ಮಡಿಕೇರಿ, ಮೇ ೨: ಸಾವಿರಾರು ವರ್ಷಗಳಿಂದ ಜೀವಂತಿಕೆಯ ನದಿಯಾಗಿ ಕೋಟ್ಯಾಂತರ ಜೀವಿಗಳಿಗೆ ಜೀವ ನೀಡಿರುವ ಕಾವೇರಿ ನಿಜವಾದ ಅರ್ಥದಲ್ಲಿ ಯೂ ಜೀವನದಿಯಾಗಿದ್ದಾಳೆ ಎಂದು ಬಹುಭಾಷಾ ಕಲಾವಿದ ರಮೇಶ್ ಅರವಿಂದ್ ವರ್ಣಿಸಿದ್ದಾರೆ.
ನಗರದ ಮುಳಿಯ ಜ್ಯುವೆಲ್ಲರಿಯ ನೂತನ ಚಿನ್ನ ಮತ್ತು ಬೆಳ್ಳಿ ಆಭರಣಗಳ ವಿಸ್ಕೃತ ಮಳಿಗೆಯಾದ ಸಿಲ್ವರಿ ಯಾವನ್ನು ಉದ್ಘಾಟಿಸಿ ಮಾತನಾಡಿದ ರಮೇಶ್ ಅರವಿಂದ್ ತಾನಿಂದು ಬ್ರಹ್ಮಗಿರಿ ತಪ್ಪಲಿನ ತಲಕಾವೇರಿಗೆ ತೆರಳಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಆ ಬಳಿಕ ಕಾವೇರಿ ತೀರ್ಥವನ್ನು ಮಡಿಕೇರಿಯ ಮುಳಿಯ ಸಂಸ್ಥೆಗೆ ತಂದು ವಿದ್ಯುಕ್ತವಾಗಿ ಕಾವೇರಿ ತೀರ್ಥವನ್ನು ಮಳಿಗೆಗೆ ಪ್ರೋಕ್ಷಣೆ ಮಾಡಿದೆ. ನಿಜಕ್ಕೂ ಇದೊಂದು ಅಪೂರ್ವ ಅನುಭವ ಎಂದು ಬಣ್ಣಿಸಿದರು.
ತಾನು ಪ್ರಥಮ ಬಾರಿಗೆ ೩೧ ವರ್ಷಗಳ ಹಿಂದೆ ಚಿತ್ರೀಕರಣಕ್ಕಾಗಿ ಕ್ಯಾಮರ ಎದುರಿಸಿದ್ದೇ ಕೊಡಗಿನ ಹರದೂರು ಗ್ರಾಮದ ಸೇತುವೆಯಲ್ಲಿ ಎಂದು ಮೌನ ಗೀತೆ ಚಿತ್ರೀಕರಣ ಸಂದರ್ಭವನ್ನೂ ರಮೇಶ್ ಸ್ಮರಿಸಿಕೊಂಡರು. ಪ್ರಕೃತಿ ರಮಣೀಯ ಕೊಡಗಿಗೆ ತಾನು ಅನೇಕ ಸಲ ಬಂದಿದ್ದೇನೆ. ನಮ್ಮೂರ ಮಂದಾರ ಹೂವೇ ಸೇರಿದಂತೆ ಅನೇಕ ಚಿತ್ರಗಳು ಕೊಡಗಿನಲ್ಲಿ ಚಿತ್ರೀಕರಣವಾಗಿದೆ. ಈ ಭೂಮಿ ತನ್ನ ಪಾಲಿಗೆ ಭಾಗ್ಯದಾಯಕ ವಾಗಿದೆ ಎಂದೂ ರಮೇಶ್ ಹೇಳಿದರು.
ರಾಜಮಹಾರಾಜರ ಆ ಕಾಲದಿಂದ ಈ ಕಾಲದವರೆಗೂ ಮಾನವನ ಸೌಂದರ್ಯಕ್ಕೆ ಮೆರುಗು ನೀಡಿದ್ದೇ ಆಭರಣಗಳು ಎಂದು ಹೇಳಿದ ರಮೇಶ್ ಅರವಿಂದ್ ಇದೀಗ ತಾನು ಸೌಂದರ್ಯದ ಪ್ರತೀಕವಾದ ಮುಳಿಯ ಚಿನ್ನಾಭರಣ ಸಂಸ್ಥೆಯ ರಾಯಭಾರಿಯಾಗಿದ್ದು ಹೆಮ್ಮೆ ತಂದಿದೆ ಎಂದು ಹೇಳಿದರು.
