ಉಗ್ರರಿಗೆ ಆಹಾರ - ಆಶ್ರಯ ನೀಡಿದ್ದ ವ್ಯಕ್ತಿ ನದಿಗೆ ಹಾರಿ ಸಾವು
ಶ್ರೀನಗರ, ಮೇ. ೫: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಉಗ್ರರಿಗೆ ಆಹಾರ ಮತ್ತು ಆಶ್ರಯ ನೀಡಿ ಸಹಾಯ ಮಾಡಿದ್ದ ವ್ಯಕ್ತಿಯೊಬ್ಬ ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳುವಾಗ ನದಿಗೆ ಹಾರಿ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ೨೩ ವರ್ಷದ ಇಮಿತಿಯಾಜ್ ಅಹ್ಮದ್ ಮ್ಯಾಗ್ರೆ ಎಂಬಾತನನ್ನು ಶನಿವಾರ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಕುಲ್ಗಾಮ್ನ ತಂಗ್ಮಾರ್ಗ್ನಲ್ಲಿರುವ ಕಾಡಿನಲ್ಲಿ ಅಡಗಿರುವ ಭಯೋತ್ಪಾದಕರಿಗೆ ಆಹಾರ ಮತ್ತು ಆಶ್ರಯ ನೀಡಿರುವುದಾಗಿ ಆತ ಒಪ್ಪಿಕೊಂಡಿದ್ದ. ಬಳಿಕ ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ಮಾಡಲು ಭದ್ರತಾ ಪಡೆ ಅಧಿಕಾರಿಗಳು ಆರೋಪಿಯನ್ನು ಕರೆದೊಯ್ದಿದ್ದರು. ಭಾನುವಾರ ಬೆಳಿಗ್ಗೆ ಪೊಲೀಸರು ಮತ್ತು ಸೇನೆ ಜಂಟಿ ಕಾರ್ಯಾಚರಣೆ ನಡೆಸುವ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ವೇಶಾವ್ ನದಿಗೆ ಹಾರಿದ್ದಾನೆ. ಆದರೆ ನೀರಿನ ರಭಸಕ್ಕೆ ಸಿಲುಕಿ, ನೀರಿನಲ್ಲೇ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತ ನೀರಿನಲ್ಲಿ ಮುಳುಗುತ್ತಿರುವ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಪಾಕ್ ಮೇಲೆ ಭಾರತ ದಾಳಿ ಮಾಡಿದರೆ ಸಹಕಾರ
ಇಸ್ಲಾಮಾಬಾದ್, ಮೇ. ೫: ಭಾರತದೊಂದಿಗಿನ ಯುದ್ಧದ ಭೀತಿಯ ನಡುವೆ, ಪಾಕಿಸ್ತಾನದ ಮಸೀದಿಗಳಿಂದ ಮಾಡಲಾದ ಘೋಷಣೆಗಳು ಪಾಕಿಸ್ತಾನಿ ಸೇನೆಯ ತೊಡೆ ನಡಗುವಂತೆ ಮಾಡಿದೆ. ತೆಹ್ರೀಕ್-ಎ-ತಾಲಿಬಾನ್ ಪ್ರಾಬಲ್ಯವಿರುವ ಖೈಬರ್ಪಖ್ತುನ್ವಾದಲ್ಲಿರುವ ಮಸೀದಿಗಳು ಯುದ್ಧದ ಸಮಯದಲ್ಲಿ ಭಾರತೀಯ ಸೇನೆಗೆ ಬೆಂಬಲವನ್ನು ಘೋಷಿಸಿವೆ. ಮಸೀದಿಯ ಪ್ರಭಾವಿ ಮೌಲಾನಾ ಒಬ್ಬರು ಮಸೀದಿಯ ಒಳಗಿನಿಂದ ಭಾರತ ದಾಳಿ ಮಾಡಿದರೆ ನಾವು ಭಾರತೀಯ ಸೇನೆಯನ್ನು ಬೆಂಬಲಿಸುತ್ತೇವೆ ಎಂದು ಕುರಾನ್ ಮೇಲೆ ಪ್ರಮಾಣ ಮಾಡುತ್ತೇನೆ ಎಂದು ಘೋಷಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಸಮಯದಲ್ಲಿ ಮೌಲಾನಾ ಕೈಯಲ್ಲಿ ಕುರಾನ್ ಇರುತ್ತದೆ. ಈ ವೀಡಿಯೊ ಖೈಬರ್ ಪಖ್ತುನ್ವಾದಿಂದ ಬಂದಿದೆ. ಅಲ್ಲಿ ಪಾಕಿಸ್ತಾನ ಸೇನೆಯು ಸ್ಥಳೀಯ ಜನಸಂಖ್ಯೆಯ ವಿರುದ್ಧ ಕ್ರೂರ ಕಾರ್ಯಾಚರಣೆಗಳನ್ನು ನಡೆಸಿದ್ದು ಬಲೂಚಿಸ್ತಾನದಂತೆ ನೂರಾರು ಜನರನ್ನು ಕಣ್ಮರೆಯಾಗಿಸಿದೆ. ಆದ್ದರಿಂದ, ಪಾಕಿಸ್ತಾನದೊಳಗೆ ಎದ್ದಿರುವ ಧ್ವನಿಗಳು ಈಗ ಜಿನ್ನಾ ಅವರ ದೇಶವು ಹೊರಗಿನಿಂದ ಮಾತ್ರವಲ್ಲ, ಒಳಗಿನಿಂದಲೂ ಕುಸಿಯುತ್ತಿದೆ ಎಂದು ಸ್ಪಷ್ಟವಾಗಿ ಹೇಳುತ್ತಿವೆ. ಒಂದೆಡೆ, ಖೈಬರ್ ಪಖ್ತುನ್ವಾದ ಪ್ರಸಿದ್ಧ ಇಸ್ಲಾಮಿಕ್ ಧರ್ಮಗುರು ಮಸೀದಿಯಿಂದ ಬಹಿರಂಗವಾಗಿ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ನಾವು ಪಶ್ತೂನ್ಗಳು ಭಾರತೀಯ ಸೈನ್ಯದೊಂದಿಗೆ ನಿಲ್ಲುತ್ತೇವೆ ಮತ್ತು ಪಾಕಿಸ್ತಾನ ಸೈನ್ಯದೊಂದಿಗೆ ಅಲ್ಲ ಎಂದು ಘೋಷಿಸುತ್ತಾರೆ. ಇಸ್ಲಾಮಾಬಾದ್ನ ಕುಖ್ಯಾತ ಲಾಲ್ ಮಸೀದಿಯಲ್ಲಿ, ಅಲ್ಲಿ ನೆರೆದಿದ್ದ ನೂರಾರು ಜನರನ್ನು ಉದ್ದೇಶಿಸಿ ಒಬ್ಬ ಧರ್ಮಗುರು, ಭಾರತದ ಮೇಲೆ ಯುದ್ಧ ನಡೆದರೆ, ಪಾಕಿಸ್ತಾನದ ಜೊತೆ ಯಾರು ನಿಲ್ಲುತ್ತಾರೆ? ಎಂದು ಕೇಳಿದಾಗ, ಇಡೀ ಮಸೀದಿಯಲ್ಲಿ ಒಂದೇ ಒಂದು ಕೈಯೂ ಎತ್ತಲಿಲ್ಲ. ಖೈಬರ್ ಪಖ್ತುಂಖ್ವಾದಲ್ಲಿ ಭಾರತೀಯ ಸೇನೆಗೆ ಬೆಂಬಲ ಘೋಷಿಸಿದ ಧರ್ಮಗುರು ಪ್ರಭಾವಿ ಧಾರ್ಮಿಕ ನಾಯಕರಾಗಿದ್ದು, ಬಹಿರಂಗವಾಗಿ ದಂಗೆಯನ್ನು ಘೋಷಿಸಿದ್ದಾರೆ. ದೇವರ ಮೇಲೆ ಆಣೆಯಿಟ್ಟು ನಾನು ಹೇಳುವುದನ್ನು ಎಚ್ಚರಿಕೆಯಿಂದ ಆಲಿಸಿ. ಯಾರಾದರೂ ನನ್ನನ್ನು ಬಂಧಿಸಲು ಬಯಸಿದರೆ, ಅವರು ಹಾಗೆ ಮಾಡಬಹುದು. ಆದರೆ ನಾನು ಮೊದಲು ಜೈಲಿನಲ್ಲಿದ್ದಾಗ, ಅಲ್ಲಿನ ಕೈದಿಗಳು ಭಾರತ ದಾಳಿ ಮಾಡಬೇಕೆಂದು ಅಲ್ಲಾಹನಲ್ಲಿ ಪ್ರಾರ್ಥಿಸುತ್ತಿದ್ದರು ಎಂದು ಕುರಾನ್ ಮೇಲೆ ಆಣೆಯಿಟ್ಟು ಹೇಳುತ್ತೇನೆ. ನಾವು ಶೀಘ್ರದಲ್ಲೇ ಪಾಕಿಸ್ತಾನವನ್ನು ತೊರೆದು ಭಾರತೀಯ ಸೇನೆಗೆ ಸೇರುತ್ತೇವೆ. ಪಾಕಿಸ್ತಾನಿ ಸೇನೆ ನಮಗೆ ಏನು ಮಾಡಿದೆ ನೋಡಿ. ನಾನು ಸುಳ್ಳು ಹೇಳಿದರೆ, ದೇವರು ನನ್ನನ್ನು ಕ್ಷಮಿಸುವುದಿಲ್ಲ ಎಂದು ನಾನು ಕುರಾನ್ ಮೇಲೆ ಪ್ರಮಾಣ ಮಾಡುತ್ತೇನೆ... ಆದರೆ ನೀವು ಪಶ್ತೂನ್ಗಳನ್ನು ನಾಶಮಾಡಿದ್ದೀರಿ ಮತ್ತು ನಾವು ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ನೀವು ಭಾವಿಸುತ್ತೀರಾ? ನಾವು ನಿಮಗಾಗಿ 'ಜಿಂದಾಬಾದ್' ಎಂದು ಜಪಿಸಬೇಕೆಂದು ನೀವು ಭಾವಿಸುತ್ತೀರಿ... ನೀವು ನಮ್ಮ ಭೂಮಿಯನ್ನು ಕಸಿದುಕೊಂಡಿದ್ದೀರಿ, ನಿಮ್ಮಿಂದಾಗಿ ಕಣ್ಣೀರು ಸುರಿಸದ ಯಾವ ಪಶ್ತೂನ್ ಮಗು ಇದೆ? ಎಂದು ಹೇಳಿದ್ದಾರೆ.
ಸಿಎಂ ಸಚಿವಾಲಯದಿಂದ ಕೆಲಸ ಮಾಡುತ್ತಿದ್ದ ೧೬ ಸಿಬ್ಬಂದಿ ಬಿಡುಗಡೆ
ಬೆಂಗಳೂರು, ಮೇ. ೫: ಸಿಎಂ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ೧೬ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಸಚಿವಾಲಯದ ಸಿಬ್ಬಂದಿ ವಿರುದ್ಧ ಅನೇಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಮೇಜರ್ ಸರ್ಜರಿ ಮಾಡಲಾಗಿದ್ದು ೧೬ ಸಿಬ್ಬಂದಿಗೆ ಮೂಲ ಇಲಾಖೆಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಒಂಬತ್ತು ಸಿಬ್ಬಂದಿ ಮತ್ತು ಸಿಎಂ ಪರಿಹಾರ ನಿಧಿ ವಿಭಾಗದ ಏಳು ಸಿಬ್ಬಂದಿಯನ್ನು ವರ್ಗಾವಣೆಗೊಳಿಸಿ ಸಿಎಂ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಅನ್ಯಸೇವೆಯ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಮಧು ಎನ್, ನಯನ ಕುಮಾರಿ ಬಿ.ಎಲ್, ನವೀನ್ ಕುಮಾರ್, ಬಿ. ಎನ್, ಗೀತಾ ಎನ್, ಸವಿತಾ ಟಿ.ಡಿ, ಪರಮೇಶ್ ಹೆಚ್ ಮತ್ತು ಗಂಗಾಧರ ಎನ್. ಆರ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ. ಮುಖ್ಯಮಂತ್ರಿಗಳ ಚಿವಾಲಯದಲ್ಲಿ ಗುತ್ತಿಗೆ ಅಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಶೈಲಜಾ ಟಿ.ಎಸ್, ಶ್ರೀಶೈಲ ಸಿ. ಲಟ್ಟೆ, ರಾಮಯ್ಯ ಎನ್, ನವೀನ್ ಕುಮಾರ್ ಎಂ.ಆರ್, ಅನ್ನಪೂರ್ಣ ಎಂಡಿ, ರಮ್ಯ ಜಿ, ಉಷಾ ಜಿ.ಆರ್, ಕುಮಾರಿ ಖುರ್ಷಿದ್ ಮತ್ತು ರಿಯಾಜ್ ಎಸ್ ಅವರ ಗುತ್ತಿಗೆ ಆದೇಶವನ್ನು ರದ್ದುಗೊಳಿಸಲಾಗಿದೆ.