ಕಣಿವೆ, ಏ. ೨೯ : ಹಾರಂಗಿ ಹಿನ್ನೀರು ಪ್ರದೇಶದ ಸುಂದರ ಪರಿಸರ ಪುಂಡ ಪೋಕರಿಗಳ ಪಾಲಿಗೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ನಿತ್ಯವೂ ಹಾಡ ಹಗಲೆನ್ನದೇ, ಸಂಜೆ ಹಾಗೂ ಇಳಿ ಸಂಜೆಯಲ್ಲಿ ವಾಹನಗಳಲ್ಲಿ ಧಾವಿಸುವ ಮಂದಿ ತಾವು ಇಲ್ಲಿ ತಂದ ಮದ್ಯದ ಬಾಟಲಿಗಳನ್ನು ಕುಡಿದು ಮನಬಂದAತೆ ಬಿಸಾಡುತ್ತಿದ್ದಾರೆ.
ಕಸದ ತೊಟ್ಟಿ
ಹೊಟೇಲ್‌ಗಳಿಂದ ಪ್ಲಾಸ್ಟಿಕ್‌ಗಳಲ್ಲಿ ಕಟ್ಟಿಸಿ ತರುವ ಆಹಾರದ ತ್ಯಾಜ್ಯಗಳ ಸಹಿತ ಪ್ಲಾಸ್ಟಿಕ್‌ಗಳನ್ನು ಬಿಸಾಡುವ ಮೂಲಕ ಕುಡಿದು ಕುಣಿದು ಕುಪ್ಪಳಿಸಿ ತೆರಳುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ. ಅಷ್ಟು ಮಾತ್ರವಲ್ಲ, ಕೆಲವರು ಹೆಣ್ಣು ಮಕ್ಕಳನ್ನು ಕರೆ ತಂದು ಇಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸಿ ಕಾಂಡೋಮ್‌ಗಳನ್ನೂ ಕೂಡ ಇಲ್ಲೇ ಬಿಸಾಡಿ ತೆರಳುವ ಮೂಲಕ ಹಾರಂಗಿ ಹಿನ್ನೀರು ಪ್ರದೇಶವನ್ನು ಕಸದ ತೊಟ್ಟಿಯಾಗಿ ಮಾರ್ಪಡಿಸಿದ್ದಾರೆ.
ವಿವಿಧೆಡೆಗಳಿಂದ ಧಾವಿಸುವ ಮಂದಿ ಇಲ್ಲಿ ಮನಬಂದAತೆ ವರ್ತಿಸುತ್ತಿದ್ದು ಕೂಡಲೇ ಇಂತಹ ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳಿಗೆ ಸಂಬAಧಿಸಿದ ಇಲಾಖೆಯವರು ಕ್ರಮ ಜರುಗಿಸದಿದ್ದರೆ ನಾವೇ ಕ್ರಮ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸ್ಥಳೀಯರು ಆಕ್ರೋಶÀ ವ್ಯಕ್ತಪಡಿಸಿದ್ದಾರೆ.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಿನ್ನೀರು ಪ್ರದೇಶದ ಸುತ್ತ ಸಾರ್ವಜನಿಕರು ಹಾಗೂ ಪ್ರವಾಸಿಗರ ಅತಿಕ್ರಮ ಪ್ರವೇಶವನ್ನು ನಿರ್ಬಂಧಿಸುವ ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕೆಂದು ಒತ್ತಾಯಿಸಿರುವ ಸ್ಥಳೀಯರು ಸಂಬAಧಿತ ಸುಂಟಿಕೊಪ್ಪ ಪೊಲೀಸರು ಕೂಡ ಬೀಟ್ ನಡೆಸುವ ಮೂಲಕ ಪುಂಡ ಪೋಕರಿಗಳಿಗೆ ಭಯ ಹುಟ್ಟಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪರಿಸರ ಪ್ರೇಮಿಗಳಿಂದ ಸ್ವಚ್ಛ
