ಕಣಿವೆ, ಮೇ ೯: ಕೇಂದ್ರ ಸರ್ಕಾರದ ಯೋಜನೆಗಳಾದ ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್ ಹಾಗೂ ಗ್ರಾಮೀಣ ಯೋಜನೆಗಳ ಪ್ರಗತಿಯ ಕುರಿತು ಮೌಲ್ಯಮಾಪನ ಮಾಡಲು ನೀತಿ ಆಯೋಗದ ತಂಡವು ನಿತಿನ್ ಎಂಬವರ ನೇತೃತ್ವದಲ್ಲಿ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿತು.
ಕೇಂದ್ರ ಸರ್ಕಾರದÀ ಯೋಜನೆ ಗಳಲ್ಲಿ ಇದುವರೆಗೆ ಸಾಧಿಸಿರುವ ಘಟಕವಾರು ಭೌತಿಕ ಮತ್ತು ಆರ್ಥಿಕ ಪ್ರಗತಿ ವಿವರ ಪರಿಶೀಲಿಸಿದ ತಂಡವು ಸ್ವಚ್ಛ ಸಂಕೀರ್ಣ ಘಟಕ, ಕಸ ವಿಲೇವಾರಿ ವಿಧಾನಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಪೂರೈಕೆ ಕ್ರಮಗಳ ಬಗ್ಗೆ ಹಾಗೂ ನಿಯಮಿತ ನೀರಿನ ಗುಣಮಟ್ಟ ತಪಾಸಣೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿತು.
ನಂತರ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಚುನಾಯಿತ ಸದಸ್ಯರೊಂದಿಗೆ ಸಂವಾದ ನಡೆಸಿ ಸ್ಥಳೀಯ ಸಂಸ್ಥೆಗಳು ತಳಮಟ್ಟದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷ ಪ್ರವೀಣ್ ಕುಮಾರ್, ಅಭಿವೃದ್ಧಿ ಅಧಿಕಾರಿ ಸುಮೇಶ್, ಸ್ವಚ್ಛ ಭಾರತ್ ಜಿಲ್ಲಾ ನೋಡೆಲ್ ಅಧಿಕಾರಿ ಹರ್ಷಿತ, ಗ್ರಾಮೀಣ ಕುಡಿಯುವ ನೀರು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವೀರೇಂದ್ರ, ಜಲಜೀವನ್ ಮತ್ತು ಸ್ವಚ್ಛ ಭಾರತ್ ಘಟಕದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.