ಪೊಲೀಸ್ ದೂರು-ಅಧಿಕಾರಿಗಳ ಭೇಟಿ

ಕೂಡಿಗೆ, ಮೇ ೯: ಹರಿಯುವ ತೋಡಿಗೆ ರಾಸಾಯನಿಕ ನೀರು ಮಿಶ್ರಗೊಂಡ ಕಾರಣ ನೂರಾರು ಮೀನುಗಳು ಮೃತಪಟ್ಟ ಘಟನೆ ಕಂಬಿಬಾಣೆ ಗ್ರಾ.ಪಂ. ವ್ಯಾಪ್ತಿಯ ಅತ್ತೂರು-ನಲ್ಲೂರು ವ್ಯಾಪ್ತಿಯ ಕುಟ್ಟಿಗೇರಿ ಪೈಸಾರಿ ತೋಡಿನಲ್ಲಿ ಸಂಭವಿಸಿದೆ.

ಚಿಕ್ಲಿಹೊಳೆ ಅಣೆಕಟ್ಟೆಗೆ ಸೇರ್ಪಡೆಯಾಗುವ ನೈಸರ್ಗಿಕ ತೋಡಿಗೆ ರಾಸಾಯನಿಕ ಮಿಶ್ರಗೊಂಡ ನೀರು ಸೇರ್ಪಡೆಯಾದ ಹಿನ್ನೆಲೆ ಮೀನುಗಳು ಸೇರಿದಂತೆ ಜಲಚರಗಳು ನೂರಾರು ಸಂಖ್ಯೆಯಲ್ಲಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಮೂರು ದಿನಗಳ ಹಿಂದೆ ವ್ಯಾಪ್ತಿಯ ಆಶಾ ಕಾರ್ಯಕರ್ತೆ ಕಂಬಿಬಾಣೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮತ್ತು ಅಧ್ಯಕ್ಷರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷೆ, ಆಡಳಿತ ಮಂಡಳಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಂತರ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಮೀನುಗಳು ಮೃತ ಪಟ್ಟಿರುವ ಬಗ್ಗೆ ದೂರು ನೀಡಿರುತ್ತಾರೆ. ಅದೇ ರೀತಿಯಲ್ಲಿ ಸ್ಥಳೀಯ ಸಾರ್ವಜನಿಕರು ಸೋಮವಾರಪೇಟೆ ತಾಲೂಕು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಘಟನೆ ಬಗ್ಗೆ ಮಾಹಿತಿ ನೀಡಿರುತ್ತಾರೆ.

ಸ್ಥಳೀಯರ ಮಾಹಿತಿ ಹಿನ್ನೆಲೆಯಲ್ಲಿ ಸೋಮವಾರಪೇಟೆ ತಾಲೂಕು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಅರವಿಂದ, ಕಂಬಿಬಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧ, ಅಭಿವೃದ್ಧಿ ಅಧಿಕಾರಿ ಮಧುಮತಿ, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಜಗದೀಶ್ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ಕಂಬಿಬಾಣೆ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.

ಸಮೀಪದ ತೋಟಗಳಿಂದ ತೋಡಿಗೆ ರಾಸಾಯನಿಕ ನೀರು ಹರಿದಿರುವ ಶಂಕೆಯಿದ್ದು ಎಲ್ಲಿಂದ ರಾಸಾಯನಿಕ ಹರಿದು ಬಂದಿದೆ ಎಂಬ ಮಾಹಿತಿ ಪತ್ತೆಯಾಗಿಲ್ಲ. ಈ ಸಂಬAಧ ಮೀನುಗಾರಿಕೆ ಇಲಾಖೆಯ ಮುಖೇನ ಚೆಕ್ಲಿಹೊಳೆ ಅಣೆಕಟ್ಟೆಯಲ್ಲಿ ಮೀನು ಹಿಡಿಯುವ ಟೆಂಡರ್ ಪಡೆದ ಗುತ್ತಿಗೆದಾರ ಸಹ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸತ್ತ ಮೀನುಗಳನ್ನು ಪರೀಕ್ಷೆಗಾಗಿ ಸಂಬAಧಿಸಿದ ಇಲಾಖೆಯ ಮೂಲಕ ಮೈಸೂರು ಮತ್ತು ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. - ಕೆ.ಕೆ. ನಾಗರಾಜಶೆಟ್ಟಿ