ಮೊದಲು ನಮ್ಮೊಳಗೆ ಸಂತೋಷವನ್ನು ಕಂಡುಕೊಳ್ಳಬೇಕು. ಆಗ ಮನಸ್ಸಿನ ಸಂಭ್ರಮ ಇಮ್ಮಡಿಗೊಳ್ಳುತ್ತದೆ. ಇದನ್ನೇ ಮುಳಿಯ ಸಂಸ್ಥೆಯು ಸಂತೋಷಕ್ಕಾಗಿ ಮುಳಿಯಕ್ಕೆ ಬನ್ನಿ ಎಂಬ ಧೇಯ ವಾಕ್ಯದೊಂದಿಗೆ ಪ್ರಸ್ತುತಪಡಿಸಿದೆ ಎಂದು ರಮೇಶ್ ಅರವಿಂದ್ ಹೇಳಿದರು.
ಮುಳಿಯ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ
(ಮೊದಲ ಪುಟದಿಂದ) ಕೇಶವಪ್ರಸಾದ್ ಮುಳಿಯ ಮಾತನಾಡಿ, ಮುಳಿಯ ಸಂಸ್ಥೆಯು ಚಿನ್ನಾಭರಣಗಳ ತಯಾರಿಕೆಯಲ್ಲಿ ೮೧ ವರ್ಷಗಳನ್ನು ಪೂರೈಸಿದೆ. ಈ ಸುಧೀರ್ಘ ಹಾದಿಯಲ್ಲಿ ಸದಾ ಗ್ರಾಹಕರ ವಿಶ್ವಾಸವನ್ನು ತನ್ನದಾಗಿಸಿಕೊಂಡಿದೆ. ೨೦೩೨ ರ ವೇಳೆಗೆ ಮುಳಿಯ ಸಂಸ್ಥೆಯು ೫ ಸಾವಿರ ಕೋಟಿ ರೂಪಾಯಿ ವಾರ್ಷಿಕ ವಹಿವಾಟಿನ ಗುರಿ ಹೊಂದಿದೆ ಎಂದರು. ಭಾರತದಲ್ಲಿಯೇ ಮೊದಲ ಬಾರಿಗೆ ಮುಳಿಯ ಸಂಸ್ಥೆಯಲ್ಲಿ ಚಿನ್ನ, ವಜ್ರ ಮತ್ತು ಬೆಳ್ಳಿಯ ನಿಖರತೆ ಪತ್ತೆ ಹಚ್ಚುವ ಯಂತ್ರವನ್ನು ಸ್ಥಾಪಿಸಲಾಗಿದೆ ಎಂದೂ ಕೇಶವ ಪ್ರಸಾದ್ ಹೇಳಿದರು.
ಮುಳಿಯ ಸಂಸ್ಥೆಯ ಮಾರುಕಟ್ಟೆ ಸಲಹೆಗಾರ ವೇಣುಶರ್ಮ ಮಾಹಿತಿ ನೀಡಿ, ಮುಳಿಯ ಸಂಸ್ಥೆಯು ಚಿನ್ನಾಭರಣಗಳ ವಹಿವಾಟನ್ನು ಕೇವಲ ವ್ಯಾಪಾರಕ್ಕಾಗಿ ಮಾತ್ರ ಪರಿಗಣಿಸದೇ ಅದನ್ನು ಸಾಮಾಜಿಕ ಬದ್ಧತೆಯಿಂದಲೂ ಕಾಣುತ್ತಿದೆ ಎಂದು ಹೇಳಿದರು. ಗುರುಪ್ರಿಯ ನಾಯಕ್ ಪ್ರಾರ್ಥಿಸಿ, ಮಡಿಕೇರಿ ಶಾಖಾ ವ್ಯವಸ್ಥಾಪಕ ತೀತಿಮಾಡ ಸೋಮಣ್ಣ ಸ್ವಾಗತಿಸಿ, ಕೃಷ್ಣವೇಣಿ ಮುಳಿಯ ವಂದಿಸಿದರು. ಬಿಗ್ ಬಾಸ್ ರಿಯಾಲಿಟಿ ಶೋಗೆ ಹಿನ್ನಲೆ ಧ್ವನಿ ನೀಡಿರುವ ಪ್ರದೀಪ್ ಬಡಿಕ್ಕಲ ಮುಳಿಯ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಪ್ರಸಾದ್ ಮುಳಿಯ, ಅಶ್ವಿನಿ ಕೃಷ್ಣ ಹಾಜರಿದ್ದರು.