ಸುಂಟಿಕೊಪ್ಪ, ಮೇ ೭: ಸುಂಟಿಕೊಪ್ಪ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ತೀರ್ಮಾನವಾದಂತೆ ಟೆಂಡರ್ ಪ್ರಕ್ರಿಯೆಗೆ ಬದಲು ವ್ಯಾಪಾರ ಪರವಾನಗಿ ನೀಡಲು ಉಪಸಮಿತಿಯೊಂದನ್ನು ರಚಿಸಲಾಗಿದ್ದು, ಅದರ ತೀರ್ಮಾನದಂತೆ ಅಂಗಡಿ ವ್ಯಾಪಾರ ಪರವಾನಗಿ ನೀಡಲಾಗುತ್ತದೆ ಎಂದು ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ದಿಢೀರ್ ಆಗಿ ಹಸಿಮೀನು ವ್ಯಾಪಾರಿಗಳು ತಮ್ಮಿಂದ ಹಣ ಕಟ್ಟಿಸಿಕೊಂಡರೂ ಮೂಲಭೂತ ಸೌಕರ್ಯಗಳಾದ ನೀರು ಮತ್ತು ವಿದ್ಯುತ್ ಹಾಗೂ ಪರವಾನಗಿಯನ್ನು ನೀಡಿಲ್ಲ ಎಂದು ಪ್ರತಿಭಟನೆ ನಡೆಸಿದ ಬಗ್ಗೆ ಅಧ್ಯಕ್ಷ ಸುನಿಲ್ ಕುಮಾರ್ ಸ್ಪಷ್ಟಪಡಿಸಿದರು. ಸರಕಾರದ ನಿಯಮದಂತೆ ೪ ಹಸಿಮೀನು ವ್ಯಾಪಾರ ಮಳಿಗೆಗಳಿಗೆ ಪರವಾನಗಿ ಅವಕಾಶವಿದ್ದು, ಈಗಾಗಲೇ ೨ ಅಂಗಡಿಗಳಿಗೆ ಪರವಾನಗಿ ನೀಡಲಾಗಿದೆ. ಆದರೆ ಸ್ಥಳೀಯವಾಗಿ ಗೊಂದಲಗಳು ತಾಂತ್ರಿಕ ದೋಷಗಳು ಇರುವ ಹಿನ್ನೆಲೆಯಲ್ಲಿ ವಾರ್ಡ್ ಸದಸ್ಯರೊಬ್ಬರು ಪರಿಶೀಲನೆ ನಡೆಸಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ಪರಿಹರಿಸಲಾಗುವುದೆಂದು ತಿಳಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್ ಪ್ರತ್ರಿಕ್ರಿಯಿಸಿ ಉಪಸಮಿತಿ ಮಾಡಿದ ಬೈಲಾ ಪ್ರಕಾರ ಈ ಹಿಂದೆ ಪಂಚಾಯಿತಿ ತೀರ್ಮಾನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದವರು ಪರಿಗಣಿಸಬೇಕು ಎಂಬ ಹಿನ್ನೆಲೆಯಲ್ಲಿ ಸದ್ಯಕ್ಕೆ ಅಭಿವೃದ್ಧಿ ಶುಲ್ಕ ಸೇರಿ ಕೋಳಿ ಮಾಂಸ ಮಾರುಕಟ್ಟೆಯ ಒಂದು ಕಾಲು ಲಕ್ಷ ಕುರಿ ಮಾರುಕಟ್ಟೆಗೆ ರೂ. ೭೫ ಸಾವಿರ ಹಾಗೂ ೪ ಹಸಿಮೀನು ಮಾರಾಟ ಮಳಿಗೆಗಳಿಗೆ ತಲಾ ಎರಡೂವರೆ ಲಕ್ಷ ನಿಗದಿಗೊಳಿಸಲಾಗಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯದ ಜಿಎಸ್‌ಟಿ ಸೇರಿದೆ. ಕೆಲವೊಂದು ತಾಂತ್ರಿಕ ಕಾರಣಗಳಿಂದ ಗೊಂದಲ ಸೃಷ್ಟಿಯಾಗಿದೆ. ಅದನ್ನು ಪರಿಹರಿಸಲಾಗುವುದೆಂದು ತಿಳಿಸಿದರು.

ಪ್ರತಿಭಟನೆ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಕೆ.ಎ. ಉಸ್ಮಾನ್ ಮಾತನಾಡಿ, ಈರ್ವರು ವ್ಯಾಪಾರಿಗಳು ತಲಾ ಎರಡೂವರೆ ಲಕ್ಷ ರೂಪಾಯಿ ಹಣ ಪಾವತಿಸಿದ್ದು, ೨೦ ರಿಂದ ೨೫ ದಿನಗಳು ಕಳೆದರೂ ಮೂಲಭೂತ ಸೌಕರ್ಯ ಹಾಗೂ ನಿರಾಕ್ಷೇಪಣಾ ಪತ್ರ ನೀಡದೆ ಸತಾಯಿಸುತ್ತಿದ್ದಾರೆ. ಅಧ್ಯಕ್ಷ ಮತ್ತು ಪಿಡಿಓ ಅವರನ್ನು ಕೇಳಿದರೆ ಬೇರೆ ಕೆಲವು ಸದಸ್ಯರ ಮೇಲೆ ಆರೋಪ ಮಾಡುತ್ತಿದ್ದು ಆ ಸದಸ್ಯರ ಹೆಸರು ಬಹಿರಂಗಪಡಿಸಲಿ ಎಂದು ಉಸ್ಮಾನ್ ಆಗ್ರಹಿಸಿದರು.

ಕೆಲವು ಸದಸ್ಯರು ಸುಂಟಿಕೊಪ್ಪ ಅಭಿವೃದ್ಧಿಗೆ ಅಡ್ಡಿಯಾಗಿದ್ದು ಸುಂಟಿಕೊಪ್ಪ ಜನತೆ ಎಚ್ಚರವಾಗಿರಬೇಕೆಂದು ಅವರು ಹೇಳಿದರು. ವ್ಯಾಪಾರ ಪರವಾನಗಿ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡುವ ನಿಟ್ಟಿನಲ್ಲಿ ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರಗೊಳಿಸಬೇಕೆಂದು ಉಸ್ಮಾನ್ ಆಗ್ರಹಿಸಿದರು.