ಗೋಣಿಕೊಪ್ಪಲು, ಮೇ. ೮: ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆಯು ಮೈದಾನ ೨ ರಲ್ಲಿ ನಡೆಯಿತು. ೪ ಮಹಿಳಾ ತಂಡಗಳು ಮುನ್ನಡೆ ಸಾಧಿಸಿದವು.

ಮೊದಲ ಪಂದ್ಯವು ಚೇನಂಡ ತಂಡ ಹಾಗೂ ಕಟ್ಟೆರ ತಂಡದ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಕಟ್ಟೆರ ತಂಡ ನಿಗದಿತ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ೫೫ ರನ್ ಬಾರಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು.

ಚೇನಂಡ ತಂಡವು ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ತನ್ನ ೧ ವಿಕೆಟ್ ಕಳೆದುಕೊಂಡು ೫೬ ರನ್ ಸಂಪಾದಿಸುವ ಮೂಲಕ ಗೆಲುವಿನ ನಗೆ ಬೀರಿತು. ಎರಡನೇ ಪಂದ್ಯವು ಚೇಂದಿರ ಹಾಗೂ ಅಣ್ಣಳಮಾಡ (ಬಿರುನಾಣಿ) ತಂಡದ ನಡುವೆ ನಡೆಯಿತು.

ಮೊದಲು ಬ್ಯಾಟಿಂಗ್ ಆರಂಭಿಸಿದ ಚೇಂದಿರ ತಂಡ ೭ ವಿಕೆಟ್ ಕಳೆದುಕೊಂಡು ೪೨ ರನ್ ಗಳಿಸಿ ಎದುರಾಳಿ ತಂಡಕ್ಕೆ ಸವಾಲು ನೀಡಿತು. ಬ್ಯಾಟಿಂಗ್ ಆರಂಭಿಸಿದ ಅಣ್ಣಳಮಾಡ ತಂಡ ೨.೪ ಓವರ್‌ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ೪೩ರನ್ ಕಲೆ ಹಾಕಿ ಗೆಲುವಿನ ಕೇಕೆ ಹಾಕಿದರು.

ಚೇಂದಿರ ತಂಡವನ್ನು ೧೦ ವಿಕೆಟ್ ಗಳ ಅಂತರದಲ್ಲಿ ಸೋಲಿಸುವ ಮೂಲಕ ಹಂತಕ್ಕೆ ಪ್ರವೇಶ ಮಾಡಿತು. ಮೂರನೇ ಪಂದ್ಯವು ಕರಿನೆರವಂಡ ಹಾಗೂ ಅರಮಣಮಾಡ (ಬೆಸಗೂರ್) ಮಹಿಳಾ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಆರಂಬಿಸಿದ ಕರಿನೆರವಂಡ ತಂಡ ೫ ವಿಕೆಟ್ ಕಳೆದುಕೊಂಡು ೨೪ ರನ್ ಗಳಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು. ಅರಮಣಮಾಡ ತಂಡವು ಬ್ಯಾಟಿಂಗ್ ಆರಂಭಿಸಿ ಕೇವಲ ೧.೪ ಓವರ್‌ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ೩೦ ರನ್ ಗಳಿಸಿ ಗೆಲುವು ಸಾಧಿಸಿತು. ನಾಲ್ಕನೇ ಪಂದ್ಯವು ಮೂಕಳೆರ ಹಾಗೂ ಕೋಟ್ರಮಾಡ ತಂಡದ ನಡುವೆ ನಡೆಯಿತು.

ಮೊದಲು ಬ್ಯಾಟಿಂಗ್ ಆರಂಭಿಸಿದ ಕೋಟ್ರಮಾಡ ತಂಡವು ೧ ವಿಕೆಟ್ ಕಳೆದುಕೊಂಡು ೩೩ ರನ್ ಗಳಿಸಿ ಎದುರಾಳಿ ತಂಡಕ್ಕೆ ಆಹ್ವಾನ ನೀಡಿತು. ಬ್ಯಾಟಿಂಗ್ ಆರಂಭಿಸಿದ ಮೂಕಳೆರ ತಂಡವು ೨.೪ ಓವರ್‌ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೩೪ ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿತು.