(ಕೆ.ಎA ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಮೇ ೧೩: ೨೦೨೩ ಮೇ ೧೩ ಕೊಡಗು ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾದ ದಿನ. ಎರಡು ದಶಕಗಳ ಬಿಜೆಪಿ ಭದ್ರಕೋಟೆಯನ್ನು ಒಡೆದು, ಕಾಂಗ್ರೆಸ್‌ನ ಎ.ಎಸ್. ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ಇಬ್ಬರು ಕಾಂಗ್ರೆಸ್ ಶಾಸಕರು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಇಂದಿಗೆ ಎರಡು ವರ್ಷಗಳು ಸಂದಿವೆ.

ಎರಡು ದಶಕಗಳ ಕಾಲ ವಿಧಾನಸಭಾ ಚುನಾವಣೆಯಲ್ಲಿ ಸೋಲಿಲ್ಲದ ಬಿಜೆಪಿಯ ನಾಗಾಲೋಟಕ್ಕೆ ಬ್ರೇಕ್ ಬಿದ್ದು ಎರಡು ವರ್ಷಗಳು ಕಳೆದಿದ್ದು,ಎರಡು ವರ್ಷಗಳಿಂದ ಕೊಡಗು ಜಿಲ್ಲೆ ರಾಜಕೀಯದಲ್ಲಿ ಹಲವು ಬದಲಾವಣೆಗಳನ್ನು ಕಂಡಿವೆ.

ಶಾಸಕರನ್ನು ಕಳೆದುಕೊಂಡು ತನ್ನ ಹಳೆಯ ಗತವೈಭವವಿಲ್ಲದೆ ಭಾರತೀಯ ಜನತಾ ಪಕ್ಷ ಮಂಕಾಗಿದೆ. ಮತ್ತೊಂದೆಡೆ ಜನತಾದಳ ನಾವಿಕನಿಲ್ಲದ ಹಡಗಿನಂತೆ ಸಮುದ್ರದಲ್ಲಿ ತೇಲಾಡುತ್ತಿದೆ. ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಅಚ್ಚರಿ ಕೊಡುತ್ತೇವೆಂದು ಹೇಳಿ ನೋಟಾಕ್ಕಿಂತಲೂ ಕಡಿಮೆ ಮತ ಪಡೆದು ಇದ್ದ ಕಾರ್ಯಕರ್ತರನ್ನು ಕಳೆದುಕೊಂಡು ಎಸ್.ಡಿಪಿ.ಐ ಕಷ್ಟದಲ್ಲಿ ಉಸಿರಾಡುತ್ತಿದೆ.

ಏತನ್ಮಧ್ಯೆ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ತನ್ನ ಹಳೆಯ ಚಾರ್ಮ್ಗೆ ಮರಳಿದೆ. ಆದರೆ ಪಕ್ಷ ಸಂಘಟನೆಗೆ ಹೋಲಿಸಿದರೆೆ ಇಂದಿಗೂ ಕೂಡ ಅಷ್ಟಕಷ್ಟೇ.ಕೇವಲ ಎರಡು ವರ್ಷಗಳ ಅವಧಿಯಲ್ಲಿ ಕೊಡಗಿನ ಇಬ್ಬರು ಶಾಸಕದ್ವಯರು ಪಕ್ಷಾತೀತವಾಗಿ ಜನಪ್ರಿಯತೆ ಹಾಗೂ ಜನರ ಪ್ರೀತಿಗಳಿಸಿದ್ದಾರೆ. ಎ.ಎಸ್ ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ಮೊದಲ ಪ್ರಯತ್ನದಲ್ಲೇ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಪಡೆದು ಎರಡು ವರ್ಷ ಪೂರ್ಣಗೊಳಿಸಿದ್ದು, ಇಬ್ಬರ ಜನಪ್ರಿಯತೆ ಕುಗ್ಗಿಸುವಂತಹ ಕೆಲಸ ಮಾಡಿಲ್ಲ.

