ಮಡಿಕೇರಿ, ಮೇ ೧೮: ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ಸಂಬAಧ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆಯನ್ನು ಕೈಗೊಳ್ಳಲು ಅವಧಿಯನ್ನು ತಾ. ೨೫ ರವರೆಗೆ ವಿಸ್ತರಿಸಲಾಗಿದ್ದು, ತಾ. ೨೦ ರೊಳಗೆ ಶೇ. ೧೦೦ ರಷ್ಟು ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ
ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗವು ತಾ. ೨೫ ರವರೆಗೆ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಕಾರ್ಯ ಕೈಗೊಳ್ಳಲು ಅವಕಾಶ ನೀಡಿದೆ. ಆದರೂ ಸಹ ತಾ. ೨೦ ರೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ನೀಡಿದ್ದಾರೆ.
ಸಮೀಕ್ಷೆ ಬ್ಲಾಕ್ ವ್ಯಾಪ್ತಿಯಲ್ಲಿ ತಾ. ೨೬ ರಿಂದ ೨೮ ರವರೆಗೆ ಮೂರು ದಿನಗಳ ಕಾಲ ವಿಶೇಷ ಶಿಬಿರ ನಿಗದಿಪಡಿಸಲಾಗಿದೆ. ಹಾಗೆಯೇ ತಾ. ೧೯ ರಿಂದ ೨೮ ರವರೆಗೆ ಆನ್‌ಲೈನ್ ಮೂಲಕ ಸ್ವಯಂಘೋಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ತಾ. ೨೬ ರಿಂದ ೨೮ ರವರೆಗೆ ನಡೆಯುವ ವಿಶೇಷ ಸಮೀಕ್ಷೆಯಲ್ಲಿ ಗಣತಿದಾರರು ಘೋಷಿತ ಮತಗಟ್ಟೆಗಳಲ್ಲಿ ಖುದ್ದಾಗಿ ಉಪಸ್ಥಿತರಿದ್ದು, ಮನೆ ಮನೆ ಸಮೀಕ್ಷೆಯಲ್ಲಿ ಕೈಬಿಟ್ಟು ಹೋದಂತಹ ಪರಿಶಿಷ್ಟ ಜಾತಿಯ ಕುಟುಂಬದವರು ಶಿಬಿರಕ್ಕೆ ಆಗಮಿಸಿದಾಗ ಸುಸೂತ್ರವಾಗಿ ಸಮೀಕ್ಷೆ ಕೈಗೊಳ್ಳಲು ಆಯೋಗ ತಿಳಿಸಿದೆ ಎಂದು ಹೇಳಿದ್ದಾರೆ.
ತಾ. ೫ ರಿಂದ ನಡೆಯುತ್ತಿರುವ ಸಮೀಕ್ಷೆಯು ಕೊಡಗು ಜಿಲ್ಲೆಯಲ್ಲಿ ಶೇ. ೭೮.೫೬ ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, ರಾಜ್ಯದಲ್ಲಿ ೮ನೇ ಸ್ಥಾನದಲ್ಲಿದ್ದು, ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್ ಮಾಹಿತಿ ನೀಡಿದ್ದಾರೆ.