ಸೋಮವಾರಪೇಟೆ, ಮೇ ೬: ಪಟ್ಟಣದಲ್ಲಿರುವ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆಡಳಿತ ವ್ಯವಸ್ಥೆ ಹದಗೆಟ್ಟಿದ್ದು, ಸೂಕ್ತ ತನಿಖೆಯೊಂದಿಗೆ ಸಹಾಯಕ ಆಡಳಿತಾಧಿಕಾರಿಯನ್ನು ಕೂಡಲೆ ವರ್ಗಾವಣೆ ಮಾಡಬೇಕು. ತಪ್ಪಿದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಎಚ್ಚರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ ಮಾತನಾಡಿ, ಸರ್ಕಾರಿ ಆಸ್ಪತ್ರೆಯ ಉಸ್ತುವಾರಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಹಾಗು ಆಡಳಿತ ವೈದ್ಯಾಧಿಕಾರಿ ವಹಿಸಿಕೊಂಡಿದ್ದಾರೆ. ಆದರೆ ಇವರಲ್ಲಿ ಹೊಂದಾಣಿಕೆ ಇಲ್ಲದೆ, ರೋಗಿಗಳು ಸೂಕ್ತ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಆಸ್ಪತ್ರೆಗೆ ಬೇಕಾದ ಎಲ್ಲಾ ತರಹದ ಸೌಲಭ್ಯಗಳು ಹಾಗೂ ಅನುದಾನವನ್ನು ಸರ್ಕಾರ ಸಕಾಲದಲ್ಲಿ ಪೂರೈಕೆ ಮಾಡುತ್ತಿದೆ. ಆದರೆ ಅಧಿಕಾರಿಗಳ ಜಗಳ, ಗಲಾಟೆಯಿಂದ ಅನುದಾನ ಸದುಪಯೋಗವಾಗುತ್ತಿಲ್ಲ ಎಂದು ಹೇಳಿದರು.
ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿಯವರ ವಿರುದ್ಧ ಆಸ್ಪತ್ರೆಯ ಸಿಬ್ಬಂದಿಗಳೇ ಆರೋಪ ಮಾಡುತ್ತಿದ್ದಾರೆ. ನಿರಂತರ ಮಾನಸಿಕ ಹಿಂಸೆ, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಏಕವಚನದಲ್ಲಿ ಮಾತನಾಡುತ್ತಿದ್ದು, ನಮಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿ ಆಸ್ಪತೆಯ ಕ್ಲಿನಿಕಲ್, ನಾನ್‌ಕ್ಲಿನಿಕಲ್ ಹಾಗೂ ಡಿ. ಗ್ರೂಪ್ ನೌಕರರು ಸೇರಿದಂತೆ ೪೫ ಮಂದಿ ೧೭.೩.೨೦೨೫ ರಂದು ಮಡಿಕೇರಿ ಡಿಎಚ್‌ಓ ಅವರಿಗೆ ದೂರು ನೀಡಿದ್ದರು. ಆದರೂ ಇದುವರೆಗೆ ಡಿಎಚ್‌ಒ ತನಿಖೆ ಕೈಗೊಂಡು ಕ್ರಮ ಜರುಗಿಸದೆ ಇರುವುದರಿಂದ ಆಸ್ಪತ್ರೆಯ ಆಡಳಿತ ವ್ಯವಸ್ಥೆ ಹಾಳಾಗಿದೆ ಎಂದು ದೂರಿದರು.
ಮುಂದಿನ ಒಂದು ವಾರದೊಳಗೆ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿರುವ ಸಹಾಯಕ ಆಡಳಿತಾಧಿಕಾರಿ ವಿರುದ್ಧ ತನಿಖೆ ಕೈಗೊಂಡು, ಕೂಡಲೇ ವರ್ಗಾವಣೆ ಮಾಡಬೇಕು. ಆಸ್ಪತ್ರೆಯ ವ್ಯವಸ್ಥೆಗಳನ್ನು ಸುಧಾರಿಸಬೇಕೆಂದು ಒತ್ತಾಯಿಸಿದರು.
