ಮೈಸೂರು ಶ್ರೀ ತಿನ್ನುತ್ತೀರಾ ಎಂದು ಯಾರಾದರೂ ಕೇಳಿದರೆ ಇದು ಯಾವುದು ಹೊಸ ಸಿಹಿ ತಿನಿಸು ಎಂದು ಚಿಂತೆಗೊಳಗಾಗಬೇಡಿ.

ಮೈಸೂರು ಶ್ರೀ ಎಂದರೆ ನಮ್ಮ ನಾಡಿನದ್ದೇ.. ಪುರಾತನ ಕಾಲದಿಂದಲೂ ತಿಂಡಿ ಪೋತರ ಪ್ರಿಯವಾಗಿರುವ ಮೈಸೂರು ಪಾಕ್.

ಮೈಸೂರು ಪಾಕ್‌ಗೆ ಯಾಕೀ ಹೆಸರು ಎಂಬ ಪ್ರಶ್ನೆ ನಿಮ್ಮದೇ?

ಇನ್ನ್ನೇನಿಲ್ಲ.. ಭಾರತ ಮತ್ತು ಪಾಕ್ ಯುದ್ಧದ ಹಿನ್ನೆಲೆಯಲ್ಲಿ ಪಾಕ್ ವಿರುದ್ಧ ದೇಶಪ್ರೇಮಿಗಳ ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ ದೇಶದ ಅನೇಕ ಕಡೆಗಳಲ್ಲಿ ಸಿಹಿತಿನಿಸು ತಯಾರಕರು ಮೈಸೂರು ಪಾಕ್ ಹೆಸರಿನಲ್ಲಿರುವ ಪಾಕ್ ಎಂಬ ಪದವನ್ನು ಹೇಳಲು ಸಿದ್ಧರಿಲ್ಲ. ಅಂತೆಯೇ ಅಪ್ಪಟ ದೇಶಾಭಿಮಾನಿಗಳು ಕೂಡ ಮೈಸೂರು ಪಾಕ್‌ನಲ್ಲಿ ಪಾಕ್ ಎಂಬ ಪದ ಇರುವುದರಿಂದಾಗಿ ಮೈಸೂರು ಪಾಕ್ ಖರೀದಿಸಲು ಮುಂದಾಗುತ್ತಿಲ್ಲ.

ಹೀಗಾಗಿ ಈ ಎಲ್ಲಾ ರಗಳೇ ಬೇಡ ಎಂದು ಉತ್ತರ ಭಾರತೀಯ ಸಿಹಿ ತಿಂಡಿ ತಯಾರಕರು ಈಗ ಮೈಸೂರು ಪಾಕ್‌ಗೆ ಮೈಸೂರು ಶ್ರೀ ಎಂಬ ಸಾಂಪ್ರದಾಯಿಕ ಹೆಸರನ್ನಿಟ್ಟಿದ್ದಾರೆ. ಮೋತಿ ಪಾಕ್, ಅಮ್ ಪಾಕ್, ಗೌಂಡ್ ಪಾಕ್, ಮೈಸೂರು ಪಾಕ್ ಮುಂತಾದ ವೈವಿಧ್ಯಮಯ ಸಿಹಿ ತಿನಿಸುಗಳ ಜತೆ ಬೆಸೆದುಕೊಂಡಿರುವ ಪಾಕ್ ಪದದ ಬದಲಿಗೆ ಈಗ ಶ್ರೀ ಸೇರಿಸಿ ಮೋತಿ ಶ್ರೀ ಆಮ್ ಶ್ರೀ, ಮೈಸೂರು ಶ್ರೀ, ಗ್ರೌಂಡ್ ಶ್ರೀ ಎಂಬ ಹೆಸರಿಟ್ಟಿದ್ದಾರೆ. ಸರಿಯಾದ ಅರ್ಥದಲ್ಲಿ ಪಾಕ್ ಎಂದರೆ ಪಾಕಿಸ್ತಾನಕ್ಕೆ ಹೋಲಿಕೆಯಾಗುವ ಹೆಸರಲ್ಲ. ಸಂಸ್ಕೃತದಲ್ಲಿ ಸಿಹಿತಿಂಡಿ ಮಿಶ್ರಣದ ಸಕ್ಕರೆಯ ರಸಕ್ಕೆ ಪಾಕ್ವ (ಕನ್ನಡದ ಪಾಕ) ಎಂಬರ್ಥವಿದೆ. ಕಾಲಕ್ರಮೇಣ ಪಾಕ್ವ ಬದಲಿಗೆ ಪಾಕ್ ಎಂಬ ಹೆಸರಿನಿಂದಾಗಿ ಮೈಸೂರು ಪಾಕಕ್ಕೆ ಅನಗತ್ಯವಾಗಿ ಪಾಕ್ ಎಂಬ ಕುಖ್ಯಾತಿಯೂ ಸೇರಿಕೊಂಡಿತ್ತು!

