ವೀರಾಜಪೇಟೆ, ಮೇ ೭: ಜನರಿಗೆ ವಾಹನಗಳ ನಿಯಮದ ಬಗ್ಗೆ ತಿಳುವಳಿಕೆ, ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ, ಅದನ್ನು ಪಾಲಿಸುವುದು ಸಾರ್ವಜನಿಕರ ಹೊಣೆ. ನಾಲ್ಕು ಚಕ್ರ ವಾಹನ ನಿಲುಗಡೆ ಸ್ಥಳದಲ್ಲಿ ದ್ವಿಚಕ್ರವಾಹನ ನಿಲ್ಲಿಸುವುದು, ವಾಹನ ಅಡ್ಡಾದಿಡ್ಡಿ ನಿಲ್ಲಿಸುವುದು ಹೀಗೆ ಸಮಸ್ಯೆ ಮಾಡದೆ ಸ್ವ ಅರಿವಿನಿಂದ ನಡೆದು ಕೊಳ್ಳುವುದನ್ನು ವಾಹನ ಸವಾರರು ರೂಢಿಸಿಕೊಳ್ಳಬೇಕು ಎಂದು ವೀರಾಜಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹೇಳಿದರು. ವೀರಾಜಪೇಟೆ ಪುರಸಭೆ ವತಿಯಿಂದ ಪುರಭವನದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆ ಸಮಸ್ಯೆಗಳ ಬಗ್ಗೆ ಅಧ್ಯಕ್ಷೆ ದೇಚಮ್ಮ ಅಧ್ಯಕ್ಷತೆಯಲ್ಲಿ ಪೊಲೀಸ್ ಇಲಾಖೆಯೊಂದಿಗೆ ನಡೆದ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಬಳಿಕ ಮಾತನಾಡಿದ ಅನೂಪ್ ಮಾದಪ್ಪ, ಸುಣ್ಣದ ಬೀದಿಯಲ್ಲಿ ಸಂತೆ ದಿನ ವಾಹನ ನಿಲ್ಲಿಸಿಕೊಂಡು ವ್ಯಾಪಾರ ನಡೆಸುತ್ತಾರೆ. ವಾಹನ ಸ್ಥಳದಲ್ಲಿ ನಿಲ್ಲಿಸಿ ವಹಿವಾಟು ನಡೆಸುವುದರಿಂದ ಮುಕ್ತ ವಾಹನ ಸಂಚಾರಕ್ಕೆ ತಡೆಯಾಗುತ್ತಿದೆ. ಈ ಕುರಿತು ಪುರಸಭೆ ನಿರ್ಣಯ ಕೈಗೊಳ್ಳಬೇಕು. ಬದ್ರಿಯ ಜಂಕ್ಷನ್ ಬಳಿ ಹೊರಗಿನಿಂದ ಬಂದವರಿಗೆ ಏಕ ಮುಖ ಸಂಚಾರದ ಅರಿವು ಮೂಡಿಸಲು ಸೂಚನ ಫಲಕ ಅಳವಡಿಕೆ ಸೇರಿದಂತೆ ಅಗತ್ಯ ಕಡೆ ಪುರಸಭೆ ಜೊತೆಗೂಡಿ ಕ್ರಮ ವಹಿಸುತ್ತೇವೆ. ಪಟ್ಟಣದಲ್ಲಿ ಇರುವ ಕಲ್ಯಾಣ ಮಂಟಪದವರು ಟ್ರಾಫಿಕ್ ಸಮಸ್ಯೆ ಉಂಟಾಗದAತೆ ಖಾಸಗಿ ಸಿಬ್ಬಂದಿಗಳನ್ನು ನೇಮಿಸಬೇಕು. ಇಲ್ಲವಾದರೆ ಉನ್ನತಾಧಿಕಾರಿ ಕಚೇರಿಯಲ್ಲಿ ನಿಗದಿತ ಶುಲ್ಕ ಪಾವತಿಸಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು. ಬಸ್ ನಿಲ್ದಾಣದಲ್ಲಿ ಮಾರುಕಟ್ಟೆ ಬಳಿ ಖಾಸಗಿ ಬಸ್ ನಿಲುಗಡೆ ಇನ್ನೊಂದು ಬದಿಯಲ್ಲಿ ಖಾಸಗಿ ವಾಹನ ನಿಲುಗಡೆಯಿಂದ ಸಂಚಾರಕ್ಕೆ ಆಡಚಣೆ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಸರಕು ಇಳಿಸುವ ವಾಹನ ಬೆಳಿಗ್ಗೆ ೯ ರೊಳಗೆ ಅಥವಾ ಸಂಜೆ ಸರಕು ಇಳಿಸಬೇಕು. ದೊಡ್ಡಟ್ಟಿ ಚೌಕಿ ಬಳಿ ವಾಹನ ಸವಾರರ ತೊಂದರೆಗೆ ಖಾಸಗಿ ಬಸ್ ಮತ್ತು ಆಟೋದವರು ಸಹಕಾರ ನೀಡಿದರೆ ಸಮಸ್ಯೆ ಬಗೆಹರಿಸಬಹುದು. ರಾತ್ರಿ ಸ್ಥಳೀಯ ವಾಹನ ಮಾಲೀಕರು ಮುಖ್ಯ ರಸ್ತೆ ಬದಿ ವಾಹನ ನಿಲ್ಲಿಸಿ ಸಮಸ್ಯೆ ಮಾಡಿದರೆ ಬೆಳಿಗ್ಗೆ ಶೇ. ೭೦ ರಷ್ಟು ವರ್ತಕರು ನಿಲುಗಡೆ ಸ್ಥಳದಲ್ಲಿ ಬೆಳಿಗ್ಗಿನಿಂದ ಸಂಜೆವರೆಗೆ ವಾಹನ ನಿಲ್ಲಿಸಿ ಸಮಸ್ಯೆ ಉಂಟು ಮಾಡುತ್ತಿದ್ದು, ಇದನ್ನು ಅರಿತು ಸಹಕರಿಸಬೇಕೆಂದು ಅನೂಪ್ ಹೇಳಿದರು. ಲೋಕೊಪ ಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಲಿಂಗರಾಜು ಮಾತನಾಡಿ; ಪಟ್ಟಣದ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಸೂಕ್ತ ಅನುದಾನ ಬಂದಿದ್ದು, ಮಳೆಯ ಬಳಿಕ ರಸ್ತೆ ಕಾಮಗಾರಿ ನಡೆಯಲಿದೆ. ನಾಮಫಲಕ ಇತ್ಯಾದಿಗಳ ಬಗ್ಗೆ ಇಲಾಖೆ ಪುರಸಭೆ ಜೊತೆ ಸೇರಿ ಆಗತ್ಯ ಕ್ರಮ ಕೈಗೊಳ್ಳುತ್ತೆವೆ. ಅಪಘಾತ ವಲಯದಲ್ಲಿ ರಸ್ತೆ ಅಭಿವೃದ್ಧಿಗೆ ಪ್ರತ್ಯೇಕ ವಿಭಾಗ ಇದ್ದು ಅವರು ಅಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ಸಮಗ್ರ ಮಾಹಿತಿ ನೀಡಿದರು.
