ಸುಂಟಿಕೊಪ್ಪ, ಮೇ ೨೩: ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಡಿ.ಶಿವಪ್ಪ ಸ್ಮಾರಕ ೨೬ನೇ ವರ್ಷದ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ವಾಲ್‌ಪರಿ ಎಫ್.ಸಿ ತಮಿಳುನಾಡು, ಮಿಡ್‌ಸಿಟಿ ಸುಂಟಿಕೊಪ್ಪ, ಎನ್‌ವೈಸಿ ಕೊಡಗರಹಳ್ಳಿ ಹಾಗೂ ಬೆಟ್ಟಗೇರಿ ಎಫ್.ಸಿ. ತಂಡಗಳು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿವೆ. ಇಕೆಎನ್ ಎಫ್.ಸಿ. ಕೋಳಿಕಡಾವು ಇರಿಟಿ ಕಣ್ಣನೂರು ಗೈರಿನಿಂದ ವಾಲ್‌ಪರಿ ಎಫ್.ಸಿ ತಮಿಳುನಾಡು ಸೆಮಿಫೈನಲ್ ಪ್ರವೇಶಿಸಿತು.

ಟ್ರೆಡಿಷನಲ್ ಟೂರಿಸಂ ಎಫ್.ಸಿ. ತಿರುಚಿ ತಂಡವನ್ನು ೫-೧ ಗೋಲುಗಳಿಂದ ಮಿಡ್‌ಸಿಟಿ ಸುಂಟಿಕೊಪ್ಪ ಮಣಿಸಿತು. ಸುಂಟಿಕೊಪ್ಪ ಪರ ಪಾಂಡ್ಯನ್, ಶಬ್ಬೀರ್, ದಿವಕಾರ, ಶಬೀರ್, ವಿಜು ತಲಾ ೧ ಗೋಲು ದಾಖಲಿಸಿದರು. ಟ್ರೆಡಿಷನಲ್ ಟೂರಿಸಂ ಪರ ಕಿರಣ್ ಏಕೈಕ ಗೋಲು ಬಾರಿಸಿದರು.

ಟಿಡಿಎಲ್ ಎಫ್.ಸಿ ಬೈಲುಕೊಪ್ಪ ವಿರುದ್ಧ ಎನ್‌ವೈಸಿ ಕೊಡಗರಹಳ್ಳಿ ಟೈಬ್ರೇಕರ್‌ನಲ್ಲಿ ೪-೨ ಗೋಲುಗಳಿಂದ ಜಯಗಳಿಸಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು ಗೋಲು ದಾಖಲಿಸದ ಹಿನ್ನೆಲೆ ಟೈಬ್ರೇಕರ್ ಮೊರೆ ಹೋಗಲಾಯಿತು. ಕ್ಯಾಲಿಕೆಟ್ ಎಫ್.ಸಿ.ಯನ್ನು ಮಣಿಸಿ ಬೆಟ್ಟಗೇರಿ ಎಫ್.ಸಿ ಉಪಾಂತ್ಯಕ್ಕೆ ಕಾಲಿಟ್ಟಿತು. ಬೆಟ್ಟಗೇರಿ ಎಫ್.ಸಿ ಪರ ಮನೋಜ್, ಮಂಜು ತಲಾ ೧ ಗೋಲು ಗಳಿಸಿದರು.