ಇದೀಗ ಮೈಸೂರು ಶ್ರೀ ಎಂಬ ಹೊಸ ನಾಮಕರಣದಿಂದಾಗಿ ಭಾರತೀಯರು ಮೈಸೂರು ಶ್ರೀಯನ್ನು ಮತ್ತಷ್ಟು ಸಿಹಿಯ ಸಂಭ್ರಮದೊAದಿಗೆ ಸೇವಿಸುವ ನಿರೀಕ್ಷೆಯಿದೆ.

ಕರಾಚಿ ಬೇಕರಿಗೆ ಎಫೆಕ್ಟ್.!

ಅಂದ ಹಾಗೆ, ಹೈದರಾಬಾದ್‌ನಲ್ಲಿ ೧೯೫೩ ರಿಂದಲೂ ಸಿಹಿ, ಖಾರ ತಿಂಡಿಗಳ ತಯಾರಿಕೆಗೆ ಖ್ಯಾತವಾಗಿರುವ ಕರಾಚಿ ಬೇಕರಿ ಇತ್ತೀಚಿಗೆ ಹಿಂದೂ ಸಂಘಟನೆ ಸದಸ್ಯರಿಂದ ಧಾಳಿಗೊಳಗಾಯಿತು. ಕರಾಚಿ ಹೆಸರನ್ನು ತೆಗೆಯಿರಿ ಎಂದು ಕಳೆದ ತಿಂಗಳೇ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿದ್ದರೂ ಪರಪರಾಂಗತ ಹೆಸರನ್ನು ತೆಗೆಯಲೊಪ್ಪದ ಮಾಲೀಕರು ಈ ಧಾಳಿಯಿಂದಾಗಿ ಲಕ್ಷಗಟ್ಟಲೆ ನಷ್ಟ ಹೊಂದಬೇಕಾಯಿತು. ಪಾಕಿಸ್ತಾನದಿಂದ ಭಾರತಕ್ಕೆ ಬಂದ ಮಾರ್ವಾಡಿಗಳ ಒಡೆತನದಲ್ಲಿರುವ ಕರಾಚಿ ಬೇಕರಿ, ಬೆಂಗಳೂರು ಸೇರಿದಂತೆ ದೇಶದ ಅನೇಕ ಕಡೆ ಶಾಖೆಗಳನ್ನು ಹೊಂದಿದೆ. ಭಾರತ - ಪಾಕ್ ನಡುವಿನ ಉದ್ವಿಗ್ನತೆಯಿಂದಾಗಿ ಕರಾಚಿ ಹೆಸರಿನ ಈ ಬೇಕರಿಯ ಉತ್ಪನ್ನಗಳ ಮಾರಾಟದ ಮೇಲೂ ತೀವ್ರ ಪ್ರತಿಕೂಲ ಪರಿಣಾಮ ಉಂಟಾಗಿದೆ.

- ಅನಿಲ್ ಎಚ್.ಟಿ.