ ಮಾಹಿತಿ ನೀಡಿದರು. ಈ ಸಂದರ್ಭ ಪಿಡಿಓ ಮಾನಸ, ಗ್ರಾ.ಪಂ.ಸದಸ್ಯರಾದ ಎಸ್.ಎಸ್. ಕಾರ್ತಿಕ್, ತಸ್ಲಿಂ, ಹರೀಶ್‌ಕುಮಾರ್, ಪ್ರಮುಖರಾದ ಸುಬ್ಬಪ್ಪ, ಪುಟ್ಟಣ್ಣ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ.ಸಿಬ್ಬAದಿ ಹಾಜರಿದ್ದರು.
ಗುಡ್ಡೆಹೊಸೂರು: ಭಾರಿ ಗಾಳಿ - ಮಳೆಗೆ ಜೋಳ ಬೆಳೆ ಕೊಚ್ಚಿ ಹೋಗಿ ರೈತರಿಗೆ ನಷ್ಟ ಉಂಟಾಗಿದೆ. ಬಸವನಹಳ್ಳಿ ಗ್ರಾಮದಲ್ಲಿ ಬಿ.ಎಸ್. ಮಹೇಶ್ ಅವರು ಒಂದು ಎಕರೆ ಪ್ರದೇಶದಲ್ಲಿ ಮುಸುಕಿನ ಜೋಳ ಕೃಷಿ ಮಾಡಿದ್ದರು. ಆದರೆ, ಮಳೆ ನೀರು ಗದ್ದೆಯಲ್ಲಿ ನಿಂತು ಜೋಳ ಬೆಳೆ ಹಾಳಾಗಿದೆ. ಮುಳ್ಳೂರು: ಮುಂದುವರೆಯುತ್ತಿರುವ ಗಾಳಿ ಸಹಿತ ಮಳೆಯಿಂದ ನಿಡ್ತ ಗ್ರಾ.ಪಂ.ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು, ಮರಗಳು ಉರುಳಿ ಬಿದ್ದಿವೆ.
ನಿಡ್ತ ಸರಕಾರಿ ಶಾಲೆ ಬಳಿಯ ಹಾರೆಹೊಸೂರು ರಸ್ತೆ ಬದಿಯಲ್ಲಿ ಭಾರಿ ಗಾತ್ರದ ಮರದ ಕೊಂಬೆ ವಿದ್ಯುತ್ ತಂತಿಯ ಮೇಲೆ ಮುರಿದು ಬಿದ್ದ ಪರಿಣಾಮ ವಿದ್ಯುತ್ ಕಂಬ ಹಾನಿಯಾಗಿದೆ. ಇದರಿಂದ ನಿಡ್ತ ಗ್ರಾ.ಪಂ.ಯಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು, ಮಾಹಿತಿ ತಿಳಿದ ಚೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಂದು ರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬ, ಮರದ ಕೊಂಬೆಯನ್ನು ತೆರವುಗೊಳಿಸಿದರು.
ನಿಡ್ತ ಸಮಿಪದ ಕಾರ್ಗೋಡು ಬಳಿ ಶನಿವಾರಸಂತೆ ರಸ್ತೆ ಬದಿಯಲ್ಲಿ ಮರವೊಂದು ಬೀಳುವ ಸ್ಥಿತಿಯಲ್ಲಿರುವುದನ್ನು ಗಮನಿಸಿದ ವಾಹನ ಸವಾರರು ವಾಹನವನ್ನು ನಿಲ್ಲಿಸಿ, ಗ್ರಾ.ಪಂ.ಗೆ ಮಾಹಿತಿ ನೀಡಿದ ಮೇರೆ ಟಾಸ್ಕ್ಫೋರ್ಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಬೀಳುವ ಹಂತದಲ್ಲಿದ್ದ ಮರವನ್ನು ತೆರವುಗೊಳಿಸುವ ಮೂಲಕ ಅನಾಹುತವನ್ನು ತಪ್ಪಿಸಿದರು.
