ಚೆಯ್ಯಂಡಾಣೆ, ಮೇ ೧೩: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕೂರುಳಿ ಕಡಿಯತ್ತೂರು ಬಳಿಯ ದೋಣಿಕಡವು ಎಂಬಲ್ಲಿ ನಿನ್ನೆ ಸ್ನಾನಕ್ಕೆ ತೆರಳಿದ್ದ ಯುವಕರ ತಂಡ ದೋಣಿಯಲ್ಲಿ ಸಾಗುವ ಸಂದರ್ಭ ದೋಣಿ ಮಗುಚಿದ ಪರಿಣಾಮ ಈಜು ಬಾರದೆ ಇಬ್ಬರು ಯುವಕರು ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

ನಿನ್ನೆ ನಡೆದ ಶೋಧ ಕಾರ್ಯಾಚರಣೆಯಲ್ಲಿ ಗಿರೀಶ್ (೧೬) ಎಂಬ ಯುವಕನ ಮೃತದೇಹವನ್ನು ನದಿ ನೀರಿನಿಂದ ಹೊರತೆಗೆಯಲಾಗಿತ್ತು.

ಮತ್ತೊಬ್ಬ ಯುವಕ ಅಯ್ಯಪ್ಪನ (೧೮) ಮೃತ ದೇಹಕ್ಕಾಗಿ ನಿನ್ನೆ ನಡೆದ ಶೋಧ ಕಾರ್ಯಾಚರಣೆಗೆ ಪ್ರತಿಕೂಲ ಹವಾಮಾನ ಉಂಟಾದ ಹಿನ್ನೆಲೆ ಶೋಧ ಕಾರ್ಯಾಚರಣೆಯನ್ನು ಮುಂದೂಡಲಾಗಿತ್ತು.

ಇAದು ಬೆಳಗ್ಗಿನಿಂದಲೇ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಯುವಕನ ಮೃತದೇಹ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದರು. ಅವಘಡ ಸಂಭವಿಸಿದ ಕಾವೇರಿ ನದಿಯ ೧೮ ಅಡಿ ಆಳದಲ್ಲಿ ಮೃತ ಯುವಕ ಅಯ್ಯಪ್ಪನ ಮೃತದೇಹವನ್ನು ಪೊಲೀಸರು, ಅಗ್ನಿಶಾಮಕ ದಳ ಹಾಗೂ ಎಮ್ಮೆಮಾಡುವಿನ ಗ್ರಾಮಸ್ಥರ ನೆರವಿನಿಂದ ಪತ್ತೆಹಚ್ಚುವಲ್ಲಿ ಯಶಸ್ವಿಯಾಯಿತು.

ನಂತರ ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.