ಅಧ್ಯಕ್ಷೆ ದೇಚಮ್ಮ ಮಾತನಾಡಿ ತಾಲೂಕು ಕಚೇರಿ ಮುಂಭಾಗ ಮತ್ತು ಗ್ರಂಥಾಲಯ ಎರಡು ಬದಿಯಲ್ಲಿ ವಾಹನ ನಿಲುಗಡೆ, ಮುಕ್ತ ಸಂಚಾರಕ್ಕೆ ಅಡ್ಡಿಯಾಗಿದ್ದು ಒಂದು ಕಡೆ ನಿಲುಗಡೆ ಮಾಡಿ. ಅನೇಕ ಕಡೆ ಹಳೆಯ ಉಪಯುಕ್ತವಲ್ಲದ ಸೂಚನೆ ಫಲಕ ತೆರವು ಮಾಡುತ್ತಿದ್ದೇವೆ. ಇದರಲ್ಲಿ ಪೊಲೀಸ್ ಇಲಾಖೆಯ ನಾಮಫಲಕ ಇದ್ದು ಮುಂದೆ ಇಲಾಖೆ ಜೊತೆ ಸೇರಿ ಅಗತ್ಯ ನೂತನ ಸೂಚನಾ ಫಲಕ ಅಳಡಿಸಲಾಗುತ್ತದೆ. ಗಡಿಯಾರ ಕಂಬದಿAದ ಖಾಸಗಿ ಬಸ್ ನಿಲ್ದಾಣವರೆಗೆ ಮತ್ತು ಮೂರ್ನಾಡು ರಸ್ತೆವರೆಗೆ ರಸ್ತೆ ಬದಿ ದುಸ್ಥಿತಿಯಲ್ಲಿದ್ದು ದುರಸ್ತಿ ಸದ್ಯಕ್ಕೆ ಮಾಡುತ್ತೇವೆ. ಮಂದೆ ಶಾಸಕರು ನೀಡಿರುವ ಅನುದಾನದಲ್ಲಿ ಇವುಗಳ ಸೂಕ್ತ ಅಭಿವೃದ್ಧಿಯಾಗಲಿದೆ ಎಂದರು. ಸಭೆಯಲ್ಲಿ ಮುಖ್ಯವಾಗಿ ಬಹುತೇಕ ಸಾರ್ವಜನಿಕರು ಪ್ರಮುಖರು ವಾಹನ ದಟ್ಟಣೆ ತಪ್ಪಿಸಲು ಸುಗಮ ಸಂಚಾರಕ್ಕೆ ರಸ್ತೆ ಅಗಲಿಕರಣ ಮಾಡಬೇಕು ಎಂದು ಆಗ್ರಹಿಸಿದರು. ಮುಖ್ಯವಾಗಿ ಸಂಚಾರಿ ಪೊಲೀಸ್ ಠಾಣೆಯ ಕುರಿತು ಆಗ್ರಹಿಸಲಾಯಿತು.
ಗಾಂಧಿನಗರ ಗೌರಿಕೆರೆ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡು ವಂತೆ, ದೊಡ್ಡಟ್ಟಿ ಚೌಕಿಯಲ್ಲಿ ಬಸ್ ನಿಲುಗಡೆಯಿಂದ ವಾಹನಗಳಿಗೆ ತೊಂದರೆ ಬಗ್ಗೆ, ಸಂತ ಅನ್ನಮ್ಮ ಶಾಲೆ ಮುಂದೆ ರಸ್ತೆಯಲ್ಲಿ ವಾಹನ ದಟ್ಟಣೆ ತಪ್ಪಿಸಲು ಶಾಲಾ ಮೈದಾನದಲ್ಲಿ ಪೋಷಕರುಗಳ ವಾಹನ ಮತ್ತು ಆಟೋ ನಿಲುಗಡೆಗೆ ಒತ್ತಾಯ, ಮುಖ್ಯವಾಗಿ ಅಮ್ಮತ್ತಿ ರಸ್ತೆಯ ಸುಂಕದಕಟ್ಟೆಯಿAದ ಆರ್ಜಿವರೆಗೆ ರಸ್ತೆ ಅಗಲೀಕರಣ, ಇದೇ ರಸ್ತೆಯಲ್ಲಿ ಬಸ್‌ಗಳ ವೇಗಕ್ಕೆ ಕಡಿವಾಣ ಮತ್ತು ಪಂಜರುಪೇಟೆಯಲ್ಲಿನ ಮುಖ್ಯ ರಸ್ತೆಯಲ್ಲಿ ಬಸ್ ಮತ್ತು ವಾಹನಗಳ ವೇಗಕ್ಕೆ ಕಡಿವಾಣ ಹಾಕುವಂತೆ, ಫುಟ್‌ಪಾತ್ ಇದ್ದರು ವರ್ತಕರು ಅದರ ಮೇಲೆ ವಸ್ತುಗಳನ್ನು ಇಟ್ಟು ಜನರಿಗೆ ನಡೆದಾಡಲು ತೊಂದರೆ ಮಾಡುತ್ತಿರುವ ಬಗ್ಗೆ, ಕಲ್ಯಾಣ ಮಂಟಪದಲ್ಲಿ ಮದುವೆ ಇದ್ದಾಗ ಮೊಗರಗಲ್ಲಿ ಮತ್ತು ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜ್ಯಾಮ್ ಕುರಿತು, ಖಾಸಗಿ ಬಸ್‌ಗಳು ಹೆಚ್ಚಿನ ಹೊತ್ತು ನಿಲ್ದಾಣದಲ್ಲಿ ನಿಲುಗಡೆಯಿಂದ ಸಮಸ್ಯೆ ಹಾಗೂ ಸಾರಿಗೆ ಬಸ್ ನಿಲ್ದಾಣದ ಮುಂದೆ ಇದೇ ರೀತಿ ಸಮಸ್ಯೆ ಮಾಡುತ್ತಿರುವ ಬಗ್ಗೆ, ಬೀಡಾಡಿ ದನಗಳಿಂದ ವಾಹನ ಸವಾರರ ಜೀವಕ್ಕೆ ಚಿಕ್ಕಪೇಟೆ ವಿಭಾಗದಲ್ಲಿ ಕುತ್ತು, ಪೊಲೀಸ್ ಕ್ರಮ ಕೈಗೊಂಡರೂ ಇಳಿಯದ ಗಾಂಜ ನಶೆ ಹೀಗೆ ಅನೇಕ ವಿಚಾರಗಳ ಬಗ್ಗೆ ಪ್ರಸ್ತಾಪವಾಯಿತು.
ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಶಶಿಧರನ್, ಶಿವು, ಸತೀಶ್, ಪುರಸಭೆ ನಾಮಕರಣ ಸದಸ್ಯ ಶಬರೀಶ್ ಶೆಟ್ಟಿ, ಮತ್ತು ಶಾಹುಲ್ ಹಮೀದ್, ಜಿ.ಜಿ. ಮೋಹನ್, ಪುರಸಭೆ ಸದಸ್ಯರಾದ ಪ್ರಥ್ವಿನಾಥ್, ರಾಜೇಶ್ ಪದ್ಮನಾಭ, ರಂಜಿ ಪೂಣಚ್ಚ, ಮಹಮ್ಮದ್ ರಾಫಿ, ಅನಿತಾ, ಬಸ್ ಮಾಲೀಕರಾದ ಕೆ. ಗಣೇಶ್ ತಮ್ಮಯ್ಯ, ವ್ಯಾಪಾರಿ ರಫಿಕ್, ಹಬೀಬ್, ಹ್ಯಾರಿ ಅಚ್ಚಯ್ಯ, ನಾಸಿರ್, ಸಂತೋಷ್, ನಯಾಜ್, ಜಲೀಲ್ ಸೇರಿದಂತೆ ಅನೇಕ ಸಾರ್ವಜನಿಕರು ವಾಹನ ನಿಲುಗಡೆ ಸಮಸ್ಯೆಗಳ ಬಗ್ಗೆ ಮಾತ ನಾಡಿದರು. ವೇದಿಕೆಯಲ್ಲಿ ಪುರಸಭೆಯ ಕಾರ್ಯ ನಿರ್ವಹಣಾಧಿಕಾರಿ ಪಿ.ಕೆ. ನಾಚಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರು ಗಳಾದ ಪೂರ್ಣಿಮ ಮತ್ತು ಜಲೀಲ್, ನಗರ ಠಾಣಾಧಿಕಾರಿ ಪ್ರಮೋದ್, ಉಪನಿರೀಕ್ಷಕಿ ವಾಣಿ, ಗ್ರಾಮಾಂತರ ಠಾಣಾಧಿಕಾರಿ ಲತಾ, ಮತ್ತಿತರರು ಉಪಸ್ಥಿತರಿದ್ದರು.