ಕಡಿಮೆ ಅವಧಿಯಲ್ಲಿಯೇ ಸರ್ಕಾರದಲ್ಲಿ ಪ್ರಭಾವಿ ಶಾಸಕರಾದ ಲಾಯರ್& ಡಾಕ್ಟರ್

ಎ.ಎಸ್ ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಅವರ ರಾಜಕೀಯ ಅದೃಷ್ಟ ಚೆನ್ನಾಗಿ ಇದೆ. ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಒಂದೆಡೆಯಾದರೆ ಮತ್ತೊಂದೆಡೆ ಕಾಂಗ್ರೆಸ್ ಸರ್ಕಾರ ಕೂಡ ರಾಜ್ಯದಲ್ಲಿ ಅಧಿಕಾರಕ್ಕೇರಿದ್ದು ಇಬ್ಬರ ಪಾಲಿಗೆ ಅದೃಷ್ಟ ಎನ್ನಬಹುದು. ಯಾವುದೇ ಸರ್ಕಾರ ಅಥವಾ ಪಕ್ಷ ಇರಲಿ, ಮೊದಲ ಬಾರಿಗೆ ಶಾಸಕರಾಗಿ ಗೆಲುವು ಸಾಧಿಸಿರುವ ಶಾಸಕರಿಗೆ ಕಿರಿಯ ಶಾಸಕ ಮತ್ತು ಅನುಭವದ ಕೊರತೆ ಎಂಬಿತ್ಯಾದಿ ಕಾರಣಗಳಿಂದಾಗಿ ಸರ್ಕಾರದಲ್ಲಿ ಪ್ರಭಾವವಿರುವುದು ಕಷ್ಟಸಾಧ್ಯ.

ಅದಲ್ಲದೆ ವಿಶೇಷ ಅನುದಾನವನ್ನು ಪಡೆಯುವಲ್ಲಿ ಕೂಡ ಹಿಂದೆ ಬೀಳುತ್ತಾರೆ. ಆದರೆ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಎ.ಎಸ್ ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಭಾವಿ ಶಾಸಕರಾಗಿ ಬೆಳೆದು ನಿಂತಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಆಪ್ತರಾಗಿದ್ದಾರೆ. ಸರ್ಕಾರ ಮಟ್ಟದ ಎಲ್ಲಾ ಸಚಿವರೊಂದಿಗೂ ಕೂಡ ಆಪ್ತರಾಗಿರುವ ಶಾಸಕದ್ವಯರು ಕ್ಷೇತ್ರದಕ್ಕೆ ಅನುದಾನ ತರುವಲ್ಲಿ ಕೂಡ ಸಫಲರಾಗಿದ್ದಾರೆ.

ಕಾಂಗ್ರೆಸ್ ಸರ್ಕಾರದ ಟ್ರಬಲ್ ಶೂಟರ್ ಎ.ಎಸ್. ಪೊನ್ನಣ್ಣ !

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ರಚನೆಯಾದಾಗ ಕೊಡಗಿನ ಶಾಸಕರಲ್ಲೊಬ್ಬರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಎ.ಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಗ್ಯಾರಂಟಿ ಎಂದು ಊಹಿಸಲಾಗಿತ್ತು. ಆದರೆ ಸಚಿವ ಸ್ಥಾನ ಕೈತಪ್ಪಿತು. ಸಚಿವ ಸಂಪುಟ ದರ್ಜೆ ಸ್ಥಾನದೊಂದಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹುದ್ದೆ ಪೊನ್ನಣ್ಣ ಅವರನ್ನು ಅರಸಿ ಬಂದಿತು.

ಕಳೆದ ಎರಡು ವರ್ಷಗಳಿಂದ ಎ.ಎಸ್ ಪೊನ್ನಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಪ್ರಭಾವಿ ಶಾಸಕ ಹಾಗೂ ಟ್ರಬಲ್ ಶೂಟರ್ ಎಂದೇ ಎ.ಎಸ್ ಪೊನ್ನಣ್ಣ ಹೆಸರು ಗಳಿಸಿದ್ದಾರೆ. ಎಲ್ಲಾ ಇಲಾಖೆಗಳ ಸಚಿವ ರೊಂದಿಗೆ ಆಪ್ತರಾಗಿರುವ ಎ.ಎಸ್ ಪೊನ್ನಣ್ಣ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕ ಕೂಡ.