ಕೂಡಿಗೆ: ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾಬಾಯಿ ಅಧ್ಯಕ್ಷತೆಯಲ್ಲಿ ಮಳೆಗಾಲ ಟಾಸ್ಕ್ ಫೋರ್ಸ್ ಸಮಿತಿ ಸಭೆ ಜರುಗಿತು. ಕಾವೇರಿ ನದಿ ಅಂಚಿನ ನಿವಾಸಿಗಳಿಗೆ ಸುರಕ್ಷತೆ ಕಲ್ಪಿಸುವುದು, ಗ್ರಾಮದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆಗಳು ನಡೆದವು.
ರಸ್ತೆ ಬದಿಯಲ್ಲಿ ಬೀಳುವ ಹಂತದ ಮರ, ಕೊಂಬೆಗಳ ತೆರವಿಗೆ ಸೂಚಿಸಲಾಯಿತು. ಅಪಾಯದಂಚಿನಲ್ಲಿ ವಾಸಿಸುತ್ತಿರುವ ಸ್ಥಳಾಂತರಕ್ಕೆ ನೋಟೀಸ್ ನೀಡಲಾಗಿದೆ ಎಂದು ಕಾರ್ಯದರ್ಶಿ ಕೆ.ಸಿ. ರವಿ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜ್, ಸದಸ್ಯರಾದ ಸರಿತ, ಭಾಗೀರಥಿ, ಧರ್ಮಪ್ಪ, ಪ್ರದೀಪ್, ಶಿರಂಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಪರಿವೀಕ್ಷಕರು, ಆಶಾ ಕಾರ್ಯಕರ್ತೆರು ಸೇರಿದಂತೆ ಇನ್ನಿತರರು ಹಾಜರಿದ್ದರು. ಕೂಡಿಗೆ: ಅಪಾಯದ ಸ್ಥಳಗಳಲ್ಲಿ ವಾಸಿಸುತ್ತಿರುವ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧೫ ಕುಟುಂಬಗಳಿಗೆ ಗ್ರಾ.ಪಂ.ನಿAದ ಸ್ಥಳಾಂತರಕ್ಕೆ ನೋಟೀಸ್ ನೀಡಲಾಗಿದೆ.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೇಮಲತಾ, ಕಾರ್ಯದರ್ಶಿ ಕೆ.ಸಿ. ರವಿ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಚೆಯ್ಯಂಡಾಣೆ: ಅಪಾಯದ ಸ್ಥಳಗಳಲ್ಲಿ ವಾಸಿಸುವವರಿಗೆ ಸ್ಥಳಾಂತರಗೊಳ್ಳುವAತೆ ಕಂದಾಯ ಇಲಾಖೆ ಮೂಲಕ ನೋಟೀಸ್ ನೀಡಲಾಯಿತು. ಜೊತೆಗೆ ರಸ್ತೆ ಬದಿಗಳಲ್ಲಿ ಸಂಗ್ರಹಿಸಿಟ್ಟಿರುವ ವಸ್ತುಗಳನ್ನು ತೆರವು ಮಾಡುವಂತೆ ಸೂಚಿಸಲಾಗಿದೆ.
ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡಪಾಲ ಮುಖ್ಯರಸ್ತೆಯ ಬದಿಯಲ್ಲಿ ಶೇಖರಿಸಿಟ್ಟ ವಸ್ತುಗಳನ್ನು ಕೂಡಲೇ ತೆರವುಗೊಳಿಸಲು ಹಾಗೂ ನದಿ ಬದಿಯಲ್ಲಿ ವಾಸಿಸುವ ಕುಟುಂಬಗಳು ಯೋಗ್ಯವಾದ ಸ್ಥಳಕ್ಕೆ ಸ್ಥಳಾಂತರವಾಗುವAತೆ ಸೂಚಿಸಲಾಗಿದೆ. ಎಡಪಾಲ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಸೌದೆ, ಕಲ್ಲು, ಮಣ್ಣು, ಇಟ್ಟಿಗೆ, ಮರಮುಟ್ಟುಗಳನ್ನು ಶೇಖರಿಸಿಟ್ಟು ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಹಲವು ಬಾರಿ ದೂರುಗಳು ಬಂದ ಹಿನ್ನೆಲೆಯಲ್ಲಿ ಹಾಗೂ ಮುಂದಿನ ದಿನಗಳಲ್ಲಿ ಶಾಲಾ ವಾಹನಗಳ ಸುಗಮ ಸಂಚಾರಕ್ಕೆ ಅನುವಾಗುವ ರೀತಿಯಲ್ಲಿ ರಸ್ತೆಯ ಬದಿಯಲ್ಲಿರಿಸಿರುವ ವಸ್ತುಗಳನ್ನು ಕೂಡಲೇ ತೆರವುಗೊಳಿಸಲು ಸಂಬAಧಪಟ್ಟವರಿಗೆ ಸೂಚನೆ ನೀಡಲಾಗಿದೆ.
ಅರಪಟ್ಟು ಗ್ರಾಮದ ಎಡಪಾಲ ಪೈಸಾರಿ ತೂತೆಕಂಡಿ ಹೊಳೆಯ ಸಮೀಪ ಅನುಮತಿ ಇಲ್ಲದೆ ಲೈನ್‌ಮನೆ ಕಟ್ಟಡ ನಿರ್ಮಿಸಿದ್ದು, ಇದರ ತೆರವಿಗೆ ಆದೇಶಿಸಲಾಗಿದೆ. ಹೊಳೆಯ ಸಮೀಪವಿರುವ ೭ ಕುಟುಂಬಗಳು ಸೂಕ್ತ ಹಾಗೂ ಯೋಗ್ಯವಾದ ಸ್ಥಳಕ್ಕೆ ಅಥವಾ ಸಂಬAಧಿಕರ ಮನೆಯಲ್ಲಿ ಆಶ್ರಯ ಪಡೆದುಕೊಳ್ಳುವಂತೆ ನೋಟೀಸ್ ನೀಡಲಾಗಿದೆ. ವಸ್ತುಗಳನ್ನು ಕೂಡಲೇ ತೆರವುಗೊಳಿಸದಿದ್ದಲ್ಲಿ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷ ವಿನೋದ್ ನಾಣಯ್ಯ, ಅಭಿವೃದ್ಧಿ ಅಧಿಕಾರಿ ಆಶಾಕುಮಾರಿ, ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗರಾದ ಅಮೃತ, ಸ್ವಾತಿ, ಗ್ರಾ.ಪಂ. ಸದಸ್ಯರಾದ ಮಮ್ಮದ್, ಸುಬೈರ್, ರಾಣಿ ಗಣಪತಿ, ನೇತ್ರಾವತಿ, ಪುಷ್ಪ, ವಿಲೀನ್ ಕರವಸೂಲಿಗಾರ ದಿನೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಕೂಡಿಗೆ: ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹೇಶ್ ಎಂಬವರ ಮನೆಯ ಗೋಡೆ ಕುಸಿದು ನಷ್ಟ ಸಂಭವಿಸಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೇಮಲತಾ, ಕಾರ್ಯದರ್ಶಿ ಕೆ.ಸಿ. ರವಿ ಸೇರಿದಂತೆ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಡಿಕೇರಿ: ಮಳೆಯಿಂದ ನೀರು ತುಂಬಿ ಪ್ರವಾಹ ಪರಿಸ್ಥಿತಿ ಎದುರಾದ ಹಿನ್ನೆಲೆ ತೋಡು ಶುಚಿ ಕಾರ್ಯವನ್ನು ನಗರಸಭೆಯಿಂದ ಕೈಗೊಳ್ಳಲಾಯಿತು.
ಕೆಲ ದಿನಗಳ ಹಿಂದೆ ಭಾರಿ ಮಳೆಯಿಂದ ನೀರು ತುಂಬಿ ಕಾವೇರಿ ಹಾಲ್‌ಗೆ ನುಗ್ಗಿತ್ತು. ಈ ಹಿನ್ನೆಲೆ ನಗರಸಭಾ ಸದಸ್ಯ ಅರುಣ್ ಶೆಟ್ಟಿ ಮನವಿ ಮೇರೆಗೆ ನೀರು ಸರಾಗವಾಗಿ ಹರಿಯುವಂತೆ ಸ್ವಚ್ಛತಾ ಕಾರ್ಯ ನಡೆಸಿ ಕ್ರಮಕೈಗೊಳ್ಳಲಾಯಿತು.
ಇದರೊಂದಿಗೆ ಟಿ.ಜಾನ್, ಕಾವೇರಿ ಬಡಾವಣೆಗಳಲ್ಲಿಯೂ ರಾಜಕಾಲುವೆಯನ್ನು ವಾರ್ಡ್ ಸದಸ್ಯ, ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ ಮುಂದಾಳತ್ವದಲ್ಲಿ ಸ್ವಚ್ಛಗೊಳಿಸಲಾಗಿದೆ. ಕಡಂಗ: ಈ ರಸ್ತೆ ನೋಡಿದವರು ‘ಇದು ರಸ್ತೆಯೋ, ಕೆಸರು ಗದ್ದೆಯೋ’ ಎಂದು ಪ್ರಶ್ನಿಸುವ ಮಟ್ಟಿಗೆ ಕಡಂಗ ಮುರೂರುವಿನಿಂದ ಚೌಕಿಗೆ ಸಂಪರ್ಕಿಸುವ ರಸ್ತೆಯ ಪರಿಸ್ಥಿತಿ ತಲುಪಿದೆ.
ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗ ಮುರೂರುವಿನಿಂದ ಚೌಕಿಗೆ ತೆರಳುವ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಹಾಗೂ ಸಾರ್ವಜನಿಕರು ಸಂಚರಿಸುತ್ತಾರೆ. ರಸ್ತೆ ಡಾಂಬರೀಕರಣ ಆಗದ ಪರಿಣಾಮ ಸರ್ಕಸ್ ಮಾಡಿಕೊಂಡು ಓಡಾಡುವಂತಾಗಿದೆ.
ತೀವ್ರ ಮಳೆಯಿಂದ ರಸ್ತೆಯಲ್ಲಿ ನೀರು ನಿಂತಿದ್ದು, ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಈ ಮಾರ್ಗದ ದುರಸ್ತಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಸ್ಥಳೀಯ ಸಂಶುದ್ದೀನ್ ಎಂಬವರು ರಸ್ತೆ ಮಧ್ಯೆಯಿದ್ದ ನೀರನ್ನು ತೆರವುಗೊಳಿಸಿ ಸಹಕರಿಸಿದ್ದಾರೆ. ಸಿದ್ದಾಪುರ: ಮರದ ಕೊಂಬೆ ಬಿದ್ದು ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ರೂ. ೫ ಲಕ್ಷ ಪರಿಹಾರದ ಆದೇಶ ಪ್ರತಿಯನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ವಿತರಿಸಿದರು.
ಮಾಲ್ದಾರೆಯ ಬಾಡಗ ಬಾಣಂಗಾಲದಲ್ಲಿ ಮಂಗಳವಾರ ನಡೆದ ಘಟನೆಯಲ್ಲಿ ವಿಷ್ಣು ಬೆಳ್ಯಪ್ಪ ಎಂಬವರು ಸಾವನ್ನಪ್ಪಿದ್ದರು. ಅವರ ನಿವಾಸಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪರಿಹಾರದ ಆದೇಶ ಪ್ರತಿ ವಿತರಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭ ವೀರಾಜಪೇಟೆ ತಹಶೀಲ್ದಾರ್ ಅನಂತ್ ಶಂಕರ್, ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಮತ್ತು ಗ್ರಾಮ ಆಡಳಿತ ಅಧಿಕಾರಿ ಹಾಜರಿದ್ದರು.
ಸಿದ್ದಾಪುರ: ಧಾರಾಕಾರ ಮಳೆ ಹಾಗೂ ಗಾಳಿಗೆ ಸಿಲುಕಿ ಮನೆಯ ಆವರಣ ಗೋಡೆ ಕುಸಿದು ಬಿದ್ದಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ.
ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ಸಿದ್ದಾಪುರದ ಗುಹ್ಯ ಗ್ರಾಮದ ನಿವಾಸಿ ಧನು ಕಾವೇರಮ್ಮ ಎಂಬವರಿಗೆ ಸೇರಿದ ಮನೆಯ ಮುಂಭಾಗದ ಆವರಣ ಗೋಡೆ ಮಳೆ-ಗಾಳಿಗೆ ಸಿಲುಕಿ ಕುಸಿದು ಬಿದ್ದಿದೆ. ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟಗೊಂಡಿದೆ ಎಂದು ಧನು ಕಾವೇರಮ್ಮ ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಹಾಗೂ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಮತ್ತು ಲೋಕೋಪಯೋಗಿ ಇಲಾಖೆಗೆ ದೂರು ನೀಡಿದ್ದಾರೆ.
