ಮಡಿಕೇರಿ, ಮೇ ೧೫: ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ೨೪ ತಿಂಗಳು ಕಳೆದಿದ್ದು, ಅರ್ಹ ಫಲಾನುಭವಿಗಳು ಇದರಿಂದ ಉತ್ತಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಮಟ್ಟದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಧರ್ಮಜ ಉತ್ತಪ್ಪ ಹೇಳಿದರು.
ನಗರದ ಜಿ.ಪಂ. ಕೆಡಿಪಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ನಭೆ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಬಡ ಜನರ ಶ್ರೇಯೋಭಿವೃದ್ಧಿಗಾಗಿ ಪಂಚ ಗ್ಯಾರಂಟಿಗಳು ಸಹಕಾರಿಯಾಗಿದೆ.
ಅನ್ನಭಾಗ್ಯ ಯೋಜನೆಯಡಿಯಲ್ಲಿ ಪಡಿತರ ವಿತರಣೆಯಾಗುತ್ತಿದೆ. ಆದರೆ ಕೆಲ ಕಡೆಗಳಲ್ಲಿ ಪಡಿತರ ಪಡೆದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇಂತಹ ಪ್ರಕರಣಗಳ ಬಗ್ಗೆ ಸೂಕ್ತ ಮಾಹಿತಿ ಪಡೆದು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸದಸ್ಯ ಕಾಳಿಮಾಡ ಪ್ರಶಾಂತ್ ಮಾತನಾಡಿ, ಈ ಹಿಂದಿನ ಸಭೆಯಲ್ಲಿ ಜಿಲ್ಲೆಯ ಸಿ.ಐ.ಟಿ ಕಾಲೇಜಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಮಾಡುವಂತೆ ತಿಳಿಸಲಾಗಿತ್ತು, ಆದರೆ ಕಾಲೇಜಿನವರೆಗೂ ಬಸ್ ಹೋಗುತ್ತಿಲ್ಲ, ಇದೇ ಸ್ಥಿತಿ ಮುಂದುವರೆದರೆ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ ಎಂದು ಹೇಳಿದರು.
ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಅಧಿಕಾರಿ ಮಾತನಾಡಿ, ವಾಹನವು ಮೈಸೂರು ಗ್ರಾಮಾಂತರ ವಿಭಾಗದ ಪಿರಿಯಾಪಟ್ಟಣ ಡಿಪೋದಿಂದ ಕಾರ್ಯಾಚರಣೆಯಾಗುತ್ತಿದ್ದು, ಕಾಲೇಜು ಮಂಡಳಿಯು ವಿಭಾಗಕ್ಕೆ ಮನವಿ ಪತ್ರ ಸಲ್ಲಿಸಿದಲ್ಲಿ ಕ್ರಮ ವಹಿಸಲಾಗುವುದು ಎಂದರು.
ಸದಸ್ಯ ಜಾನ್ಸನ್ ಮಾತನಾಡಿ, ಸರ್ಕಾರಿ ಬಸ್ಸುಗಳು ಸೂಕ್ತ ರೀತಿಯಲ್ಲಿ ಸಮಯ ಪಾಲನೆ ಮಾಡಬೇಕು, ಮಡಿಕೇರಿ ಬಸ್ ನಿಲ್ದಾಣದಿಂದ ಜಿಲ್ಲಾ ಪಂಚಾಯತ್ ಕಚೇರಿಗೆ ಬರುವ ಬಸ್ಸು ಸಮಯ ಪಾಲನೆ ಮಾಡುತ್ತಿಲ್ಲ. ಇದರಿಂದ ಸಿಬ್ಬಂದಿಗಳು ಸೂಕ್ತ ಸಮಯದಲ್ಲಿ ಕಚೇರಿಗೆ ತಲುಪಲಾಗದೆ ಸಾರ್ವಜನಿಕ ಕೆಲಸಗಳಿಗೆ ಸಮಸ್ಯೆಯಾಗುತ್ತಿದ್ದು, ಕ್ರಮ ವಹಿಸುವಂತೆ ತಿಳಿಸಿದರು. ಸದಸ್ಯ ಕಾಂತರಾಜು ಮಾತನಾಡಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಜಿಲ್ಲಾ ಮಟ್ಟದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಮೇಲಿದೆ. ಇದರ ಸದಸ್ಯರು ಹಲವು ಸಭೆಗೆ ಗೈರಾಗುತ್ತಿದ್ದು, ಈ ಬಗ್ಗೆ ಕ್ರಮ ವಹಿಸುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು.
ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಸತತವಾಗಿ ಸಭೆಗೆ ಗೈರು ಹಾಜರಾಗಿರುವ ಸದಸ್ಯರಿಗೆ ನೋಟೀಸ್ ನೀಡುವಂತೆ ತಿಳಿಸಿದರು. ಸದಸ್ಯ ಮಂದ್ರೀರ ಮೋಹನ್ ದಾಸ್ ಮಾತನಾಡಿ, ಮಡಿಕೇರಿ ತಾಲೂಕು ವ್ಯಾಪ್ತಿಯ ಫಲಾನುಭವಿಯೊಬ್ಬರು ಯೋಜನೆಯ ಯಶಸ್ಸಿನ ಕುರಿತು ಸಿದ್ಧ ಪಡಿಸಿರುವ ಗೀತೆಯನ್ನು ಪ್ರಸಾರ ಮಾಡಿದರು. ಸಾರ್ವಜನಿಕರು ಪಂಚ ಗ್ಯಾರಂಟಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ಸಭೆಗೆ ತಿಳಿಸಿದರು.
ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಪಂಚ ಗ್ಯಾರಂಟಿಗಳ ಬಗ್ಗೆ ಮತ್ತಷ್ಟು ಪ್ರಚಾರ ನೀಡುವಂತಾಗಬೇಕು. ಗ್ರಾ.ಪಂ. ವ್ಯಾಪ್ತಿಯ ಸ್ವಚ್ಛ ವಾಹಿನಿಗಳನ್ನು ಫಲಾನುಭವಿಗಳ ಅಭಿಪ್ರಾಯ ಪ್ರಚಾರ ಪಡಿಸಬೇಕು ಎಂದು ತಿಳಿಸಿದರು. ಗೃಹಲಕ್ಷಿö್ಮ ಯೋಜನೆಯಡಿಯಲ್ಲಿ ಹಲವು ಮಹಿಳೆಯರು ಇ-ಕೆವೈಸಿ ಮಾಡಿಸಿಲ್ಲದಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡು ಜನರಿಗೆ ಮಾಹಿತಿ ಒದಗಿಸುವಂತೆ ಉಪಕಾರ್ಯದರ್ಶಿ ಅವರಿಗೆ ಸೂಚಿಸಿದರು.
ಉಳಿದಂತೆ ಗೃಹಜ್ಯೋತಿ ಮತ್ತು ಯುವನಿಧಿ ಗ್ಯಾರೆಂಟಿ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಿಸುವಂತೆ ಸಲಹೆ ನೀಡಿದರು. ಇದಕ್ಕೂ ಮೊದಲು ಇತ್ತೀಚೆಗೆ ನಿಧನ ಹೊಂದಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿ ಶ್ರೀಧರ್ ಮೂರ್ತಿ ಅವರಿಗೆ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಲಾಯಿತು. ಉಪಾಧ್ಯಕ್ಷ ಶಾರಿ ಗಿರೀಶ್, ನಾಸಿರ್, ಪಂಕಜ, ಸದಸ್ಯರಾದ ಕೆ.ಜಿ.ಪೀಟರ್, ಕೆ.ಎಂ. ಬಶೀರ್, ಮುಸ್ತಫ, ಧನ್ಯ, ಜಿ.ಪಂ. ಉಪಕಾರ್ಯದರ್ಶಿ ಅಬ್ದುಲ್ ನಬಿ ಉಪಸ್ಥಿತರಿದ್ದರು.