ವೀರಾಜಪೇಟೆ, ಏ. ೨೯: ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ವನ್ಯಜೀವಿ ಘಟಕಗಳ ದಿನಗೂಲಿ ಹೊರಗುತ್ತಿಗೆ ನೌಕರರ ಸಂಘ ಬೆಂಗಳೂರು ಇವರ ವತಿಯಿಂದ ವೀರಾಜಪೇಟೆ ಶಾಸಕ ಪೊನ್ನಣ್ಣ ಅವರ ಗೃಹ ಕಚೇರಿಯಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಅವರೊಂದಿಗೆ ಚರ್ಚೆ ಹಾಗೂ ಮನವಿ ಸಲ್ಲಿಸಲಾಯಿತು.

ವೀರಾಜಪೇಟೆ ವಿಧಾನಸಭಾ ವ್ಯಾಪ್ತಿಯ ಅರಣ್ಯ ಇಲಾಖೆ ಹಾಗೂ ಕರ್ನಾಟಕ ರಾಜ್ಯದ ವನ್ಯಜೀವಿ ಘಟಕಗಳಲ್ಲಿ ಹೊರಗುತ್ತಿಗೆ ಆಧಾರದ ಕೆಲಸ ಮಾಡುತ್ತಿರುವ, ೩೩ ವನ್ಯಜೀವಿ ವಲಯ ಮತ್ತು ೫ ಹುಲಿ ಸಂರಕ್ಷಿತ ಪ್ರದೇಶಗಳ ನೌಕರರರು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳ ಬಗ್ಗೆ ಮುಖ್ಯಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದರು.

ಶಾಸಕ ಪೊನ್ನಣ್ಣ ಮನವಿ ಸ್ವೀಕರಿಸಿ ಮಾತನಾಡಿ ಈಗಾಗಲೇ ತಾವು ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರೊಂದಿಗೆ ಮಾತನಾಡಿದ್ದು, ಅತಿ ಶೀಘ್ರದಲ್ಲಿ ರಾಜ್ಯ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳುವುದೆಂಬ ಭರವಸೆ ನೀಡಿದರು. ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಖಂಡಿತವಾಗಿಯೂ ಮಾಡುತ್ತೇನೆ. ಬೆಟ್ಟದಷ್ಟು ಸಮಸ್ಯೆಗಳಿವೆ. ಅದನ್ನು ಹಂತಹAತವಾಗಿ ಪರಿಹರಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ವನ್ಯಜೀವಿ ಘಟಕಗಳ ದಿನಗೂಲಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಅರಣ್ಯ ಇಲಾಖೆಯ ಒಟ್ಟು ೩೩ ವನ್ಯಜೀವಿ ಘಟಕಗಳು ಮತ್ತು ೫ ರಾಷ್ಟಿçÃಯ ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ಮತ್ತು ಆನೆ ಕಾರ್ಯಾಚರಣೆ, ಹುಲಿ ಕಾರ್ಯಾಚರಣೆ, ಪ್ರಾಣಿಹತ್ಯೆ ತಡೆ ಶಿಬಿರ ಗಡಿ ಪ್ರದೆಶಗಳಲ್ಲಿ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವ ಹಂಗಾಮಿ ನೌಕರರ ಸಮಸ್ಯೆಗಳ ಬಗ್ಗೆ ನಾವು ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೆ ನಮಗೆ ನ್ಯಾಯ ದೊರಕಿಲ್ಲ. ಹಾಗಾಗಿ ಶಾಸಕ ಪೊನ್ನಣ್ಣ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ. ನಮ್ಮ ಕೊಡಗು ಭಾಗದ ಶಾಸಕರಾದ ಪೊನ್ನಣ್ಣ ಅವರಿಗೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ವನ್ಯಜೀವಿ ಮಾನವ ಸಂಘಟನೆಗಳನ್ನು ಹತ್ತಿರದಿಂದ ನೋಡಿದ್ದು ನಮ್ಮ ದಿನಗೂಲಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದವರಾಗಿದ್ದು ನಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಬೇಕು ಎಂದರು.

