ಮಡಿಕೇರಿ, ಮೇ ೯: ಹಳ್ಳಿಗಟ್ಟು ಶ್ರೀ ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್ ನಮ್ಮೆ ತಾ. ೧೭ ಹಾಗೂ ೧೮ ರಂದು ನಡೆಯಲಿದ್ದು, ತಾ. ೧೦ ರಿಂದ ಹಬ್ಬದ ಕಟ್ಟು ಬೀಳಲಿದೆ. ಊರಿನಲ್ಲಿ ನೆಲೆಸಿರುವ ಸರ್ವರು ಹಬ್ಬದ ಕಟ್ಟು ಕಟ್ಟಳೆಗಳನ್ನು ಪಾಲಿಸಬೇಕು ಎಂದು ತಕ್ಕಮುಖ್ಯಸ್ಥರು ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ, ಶ್ರೀ ಭದ್ರಕಾಳಿ ಹಾಗೂ ಶ್ರೀ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರತಿಯೊಂದು ಊರಿನ ಹಬ್ಬಗಳಿಗೂ ಅದರದೇ ಆದ ಇತಿಹಾಸ ಹಾಗೂ ಕಟ್ಟು ಕಟ್ಟಳೆಗಳಿದ್ದು, ಹಳ್ಳಿಗಟ್ಟು ಊರು ಕೂಡ ಇದರಿಂದ ಹೊರತಾಗಿಲ್ಲ. ದಕ್ಷಿಣ ಕೊಡಗಿನಲ್ಲಿ ನಡೆಯುವ ಹಬ್ಬಗಳ ಪೈಕಿ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ನಡೆಯುವ ಕೆಸರಿನ ಓಕುಳಿಯ ಹಬ್ಬವೆಂದೇ ಖ್ಯಾತಿ ಪಡೆದಿರುವ ಹಳ್ಳಿಗಟ್ಟು ಬೋಡ್ ನಮ್ಮೆ ಒಂದಾಗಿದ್ದು, ತಾ. ೧೦ ರಂದು ಸಂಜೆಯಿAದ ಊರಿನಲ್ಲಿ ಹಬ್ಬದ ಕಟ್ಟು ಬೀಳಲಿದೆ. ಈ ಸಂಬAಧ ಹಳ್ಳಿಗಟ್ಟು ಊರಿನಲ್ಲಿ ನೆಲೆಸಿರುವ ಪ್ರತಿಯೊಬ್ಬರು ಕೂಡ ಹಬ್ಬದ ಕಟ್ಟು ಕಟ್ಟಳೆಗಳನ್ನು ಪಾಲಿಸಬೇಕಾಗಿದ್ದು, ತಾ. ೧೦ ರಂದು ಸಂಜೆ ೫ ಗಂಟೆಯ ನಂತರ ತಾ. ೧೮ ರವರೆಗೆ ಹಳ್ಳಿಗಟ್ಟು ಗ್ರಾಮದ ವ್ಯಾಪ್ತಿಯೊಳಗೆ ಕಾಫಿ ಗಿಡಗಳ ಕಪಾತು ಸೇರಿದಂತೆ ಹಸಿರು ಮರ ಗಿಡಗಳನ್ನು ಕಡಿಯುವಂತಿಲ್ಲ ಹಾಗೂ ಊರಿನೊಳಗೆ ಪ್ರಾಣಿ ವಧೆ ಹಾಗೂ ಪ್ರಾಣಿ ಹಿಂಸೆ ಸೇರಿದಂತೆ ಊರಿನ ಇತರ ಯಾವುದೇ ಮನೆಗಳಲ್ಲಿ ಕೂಡ ಆಡಂಬರದ ಪೂಜಾವಿಧಿ ವಿಧಾನಗಳನ್ನು ಮಾಡುವಂತಿಲ್ಲ. ದೈವದ ಕೋಲ ಸೇರಿದಂತೆ ಇತರ ಆಡಂಬರದ ದೈವಿಕ ಕಾರ್ಯಗಳನ್ನು ಮಾಡುವಂತಿಲ್ಲ. ಹಬ್ಬಕ್ಕೆ ಇನ್ನು ಹತ್ತು ಹಲವಾರು ಕಟ್ಟು ಕಟ್ಟಳೆಗಳಿದ್ದು, ತಾ. ೧೦ ರಂದು ಸಂಜೆ ೫ ಗಂಟೆಗೆ ತಿಳಿಸಲಾಗುತ್ತದೆ. ಇದನ್ನು ಪಾಲಿಸದಿದ್ದಲ್ಲಿ ದಂಡ ವಿಧಿಸಲಾಗುತ್ತದೆ. ಮಾತ್ರವಲ್ಲ ದೇವರ ಶಾಪಕ್ಕೂ ಗುರಿಯಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಅನಾದಿಕಾಲದಿಂದಲೂ ನೆಲೆಸಿದವರು ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಬದುಕು ಕಟ್ಟಿಕೊಂಡವರು ಕೂಡ ಹಬ್ಬದ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ತಕ್ಕಮುಖ್ಯಸ್ಥರಾದ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.