ಸಿದ್ದಾಪುರ: ಧಾರಾಕಾರ ಮಳೆ ಗಾಳಿಯಿಂದ ಮನೆಯ ಗೋಡೆ ಕುಸಿದು ಮನೆ ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ಚೆನ್ನಯ್ಯನಕೋಟೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಗ್ರಾಮದ ನಿವಾಸಿ ಲೋಲಚಂದ್ರ ದಂಪತಿ ರಾತ್ರಿ ಮನೆಯಲ್ಲಿ ನಿದ್ರಿಸುವ ಸಂದರ್ಭದಲ್ಲಿ ಏಕಾಏಕಿ ಮನೆಯ ಗೋಡೆ ಕುಸಿದು ಬಿದ್ದಿದೆ. ಇದರ ಶಬ್ದದಿಂದ ಎಚ್ಚರಗೊಂಡು ಮನೆಯಿಂದ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಸದಸ್ಯೆ ಶೀಲಾ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರಕ್ಕೆ ಕಂದಾಯ ಇಲಾಖೆಗೆ ಮನವಿ ಮಾಡಿದ್ದಾರೆ. ವೀರಾಜಪೇಟೆ: ವೀರಾಜಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸಮಸ್ಯೆ ಹೆಚ್ಚಾಗಿದೆ.
ಮಂಗಳವಾರ ರಾತ್ರಿಯಿಡೀ ನಿರಂತರವಾಗಿ ಸುರಿದ ಮಳೆ ಬುಧವಾರವೂ ಕೂಡ ಮುಂದುವರೆಯಿತು. ಕೆಲವು ಸಮಯ ಬಿಡುವು ನೀಡಿದ ವರುಣ ಕೆಲ ಸಮಯದ ನಂತರ ಧಾರಾಕಾರವಾಗಿ ಸುರಿಯಿತು. ಮಳೆಯಿಂದಾಗಿ ಪಟ್ಟಣದಲ್ಲಿ ಎಂದಿನ ಜನದಟ್ಟಣೆ ಕಂಡು ಬರಲಿಲ್ಲ.
ಪಟ್ಟಣದಲ್ಲಿ ಬುಧವಾರ ಸಂತೆ ದಿನವಾದ ಕಾರಣ ಮಳೆಯ ನಡುವೆ ವಾಹನದ ಓಡಾಟ ಹೆಚ್ಚಾಗಿದ್ದು, ನಿರಂತರವಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಗ್ರಾಮೀಣ ಭಾಗಗಳಲ್ಲಿ ಮಳೆಯಿಂದ ಮರಗಳು ಧರೆಗುರುಳುವ ಮೂಲಕ ವಿದ್ಯುತ್ ಕಂಬಗಳು ಮುರಿದು ಬಿದ್ದವು. ಈ ಎಲ್ಲಾ ಹಂತಗಳಲ್ಲಿ ಚೆಸ್ಕಾಂ ಇಲಾಖಾ ಸಿಬ್ಬಂದಿಗಳು ಆದಷ್ಟು ತುರ್ತು ಕ್ರಮ ಕೈಗೊಂಡು ವಿದ್ಯುತ್ ಮರು ಸಂಪರ್ಕವನ್ನು ಕಲ್ಪಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ತಾಲೂಕಿನ ಹೆಗ್ಗಳ ತೋರ, ಕೆದಮುಳ್ಳೂರು, ಪಾಲಂಗಾಲ ಭಾಗದಲ್ಲಿ ಅತಿ ಹೆಚ್ಚು ಮಳೆಯೊಂದಿಗೆ ಮರ ಬಿದ್ದು ಕಂಬಗಳು ಹಾನಿಗೊಳಗಾಗಿ ವಿದ್ಯುತ್ ಸಮಸ್ಯೆ ಬಿಗಡಾಯಿಸಿದೆ. ಕೆದಮುಳ್ಳೂರು, ಪಾಲಂಗಾಲ, ಹೆಗ್ಗಳ, ತೋರ, ಕುಟ್ಟಂದಿ, ಶೆಟ್ಟಿಗೇರಿ, ಅಮ್ಮತ್ತಿ, ಪೆರುಂಬಾಡಿ ಸೇರಿದಂತೆ ಹಲವು ಗ್ರಾಮೀಣ ಭಾಗದಲ್ಲಿ ೬ ದಿನಗಳಿಂದ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.