ರಾಜ್ಯ ವನ್ಯಜೀವಿ ಘಟಕಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ೧೦.೪.೧೯೯೬ ರ ನಂತರದ ದಿನಗೂಲಿ ಮತ್ತು ಪಿ ಸಿ ಪಿ ನೌಕರರ ಮೂಲ ಹುದ್ದೆ ವ್ಯತ್ಯಾಸ ಮಾಡಿ ೨೦೧೭ ರಿಂದ ಹೊರಗುತ್ತಿಗೆಗೆ ಬದಲಾಯಿಸಿ ನೌಕರರ ಉದ್ಯೋಗದ ಹಕ್ಕಿಗೆ ಧಕ್ಕೆಯಾಗಿದ್ದು ೨೦೧೭ರ ಹಿಂದೆ ಕೆಲಸಕ್ಕೆ ಸೇರಿದ ನೌಕರರನ್ನು ದಿನಗೂಲಿ ಪದನಾಮದಲ್ಲಿ ಮುಂದುವರೆಸಬೇಕು.

ವನ್ಯಜೀವಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರು ದಿನದ ೨೪ ಗಂಟೆಗಳು ಕೆಲಸ ನಿರ್ವಹಿಸುತ್ತಿದ್ದರೂ ಮಾಸಿಕ ೩೦ ದಿವಸಗಳಿಗೆ ಸಂಬಳ ನೀಡುವ ಬದಲು ೨೬ ದಿನಗಳಿಗೆ ಸಂಬಳ ನೀಡಲಾಗುತ್ತಿದೆ ಈ ವ್ಯವಸ್ಥೆ ನಿಲ್ಲಬೇಕು; ಕಷ್ಟ ಪರಿಹಾರ ಭತ್ಯೆ ತಾರತಮ್ಯ, ವನ್ಯಜೀವಿ ಘಟಕಗಳನ್ನು ಬಿಡುಗಡೆ ಮಾಡುವಾಗ ತಾರತಮ್ಯವಾಗಿದೆ. ಇಂದು ಪ್ರತಿಯೊಬ್ಬ ದಿನಗೂಲಿ ನೌಕರ ತನ್ನ ಉದ್ಯೋಗದ ಭದ್ರತೆ ಇಲ್ಲದೆ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾನೆ. ತಮ್ಮ ಅನಾರೋಗ್ಯಕ್ಕೂ ಒಂದು ಮಾತ್ರೆ ತೆಗೆದುಕೊಳ್ಳಲು ಕೈಯಲ್ಲಿ ಕಾಸಿಲ್ಲದೆ ಭಿಕ್ಷೆ ಎತ್ತುವ ಮಟ್ಟಕ್ಕೆ ಬಂದಿದ್ದಾರೆ. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿರುವ ದಿನಗೂಲಿ ನೌಕರರ ಸಮಸ್ಯೆಗಳಿಗೆ ಪರಿಹಾರ ನೀಡಲು ಶಾಸಕರು ಶಕ್ತಿಯಾಗಬೇಕೆಂದು ಸಂಕೇತ್ ಪೂವಯ್ಯ ಮನವಿ ಮಾಡಿದರು.

ಇದೇ ಸಂದರ್ಭ ಶಾಸಕರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ರಾಜ್ಯ ಉಪಾಧ್ಯಕ್ಷ ಹಾಗೂ ಕೊಡಗು ಜಿಲ್ಲಾಧ್ಯಕ್ಷ ಎಸ್.ಎಸ್. ಹರೀಶ್, ಗೌರವಾಧ್ಯಕ್ಷ ಎ.ಎಂ. ನಾಗರಾಜು ಅವರು ನೌಕರರ ಸಮಸ್ಯೆಗಳನ್ನು ಶಾಸಕರಿಗೆ ಮನವರಿಕೆ ಮಾಡಿದರು. ಈ ಸಂದರ್ಭ ರಾಜ್ಯ ದಿನಕೂಲಿ ನೌಕರರ ಸಂಘದ ಪದಾಧಿಕಾರಿಗಳು, ಇಲಾಖೆಯ ಅಧಿಕಾರಿಗಳು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.