ವೀರಾಜಪೇಟೆ, ಮೇ. ೭: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂಗಳ ಮೇಲೆ ಭಯೋತ್ಪಾದಕರು ನಡೆಸಿದ ಕೃತ್ಯವನ್ನು ಮಾಜಿ ಸೈನಿಕರ ಸಹಕಾರ ಸಂಘ ತೀವ್ರವಾಗಿ ಖಂಡಿಸುತ್ತದೆ. ಭಾರತೀಯ ಸೇನೆ ವೈಮಾನಿಕ ದಾಳಿ ನಡೆಸಿ ಭಯೋತ್ಪಾಧಕರ ಅಡಗು ತಾಣವನ್ನು ಧ್ವಂಸಗೊಳಿಸಿರುವುದು ಹೆಮ್ಮೆ ಎಂದು ಕೊಡಗು ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್‌ಉತ್ತಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆಯೂ ಕೂಡ ಭಾರತದ ಮೇಲೆ ಅನೇಕ ರೀತಿಯ ಭಯೋತ್ಪಾದಕ ದಾಳಿ ನಡೆದಿದೆ. ಮುಂಬೈ ದಾಳಿ ದೇಶಕ್ಕೆ ಕಪ್ಪು ಚುಕ್ಕೆಯಾಗಿತ್ತು. ಪುಲ್ವಾಮಾ ದಾಳಿ ಭೀಕರವಾಗಿತ್ತು. ನಮ್ಮ ಯೋಧರು ಹುತಾತ್ಮರಾದಾಗ ಕೇಂದ್ರ ಸರಕಾರ ದಿಟ್ಟ ಪ್ರತೀಕಾರ ಕ್ರಮ ಕೈಗೊಂಡಿತ್ತು. ಅದೇ ಈ ಬಾರಿ ಪಹಲ್ಗಾಮ್‌ನಲ್ಲಿ ಅಮಾಯಕರ ಮೇಲಿನ ದಾಳಿಗೆ ತಕ್ಕ ಉತ್ತರ ನೀಡುತ್ತಿದೆ. ಭಾರತದ ಮಣ್ಣಿನ ರಕ್ಷಣೆಗೆ ಮಾಜಿ ಸೈನಿಕರಾದ ನಾವು ಸದಾ ಸಿದ್ದರಿದ್ದೇವೆ. ಭಾರತ ಸರ್ಕಾರ ಯಾವುದೇ ಸಂದರ್ಭದಲ್ಲಿ ನಮ್ಮನ್ನು ಆಹ್ವಾನಿಸಿದರೂ ಮುಕ್ತ ಮನಸ್ಸಿನಿಂದ ದೇಶ ಸೇವೆಗೆ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ರಾಜ ಚಂದ್ರಶೇಖರ್, ಮಾಜಿ ಅಧ್ಯಕ್ಷ ಪುಗ್ಗೆರ ನಂದಾ, ನಿರ್ದೇಶಕರುಗಳಾದ ಸಲಾಂ ಕಡಂಗ, ಪಟ್ರಪಂಡ ಸೋಮೇಶ್ ಉಪಸ್ಥಿತರಿದ್ದರು.