ಕೆಲವು ಕಡೆ ಮಳೆ ಕಡಿಮೆಯಿದ್ದರೂ ಗಾಳಿಯ ರಭಸ ಹೆಚ್ಚಾಗಿದೆ. ಹಗಲು - ರಾತ್ರಿ ಕಾರ್ಯಾಚರಣೆ ಮಾಡಿ ಸಾಧ್ಯವಾದಷ್ಟು ವಿದ್ಯುತ್ ಸಮಸ್ಯೆ ನೀಗಿಸಲು ಪ್ರಯತ್ನಿಸಲಾಗುತ್ತಿದೆ. ವೀರಾಜಪೇಟೆ ತಾಲೂಕಿನಲ್ಲಿ ಅಧಿಕ ಸಮಸ್ಯೆ ಉಂಟಾಗಿದೆ. ಗ್ರಾಮೀಣ ಭಾಗದಲ್ಲಿ ಹಾನಿಗೀಡಾದ ವಿದ್ಯುತ್ ಸಮಸ್ಯೆ ನೀಗಿಸಲು ಕೆಲಸ ಮುಂದುವರಿಸಲಾಗಿದೆ ಎಂದು ಚೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್ ಮಾಹಿತಿ ನೀಡಿದ್ದಾರೆ.
ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಬುಧವಾರ ಸುರಿದ ಗಾಳಿ - ಮಳೆಗೆ ಪೊದಕೋಟೆ ಗ್ರಾಮದ ನಿವಾಸಿ ಒಕ್ಕಲಿಗರ ಗೌರಮ್ಮ ಎಂಬವರ ವಾಸದ ಮನೆಗೆ ಹಾನಿಯಾಗಿದೆ. ಮಳೆಯಿಂದಾಗಿ ಗೋಡೆ ಬಿದ್ದು ಭಾಗಶಃ ಹಾನಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶನಿವಾರಸಂತೆ: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಗ್ರಾಮಗಳಲ್ಲಿ ಬುಧವಾರವೂ ಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಬಿಳಾಹ ಗ್ರಾಮದ ಸುದೀಪ್-ಮಾಲತಿ ದಂಪತಿಗೆ ಸೇರಿದ ವಾಸದ ಮನೆ ಕುಸಿದು ಬಿದ್ದಿದೆ.
ಸುದೀಪ್-ಮಾಲತಿ ದಂಪತಿ ಗ್ರಾಮದಲ್ಲಿ ೭೦ ವರ್ಷಗಳಷ್ಟು ಹಳೆಯ ಮನೆಯಲ್ಲಿ ವಾಸವಿದ್ದು ೪ ವರ್ಷಗಳಿಂದ ಪ್ರತಿ ಮಳೆಗಾಲದಲ್ಲೂ ಮನೆ ಹಂತಹAತವಾಗಿ ಕುಸಿಯುತ್ತಾ ಬಂದಿದೆ. ಕೂಲಿ ಮಾಡುತ್ತಾ ಕಡುಬಡತನದಲ್ಲಿ ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ.