ಆಡಳಿತ ಅವ್ಯವಸ್ಥೆಯಿಂದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೇಕಾದ ಔಷಧಿ ಮಾತ್ರೆಗಳ ಕೊರತೆಯಿದೆ. ಔಷಧಿಗಳಿಗೆ, ಹೈಟೆಕ್ ರಕ್ತ ಪರೀಕ್ಷಾ ಘಟಕಕ್ಕೆ ಬೇಕಾದ ರಾಸಾಯನಿಕಗಳು ಹಾಗೂ ಪರಿಕರಗಳಿಗೆ ಮಾಸಿಕವಾಗಿ ಆನ್‌ಲೈನ್‌ನಲ್ಲಿ ಬೇಡಿಕೆ ಸಲ್ಲಿಸುತ್ತಿಲ್ಲ. ರೋಗಿಗಳು ಖಾಸಗಿ ಲ್ಯಾಬ್‌ಗಳಲ್ಲಿ ಅಧಿಕ ಹಣತೆತ್ತು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಒದಗಿದೆ ಎಂದು ದೂರಿದರು. ಸ್ಕಾö್ಯನಿಂಗ್ ಯಂತ್ರವಿದೆ; ತಜ್ಞ ವೈದ್ಯರಿಲ್ಲ. ಯಂತ್ರದ ನಿರ್ವಹಣೆಯ ಬಗ್ಗೆ ವೈದ್ಯಾಧಿಕಾರಿಯೊಬ್ಬರಿಗೆ ತರಬೇತಿ ಆಗಿದೆ. ಆದರೆ ಸ್ಕಾö್ಯನಿಂಗ್ ಮಾಡುತ್ತಿಲ್ಲ. ಎಕ್ಸರೆ ಲ್ಯಾಬ್ ಮತ್ತು ಸಿಬ್ಬಂದಿಗಳು ಇದ್ದಾರೆ. ಪ್ರಿಂಟರ್ ಹಾಳಾಗಿ ಒಂದು ವರ್ಷವಾಗಿದೆ. ಅದನ್ನು ದುರಸ್ತಿಪಡಿಸುವ ಸಾಮಾನ್ಯ ಜ್ಞಾನ ಆಡಳಿತ ವ್ಯವಸ್ಥೆಗಿಲ್ಲ. ರಕ್ಷಾ ಸಮಿತಿಯಲ್ಲಿ ಹಣವಿದ್ದರೂ ಲೇಖನ ಸಾಮಾಗ್ರಿಗಳನ್ನು ಖರೀದಿ ಮಾಡುತ್ತಿಲ್ಲ. ಒಟ್ಟಿನಲ್ಲಿ ಆಸ್ಪತ್ರೆಯ ಆಡಳಿತವೇ ಕೆಟ್ಟು ಹೋಗಿದೆ ಎಂದು ಅರೋಪಿಸಿದರು. ಆರೋಗ್ಯ ಸಚಿವರು ಸೋಮವಾರಪೇಟೆ ತಾಲೂಕಿಗೆ ಸೇರಿದವರಾಗಿದ್ದರೂ, ಪಟ್ಟಣದ ಆಸ್ಪತ್ರೆಯ ಸಮಸ್ಯೆಯನ್ನು ಬಗೆಹರಿಸದಿರುವುದು ನೋವಿನ ಸಂಗತಿಯಾಗಿದೆ. ತಜ್ಞ ವೈದರಿಲ್ಲದೆ ರೋಗಿಗಳ ಪರದಾಟ, ಇನ್ನೊಂದು ಕಡೆ ಇರುವ ಸಿಬ್ಬಂದಿಗಳಿಗೆ ಮಾನಸಿಕ ಕಿರುಕುಳ ಇವೆಲ್ಲವೂಗಳಿಂದ ಸರ್ಕಾರಿ ಆಸ್ಪತ್ರೆಯೇ ಐಸಿಯುನಲ್ಲಿದೆ. ಶಾಸಕರು ಖುದ್ದಾಗಿ ತನಿಖೆ ಮಾಡಿಸಿ, ಸಹಾಯಕ ಆಡಳಿತಾಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಿಸಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಕೆ.ಎನ್. ದೀಪಕ್, ಖಜಾಂಚಿ ತ್ರಿಶೂಲ್ ಕಾರ್ಯಪ್ಪ, ಸಲಹೆಗಾರರಾದ ಜಿ.ಎಂ. ಹೂವಯ್ಯ, ದೊಡ್ಡಮಳ್ತೆ ಉದಯ್ ಇದ್ದರು.