ಮೊದಲ ಬಾರಿಗೆ ಶಾಸಕನಾಗಿ ಗೆಲುವು ಸಾಧಿಸುವವನಿಗೆ ಮುಖ್ಯಮಂತ್ರಿ ಹಾಗೂ ಸರ್ಕಾರದಲ್ಲಿ ಪ್ರಭಾವ ಇರುವುದು ಕನಸಿನ ಮಾತು. ಆದರೆ ಎ.ಎಸ್ ಪೊನ್ನಣ್ಣ ತನ್ನ ಸಾಮರ್ಥ್ಯ ಹಾಗೂ ರಾಜಕೀಯದ ಬಗ್ಗೆ ತನಗಿರುವ ಅಗಾಧವಾದ ತಿಳುವಳಿಕೆಯಿಂದ ಕಡಿಮೆ ಅವಧಿಯಲ್ಲಿ ಜನಪರ ಶಾಸಕರ ಪಟ್ಟಿಯಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ.

ಕಾಂಗ್ರೆಸ್ ಪಕ್ಷದ ರಾಷ್ಟಿçÃಯ ನಾಯಕರೊಂದಿಗೂ ಕೂಡ ಉತ್ತಮ ಒಡನಾಟ ಕೂಡ ಹೊಂದಿರುವ ಎ.ಎಸ್ ಪೊನ್ನಣ್ಣ ಅವರು, ಯಾವುದೇ ಕೆಲಸ ಹೇಳಿದರೆ ಸಿ.ಎಂ ಹಾಗೂ ಡಿಸಿಎಂ ನೋ ಎಂದು ಹೇಳಲು ಸಾಧ್ಯವಿಲ್ಲ ಎಂಬ ಮಾತು ರಾಜ್ಯ ಕಾಂಗ್ರೆಸ್ ಪಕ್ಷದೊಳಗಿದೆ. ಅಷ್ಟರಮಟ್ಟಿಗೆ ಕೇವಲ ಎರಡು ವರ್ಷಗಳ ಅವಧಿಗೆ ಎ.ಎಸ್ ಪೊನ್ನಣ್ಣ ರಾಜ್ಯ ರಾಜಕೀಯದಲ್ಲಿ ಬೆಳೆದು ನಿಂತಿದ್ದಾರೆ.

ಇದೇ ವರ್ಷ ಸಚಿವ ಸಂಪುಟ ಪುನರ್ ರಚನೆಗೊಂಡರೆ ಎ.ಎಸ್ ಪೊನ್ನಣ್ಣ ನವರಿಗೆ ಸಚಿವ ಸ್ಥಾನ ಸಿಗುವುದು ಖಚಿತ ಎನ್ನಲಾಗುತ್ತಿದೆ. ಆದರೆ ಕೊಡಗಿನ ಕಾವೇರಿ ನದಿ ಹಾಗೂ ಕೊಪ್ಪ ಗೇಟ್ ದಾಟಿ ನಡೆಯುವ ರಾಜಕೀಯದಿಂದ ಬದಲಾವಣೆ ಆದರೆ ಆಶ್ಚರ್ಯವಿಲ್ಲ. ಪ್ರಭಾವಿ ಜಿಲ್ಲೆಗಳ ಮಧ್ಯೆ ಕೊಡಗು ಎಂದಿಗೂ ಕೂಡ ರಾಜ್ಯ ರಾಜಕೀಯದಲ್ಲಿ ಕೇವಲ ಆಟಕ್ಕಿಲ್ಲದ ಜಿಲ್ಲೆ.

ಜನರನ್ನು ಆಕರ್ಷಿಸುವ ಶಾಸಕ ಮಂತರ್ ಗೌಡ!

ಡಾ ಮಂತರ್ ಗೌಡ ಎಲ್ಲರಿಗಿಂತಲೂ ವಿಭಿನ್ನ ನಾಯಕ ಮತ್ತು ಶಾಸಕ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲದು ಎಂದೇ ಹೇಳಿಕೊಂಡೇ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ಶಾಸಕ. ಸರ್ಕಾರ ಮಟ್ಟದಲ್ಲಿ ಪ್ರಭಾವ ಬೀರಿ ಹಲವು ವಿಶೇಷ ಅನುದಾನವನ್ನು ಮಡಿಕೇರಿ ಕ್ಷೇತ್ರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮಂತರ್ ಗೌಡ ಅವರ ಮಾತುಗಾರಿಕೆ, ಜನರೊಂದಿಗೆ ಬೆರೆಯುವ ಶೈಲಿಯೇ ವಿಭಿನ್ನ.

ಯಾರೊಂದಿಗೂ ಕೂಡ ಸಿಟ್ಟಿನಿಂದ ಮಾತನಾಡದೆ ಸೌಮ್ಯ ಸ್ವಭಾವದಿಂದ ವರ್ತಿಸುವ ಶಾಸಕ. ಬಿಜೆಪಿಗರು ಕೂಡ ಜಿಲ್ಲೆಯಲ್ಲಿ ಮಂತರ್ ಗೌಡ ಅಭಿಮಾನಿ ಬಳಗದಲ್ಲಿ ಇದ್ದಾರೆ. ಸಮಯಪಾಲನೆಯಲ್ಲಿ ಶಿಸ್ತು ಅಳವಡಿಸಿಕೊಂಡರೆ ಮಂತರ್ ಎಲ್ಲರಿಗೂ ಇನ್ನಷ್ಟು ಪ್ರಶಂಸನೀಯವಾಗುತ್ತಾರೆ. ಮಾತಿನಲ್ಲಾಗಲಿ ಯಾವುದೇ ಅಹಂ ಇಲ್ಲದೆ ಲವಲವಿಕೆಯಿಂದ ಜನರನ್ನು ಮಾತನಾಡಿಸುವ ರಾಜ್ಯದ ಅಪರೂಪದ ಶಾಸಕ ಡಾ. ಮಂತರ್ ಗೌಡ. ಸಂಪೂರ್ಣವಾಗಿ ರಾಜಕೀಯ ಹೇಳಿಕೆಗಳಿಂದ ಒಂದು ಹೆಜ್ಜೆ ದೂರು ಉಳಿದಿದ್ದಾರೆ.

ಕೊಡಗಿನ ಶಾಸಕದ್ವಯರು ಕಳೆದ ಎರಡು ವರ್ಷಗಳಲ್ಲಿ ಕೊಡಗಿನ ಅಭಿವೃದ್ಧಿಗಾಗಿ ಕಾಳಜಿ ಮತ್ತು ಅನುದಾನವನ್ನು ತರುತ್ತಿರುವುದು ಶ್ಲಾಘನೀಯ ವಿಷಯ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಕೊರೆತ ಇದ್ದರೂ ಕೂಡ ಕೊಡಗಿನ ಅಭಿವೃದ್ಧಿಗಾಗಿ ಸರ್ಕಾರದಲ್ಲಿ ಪ್ರಭಾವಬೀರಿ ಅನುದಾನವನ್ನು ಪಡೆಯುತ್ತಿದ್ದಾರೆ. ಇನ್ನೂ ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಶಾಸಕರು ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನದ ಅವಶ್ಯಕತೆ ಇದೆ.

ಅದಲ್ಲದೇ ಜಿಲ್ಲೆಗೆ ಹಲವು ವಿಶೇಷ ಯೋಜನೆಗಳೊಂದಿಗೆ ಅಭಿವೃದ್ಧಿ ಕೆಲಸ ಸಾಗಬೇಕಿದೆ. ಎ.ಎಸ್ ಪೊನ್ನಣ್ಣ ಹಾಗೂ ಡಾ. ಮಂತರ್‌ಗೌಡ ಅವರು ಶಾಸಕರಾಗಿ ಗೆಲುವು ಸಾಧಿಸಿದ ನಂತರ ಅವರ ಚುನಾವಣಾ ರಾಜಕೀಯ ಶಕ್ತಿ ಏನೆಂಬುದು ತಿಳಿದಿಲ್ಲ.ಅ ದಕ್ಕಾಗಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆವರೆಗೆ ಕಾಯಬೇಕಾಗಿದೆ. ಕಾಂಗ್ರೆಸ್ ಪಕ್ಷ ಸಂಘಟಿಸಲು ಕೂಡ ಶಾಸಕದ್ವಯರು ಜಿಲ್ಲೆಯಲ್ಲಿ ಇದುವರೆಗೆ ಆಸಕ್ತಿ ತೋರಿಲ್ಲ. ಮತ್ತೊಂದೆಡೆ ಶಾಸಕರ ಹೆಸರಿನಲ್ಲಿ ಸರ್ಕಾರಿ ಕಚೇರಿಗಳಲ್ಲಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ದಲ್ಲಾಳಿ ಕೆಲಸಗಳಿಗೆ ಶಾಸಕರು ಅಂತಿಮ ಮುದ್ರೆ ಹಾಕಬೇಕಿದೆ.