ತಮಗೆ ಹಿರಿಯರ ಹಳೇ ಮನೆಯ ಹೊರತು ಬೇರೆನೂ ಆದಾಯವಿಲ್ಲ. ವಾಸ ಮಾಡಲು ಯೋಗ್ಯವಲ್ಲದ ಶಿಥಿಲಾವಸ್ಥೆಯಲ್ಲಿರುವ ಮನೆಯಲ್ಲೇ ಕಷ್ಟದಿಂದ ಪ್ರತಿ ಮಳೆಗಾಲವನ್ನು ಜೀವಭಯದಿಂದ ಕಳೆಯುವಂತಾಗಿದೆ. ಮಳೆ ಹೀಗೆ ಮುಂದುವರೆದರೆ ಮನೆ ಸಂಪೂರ್ಣ ಕುಸಿದು ಪ್ರಾಣಾಪಾಯ ಸಂಭವಿಸುವ ಭೀತಿ ಮೂಡಿದೆ. ದುಂಡಳ್ಳಿ ಗ್ರಾಮ ಪಂಚಾಯಿತಿಗೆ, ಕಂದಾಯ ಇಲಾಖೆಗೆ ಸಂಬAಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಸ್ಪಂದಿಸುತ್ತಿಲ್ಲ ಎಂದು ಸುದೀಪ್ - ಮಾಲತಿ ದಂಪತಿ ಅಳಲು ತೋಡಿಕೊಂಡರು.ಮಡಿಕೇರಿ : ಬಾಳೆಲೆ ಹೋಬಳಿಯ ಬಿಳೂರು ಗ್ರಾಮದ ಕೆ.ಸಿ. ಗಣಪತಿ ಎಂಬವರ ಮನೆಯ ಮೇಲೆ ಗಾಳಿಯ ರಭಸಕ್ಕೆ ತೆಂಗಿನ ಮರ ಬಿದ್ದು ಅಪಾರ ಹಾನಿಯಾಗಿದೆ. ಮನೆಯ ಮಧ್ಯಭಾಗಕ್ಕೆ ಮರ ಬಿದ್ದಿದ್ದು, ಮನೆ ಜಖಂಗೊAಡಿದ್ದಲ್ಲದೆ ಪೀಠೋಪಕರಣಗಳು ಪುಡಿಯಾಗಿದ್ದು, ಅಂದಾಜು ರೂ. ೧೦ ಲಕ್ಷದಷ್ಟು ನಷ್ಟ ಸಂಭವಿಸಿದೆ.
ಪತಿ - ಪತ್ನಿ ಮಾತ್ರ ಮನೆಯಲ್ಲಿದ್ದು, ಎರಡು ದಿನಗಳ ಹಿಂದೆ ಪುತ್ರಿಯ ಮನೆಗೆ ತೆರಳಿದ್ದ ಸಂದರ್ಭ ಈ ಅನಾಹುತ ಸಂಭವಿಸಿದ್ದು, ಅದೃಷ್ಟವಶಾತ್ ಅವರುಗಳು ಬಚಾವಾಗಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಅರಮಣಮಾಡ ಸತೀಶ್ ದೇವಯ್ಯ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ. (ಐದನೇ ಪುಟಕ್ಕೆ)
(ನಾಲ್ಕನೇ ಪುಟದಿಂದ) ಸೋಮವಾರಪೇಟೆ: ಅನಿರೀಕ್ಷಿತ ಗಾಳಿ ಮಳೆಗೆ ಸೆಸ್ಕ್ ಇಲಾಖೆ ಹೆಚ್ಚಿನ ನಷ್ಟ ಅನುಭವಿಸುವಂತಾಗಿದೆ. ಕಳೆದ ನಾಲ್ಕು ದಿನಗಳ ಕಾಲ ಸುರಿದ ಗಾಳಿ ಮಳೆಗೆ ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟಾರೆ ೧೭೫ ಕಂಬಗಳು ನೆಲಕ್ಕುರುಳಿ ಹಾನಿಗೀಡಾಗಿವೆ.
ವಾಡಿಕೆಯಂತೆ ಜೂನ್ ತಿಂಗಳಲ್ಲಿ ಮಳೆ ಆರಂಭಗೊಳ್ಳುವ ಹಿನ್ನೆಲೆ ಸೆಸ್ಕ್ ಇಲಾಖೆ ಎಲ್ಲಾ ರೀತಿಯ ಸಿದ್ಧತಾ ಕಾರ್ಯಗಳನ್ನು ಮಾಡಿಕೊಂಡಿರುತ್ತಿತ್ತು. ಆದರೆ ಪ್ರಸಕ್ತ ವರ್ಷ ಮೇ ಕೊನೆಯ ವಾರದಲ್ಲಿಯೇ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ, ಅನಿರೀಕ್ಷಿತ ಅವಘಡಗಳಿಂದ ಸೆಸ್ಕ್ ಒಂದಿಷ್ಟು ಕಂಗಾಲಾಗಿದೆ. ಅದರೂ ಸಹ ಸಮರೋಪಾದಿಯಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿದ್ಯುತ್ ತಂತಿಗಳ ಮೇಲೆ ಮರಗಳು ಬ