ಕಣಿವೆ, ಮೇ ೧೧: ಸತತವಾಗಿ ಆರೂವರೆ ದಶಕಗಳ ಕಾಲ ದೇವಾಲಯದ ಧರ್ಮದರ್ಶಿಯಾಗಿ ಧಾರ್ಮಿಕ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ರೂಪಿಸಿಕೊಂಡ ಹಿರಿಮೆ ಧರ್ಮದರ್ಶಿ ಎಲ್ಲೂಬಾಯಿ ಅವರಿಗೆ ಸಲ್ಲುತ್ತದೆ ಎಂದು ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಹೇಳಿದರು. ಕೂಡಿಗೆ ಬಳಿ ಇರುವ ಹೆಗ್ಗಡಳ್ಳಿ ಗ್ರಾಮದ ಶನೈಶ್ಚರ ದೇಗುಲದ ಧರ್ಮದರ್ಶಿಯಾಗಿದ್ದ ಶರಣೆ ಎಲ್ಲೂಬಾಯಿ ಅವರು ಶಿವೈಕ್ಯರಾಗಿ ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಶ್ರೀಗಳು, ಶರಣೆ ಎಲ್ಲೂಬಾಯಿ ಅವರ ಧಾರ್ಮಿಕ ಸೇವೆಯೊಂದಿಗೆ ಕೂಡಿಗೆ ಪ್ರದೇಶ ಭಕ್ತಿಮಯವಾಗಿದೆ. ಎಲ್ಲೂಬಾಯಿ ಅವರು ಶರಣ ಧರ್ಮಕ್ಕೆ ಮಾರುಹೋಗಿ ಸುತ್ತೂರಿನ ಹಿರಿಯ ಶ್ರೀಗಳಾಗಿದ್ದ ಶ್ರೀ ರಾಜೇಂದ್ರ ಸ್ವಾಮೀಜಿಗಳಿಂದ ಲಿಂಗದೀಕ್ಷೆ ಪಡೆದಿದ್ದರು.

ಇದನ್ನು ಎಲ್ಲೂಬಾಯಿ ಕುಟುಂಬ ಸದಸ್ಯರು ಹೀಗೆಯೇ ಮುಂದುವರೆಸಿಕೊAಡು ಬರುತ್ತಿರುವುದು ಶ್ಲಾಘನೀಯ ಎಂದರು. ಇದಕ್ಕೂ ಮುನ್ನಾ ಶರಣೆ ಎಲ್ಲೂಬಾಯಿ ಅಮ್ಮನವರ ಪೂಜಾ ಕಾರ್ಯಕ್ರಮ ಜರುಗಿತು. ಈ ಸಂದರ್ಭ ಅರಕಲಗೂಡು ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ,

ದೇವಾಲಯ ಸಮಿತಿಯ ಸುನಿಲ್ ರಾವ್, ಕಮಲಾಬಾಯಿ ರಾಜರಾವ್, ಅರುಣ್ ರಾವ್, ಅನಿಲ್ ರಾವ್ ಸೇರಿದಂತೆ ಗ್ರಾಮದ ಹಲವು ಭಕ್ತರು ಪಾಲ್ಗೊಂಡಿದ್ದರು. ಈ ಸಂದರ್ಭ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಿಸಲಾಯಿತು.