ಮಡಿಕೇರಿ, ಏ. ೨೯: ಸ್ವಂತ ಸೂರಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಆದಿವಾಸಿ ಹಾಗೂ ದಲಿತ ಕುಟುಂಬಗಳು ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಬಳಿಯ ಪೈಸಾರಿ ಭೂಮಿಯೊಂದರಲ್ಲಿ ತಾತ್ಕಾಲಿಕ ಗುಡಿಸಲು ಕಟ್ಟಿ ಶಾಶ್ವತ ಸೂರಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ವೀರಾಜಪೇಟೆ ತºಶೀಲ್ದಾರ್ ನೇತೃತ್ವದ ಕಂದಾಯ ಇಲಾಖೆ ಸಿಬ್ಬಂದಿ ದಿಢೀರ್ ದಾಳಿ ನಡೆಸಿ ಗುಡಿಸಲು ತೆರವು ಕಾರ್ಯಚರಣೆ ಕೈಗೊಂಡು ಸ್ಥಳದಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆದು ಕೊಂಡೊಯ್ದ ಘಟನೆ ನಡೆದಿದೆ.

ಮಾಹಿತಿ ನೀಡದೆ ಏಕಾಏಕಿ ತೆರವುಗೊಳಿಸಿ ಆಹಾರ ಸೇರಿದಂತೆ ಇತರ ವಸ್ತುಗಳನ್ನು ಕೊಂಡೊಯ್ದ ಘಟನೆಯನ್ನು ಖಂಡಿಸಿ ಪ್ರತಿಭಟನಾಕಾರರು ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅಮ್ಮತ್ತಿ ನಾಡಕಚೇರಿ ಮುಂಭಾಗದಲ್ಲಿ ಆಹೋರಾತ್ರಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಭೂಮಿ ಮತ್ತು ವಸತಿ ಹೋರಾಟ ಸಮಿತಿ ಹಾಗೂ ಬಹುಜನ ಕಾರ್ಮಿಕ ಸಂಘದ ಪ್ರಮುಖ ಮೊಣ್ಣಪ್ಪ ಮಾತನಾಡಿ ಅಮ್ಮತ್ತಿ ಹಾಗೂ ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನೂರಾರು ಕುಟುಂಬಗಳು ಸ್ವಂತಸೂರಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದು ಶಾಶ್ವತ ನಿವೇಶನಕ್ಕಾಗಿ ಹಲವು ವರ್ಷಗಳಿಂದಲೂ ಅರ್ಜಿ ಸಲ್ಲಿಸಿ ಹೋರಾಟ ನqಸುತ್ತಿದ್ದರೂ ಯಾವುದೇ ಸ್ಪಂದನ ಸಿಕ್ಕಿಲ್ಲ ಎಂದು ದೂರಿದ ಅವರು, ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪುಟ್ಟ ಮಕ್ಕಳೊಂದಿಗೆ ವಯೋವೃದ್ಧರು ಸೇರಿ ಮಹಿಳೆಯರು, ಪುರುಷರು ಆಹಾರ ಪದಾರ್ಥಗಳನ್ನು ಇಟ್ಟು ಅಡುಗೆ ಮಾಡಿ ತಿನ್ನಲು ಮುಂದಾಗುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಅಧಿಕಾರಿಗಳು ಏಕಾಏಕಿ ಗುಡಿಸಲು ಸೇರಿದಂತೆ ಅಡುಗೆ ಪಾತ್ರೆ, ಡ್ರಮ್ಮು, ಪ್ಲಾಸ್ಟಿಕ್ ತೆರವು ಮಾಡಿ ಇತರ ವಸ್ತುಗಳನ್ನ ತೆಗೆದುಕೊಂಡು ಹೋದರು. ಊಟ ಮಾಡಲಾದರೂ ಬಿಡಿ ಎಂದು ಅಂಗಲಾಚಿದರು. ನಂತರ ಊಟ ಮಾಡಲು ಅವಕಾಶ ನೀಡಿದ ಬಳಿಕ ಪಾತ್ರೆ ಸೇರಿದಂತೆ ಇತರ ವಸ್ತುಗಳೆನ್ನೆಲ್ಲ ಕೊಂಡೊಯ್ದರು.

ಕೆಲಕಾಲ ದಿಢೀರ್ ಮಳೆ ಸುರಿಯಲಾರಂಭಿಸಿ ಮಕ್ಕಳು, ಮಹಿಳೆಯರು, ಪುರುಷರು ಪ್ಲಾಸ್ಟಿಕ್ ಒಂದರ ಆಶ್ರಯ ಪಡೆದ ಸಂದರ್ಭ ಮಳೆಯ ನಡುವೆಯೂ ಪ್ಲಾಸ್ಟಿಕ್ ಬಿಚ್ಚಿ ಕೊಂಡೊಯ್ದರು ಎಂದು ಮೊಣ್ಣಪ್ಪ ಆರೋಪಿಸಿದರು. ಮಹಿಳೆಯರು ಕೂಡ ಅಧಿಕಾರಿಗಳ ಕ್ರಮದ ಬಗ್ಗೆ ಅಳಲು ತೋಡಿಕೊಂಡರು.

ಅಮ್ಮತ್ತಿ ನಾಡಕಚೇರಿಯ ಮುಂದೆ ನಡೆದ ಪ್ರತಿಭಟನೆಯಲ್ಲಿ ಹೋರಾಟದ ಅಧ್ಯಕ್ಷ ಪಾಪ್ಪಣ್ಣ, ಬಹುಜನ ಕಾರ್ಮಿಕ ಸಂಘದ ಕಾರ್ಯದರ್ಶಿ ಮಹೇಶ್, ಕಿರಣ್ ಜಗದೀಶ್, ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಬಹುಜನ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷೆ ಕುಸುಮಾವತಿ ಆನಂದ್, ಬಹುಜನ ಸಮಾಜ ಪಕ್ಷದ ಪೂವಣಿ, ಹನೀಫ್, ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ಕಾರ್ಯದರ್ಶಿ ಎಂ. ರಂಜಿತ್ ಮೌರ್ಯ ಹಾಗೂ ಚೆಟ್ಟಳ್ಳಿಯ ಪೊನ್ನತ್ ಮೊಟ್ಟೆ, ಪೆಗ್ಗೋಲಿ ಭೂಮಿ ಹೋರಾಟ ಸಮಿತಿ, ಕಡಗ ದಾಳು, ಕಬಡಗೇರಿ, ಕುಂಜಲಗೇರಿ, ಬೊಳ್ಳುಮಾಡು ವಸತಿ ಮತ್ತು ಹಕ್ಕು ವಂಚಿತ ಹೋರಾಟಗಾರರು ಹಾಜರಿದ್ದರು. -ಎಸ್.ಎಂ. ಮುಬಾರಕ್