ಚೆಯ್ಯಂಡಾಣೆ, ಮೇ ೫: ಕೃಷಿ ಭೂಮಿ ಫಲವತ್ತತೆಯಿಂದ ಕೂಡಿದ್ದರೆ ಮಾತ್ರ ರೈತರು ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯ ಎಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಮಣ್ಣಿನ ವಿಜ್ಞಾನಿ ಡಾ. ಕೆ.ಟಿ. ಮೋಹನ್ ಕುಮಾರ್ ಹೇಳಿದರು.

ಕೋರಮಂಡಲ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಹಾಗೂ ಕೂರ್ಗ್ ಟ್ರೇಡಿಂಗ್ ಕಂಪೆನಿ ಲಿಮಿಟೆಡ್ ನಾಪೋಕ್ಲು ಇವರ ಸಹಯೋಗದಲ್ಲಿ ನಾಪೋಕ್ಲುವಿನಲ್ಲಿ ಬೆಳೆಗಾರರಿಗೆ ಆಯೋಜಿಸಲಾದ ಕಾಫಿ ಮತ್ತು ಕಾಳುಮೆಣಸು ಕೃಷಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.

ರೈತರು ಯಾವುದೇ ಕೃಷಿ ಚಟುವಟಿಕೆ ನಡೆಸುವ ಮಣ್ಣು ಫಲವತ್ತತೆಯಿಂದ ಕೂಡಿರಬೇಕು. ಅದಕ್ಕೆ ಮೊದಲು ಮಣ್ಣು ಪರೀಕ್ಷೆ ನಡೆಸಿ ಅದರ ಸಾಂದ್ರತೆಯನ್ನು ಅರಿತು ಅಗತ್ಯಕ್ಕೆ ತಕ್ಕಂತೆ ಉತ್ತಮ ಗುಣಮಟ್ಟದ ರಸ ಗೊಬ್ಬರಗಳನ್ನು ಬಳಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರಿಂದ ಕಾಫಿ, ಕಾಳುಮೆಣಸು ಸೇರಿದಂತೆ ಇನ್ನಿತರ ಪ್ರಮುಖ ಬೆಳೆಗಳ ಇಳುವರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯಲು ಸಾಧ್ಯ ಎಂದರಲ್ಲದೆ ರಸಗೊಬ್ಬರಗಳನ್ನು ಬಳಸುವ ವಿಧಾನದ ಕುರಿತು ಸಮಗ್ರ ಮಾಹಿತಿ ನೀಡಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ಮೊಹಮ್ಮದ್ ರಾಫಿ ಮಾತನಾಡಿ, ದೇಶದ ಆರ್ಥಿಕ ಸ್ಥಿತಿ ಮುಂದುವರಿಯಬೇಕಾದರೆ ಕೃಷಿ ಪ್ರಮುಖ ಪಾತ್ರ ವಹಿಸುತ್ತದೆ, ಅದರಂತೆ ರೈತರು ದೇಶದ ಬೆನ್ನೆಲುಬಾಗಿರುತ್ತಾರೆ. ಕೃಷಿಯು ದೇಶದಲ್ಲಿ ಪ್ರತಿನಿತ್ಯ ನಡೆಯುವ ವ್ಯವಹಾರ, ಸಾಗಾಣಿಕೆ ಸೇರಿದಂತೆ ಎಲ್ಲಾ ಕ್ಷೇತ್ರವನ್ನು ಅವಲಂಬಿಸಿ ದೇಶವನ್ನು ಮುನ್ನೆಲೆಗೆ ಕೊಂಡೊಯ್ಯುತ್ತದೆ ಎಂದರು. ಬೇಸಾಯ ಶಾಸ್ತçಜ್ಞ ರಮೇಶ್ ಕುಮಾರ್ ಮಾತನಾಡಿ, ಮಣ್ಣಿನ ಪರೀಕ್ಷೆಯ ನಂತರ ಅದಕ್ಕೆ ಬೇಕಾದ ಪೋಷಕಾಂಶವನ್ನು ನೀಡುವ ಮೂಲಕ ಉತ್ತಮ ಇಳುವರಿಯನ್ನು ಪಡೆದುಕೊಳ್ಳಬಹುದು. ಮಣ್ಣಿಗೆ ಅವಶ್ಯಕತೆ ಇಲ್ಲದ ಗೊಬ್ಬರ ನೀಡಿದ್ದಲ್ಲಿ ಯಾವುದೇ ಪ್ರಯೋಜನವಿಲ್ಲ. ಪ್ರತಿ ವರ್ಷಕ್ಕೊಮ್ಮೆ ಮಣ್ಣು ಮತ್ತು ಕಾಫಿ ಎಲೆಗಳ ಪರೀಕ್ಷೆ ಮಾಡಿಸುವುದರಿಂದ ಗಿಡಗಳಲ್ಲಿರುವ ಪೋಷಕಾಂಶ ಕೊರತೆಯನ್ನು ತಿಳಿದು ಕಡಿಮೆ ವೆಚ್ಚದಲ್ಲಿ ಬೆಳೆಗಾರರು ಆರ್ಥಿಕ ಲಾಭವನ್ನು ಪಡೆಯಬಹುದು ಎಂದರು. ನಾಪೋಕ್ಲುವಿನ ವಕೀಲರಾದ ಅಬ್ದುಲ್ ರಿಯಾಝ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದಲ್ಲಿ ಮಣ್ಣು ವಿಜ್ಞಾನಿ ಡಾ. ಮೋಹನ್ ಕುಮಾರ್ ಹಾಗೂ ಮೊಹಮ್ಮದ್ ರಾಫಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಬೆಳೆಗಾರರಾದ ಶೌಕತ್ ಅಲಿ, ಕಲ್ಯಾಟಂಡ ರಮೇಶ್ ಚಂಗಪ್ಪ, ಲಿಯಾಕತ್ ಅಲಿ, ಅಪ್ಪಚ್ಚಿರ ಸುರೇಶ್, ನಝೀರ್ ಹಾಜಿ, ಹರೀಶ್ ಪಾಲೂರು, ಜಿಲ್ಲಾ ಮಾರುಕಟ್ಟೆ ವ್ಯವಸ್ಥಾಪಕ ಹರ್ಷ ಹೆಗಡೆ, ಬೇಸಾಯ ತಜ್ಞರಾದ ಡಾ. ರಾಜಶೇಖರ್, ಮೊಹಮ್ಮದ್ ಹಾಜಿ ಕುಂಜಿಲ, ಮೊಯ್ದು ಹಾಜಿ ಬೆಟ್ಟಗೇರಿ ಸೇರಿದಂತೆ ನಾಪೋಕ್ಲು ವಿಭಾಗದ ಪ್ರಮುಖ ಬೆಳೆಗಾರರು ಗ್ರಾಮಸ್ಥರು ಹಾಜರಿದ್ದರು.