ಪ್ರತೀ ವಾರವೂ ಸ್ಥಳೀಯ ಪರಿಸರ ಪ್ರೇಮಿಗಳು ಇಲ್ಲಿ ಹರಡಿರುವ ಮದ್ಯದ ಬಾಟಲಿಗಳು, ತ್ಯಾಜ್ಯಗಳನ್ನು ಆಯ್ದು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವು ಪುಂಡರು ಕುಡಿದ ನಶೆ ನೆತ್ತಿಗೇರಿಸಿಕೊಂಡು ಬಾಟಲಿಗಳನ್ನು ಕಲ್ಲಿಗೆ ಹೊಡೆದು ಪುಡಿ ಪುಡಿ ಗೈದು ಹೋಗುತ್ತಿರುವ ಬಗ್ಗೆ ದೂರಿರುವ ಪರಿಸರ ಪ್ರೇಮಿ ಗಂಗಾಧರ್, ನವೀನ್, ರಾಜೇಶ್, ಪವಿತ್ರ, ನಳಿನಿ ಮೊದಲಾದವರು ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶದ ಅಂದ ಚೆಂದ ಸವಿಯಬೇಕೇ ಹೊರತು ಇಲ್ಲಿನ ಪರಿಸರವನ್ನು
(ಮೊದಲ ಪುಟದಿಂದ) ಹಾಳುಗೆಡಹುವ ಮಂದಿಯ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಬೆಂಕಿ ಹಚ್ಚಿ ವಿಕೃತಿ
ಕೆಲವು ಪುಂಡರು ಹಿನ್ನೀರು ಪ್ರದೇಶದಲ್ಲಿರುವ ಬಿದಿರು ಮರಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದು ಸ್ಥಳಕ್ಕೆ ಅಗ್ನಿಶಾಮಕ ವಾಹನ ತಂದು ಸಿಬ್ಬಂದಿಗಳು ಬೆಂಕಿ ಅವಘಡ ತಪ್ಪಿಸಿರುವ ಪ್ರಹಸನವೂ ಜರುಗಿದೆ.
ರೆಸಾರ್ಟ್ಗಳ ನಿರ್ಮಾಣ
ಕೆಲವು ಬಂಡವಾಳ ಶಾಹಿಗಳು ದಿಢೀರನೇ ಹಣ ಮಾಡುವ ಉದ್ದೇಶದಿಂದ ಹಾರಂಗಿ ಹಿನ್ನೀರಿನ ಸುಂದರ ತೀರವನ್ನು ಅರಸಿ ದುಪ್ಪಟ್ಟು ದುಡ್ಡಿಗೆ ಖರೀದಿಸುವ ಮೂಲಕ ಹಾಗೂ ಲೀಸ್ ಗೆ ಭೂಮಿಯನ್ನು ಪಡೆಯುವ ಮೂಲಕ ರೆಸಾರ್ಟ್ಗಳು ಹಾಗೂ ಹೋಮ್ ಸ್ಟೇಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ ತಮ್ಮ ಪ್ರವಾಸಿ ಧಾಮಗಳ ವ್ಯಾಪ್ತಿಯನ್ನು ಹಿನ್ನೀರು ಪ್ರದೇಶಗಳತ್ತ ಅತಿಕ್ರಮಿಸಿ ಮಳೆಗಾಲದ ಅವಧಿಯಲ್ಲಿ ಜಲಾಶಯ ಪೂರ್ಣ ಪ್ರಮಾಣದಲ್ಲಿ ಮೈದುಂಬಿದ ಸಂದರ್ಭ ತಮ್ಮಲ್ಲಿ ಬರುವ ಪ್ರವಾಸಿಗರ ಮೋಜು ಮಸ್ತಿಗೂ ಅವಕಾಶ ಕಲ್ಪಿಸುವ ಮೂಲಕ ಹಣ ಮಾಡುವ ಮಾರ್ಗೋಪಾಯ ಕಂಡುಕೊAಡಿದ್ದಾರೆ.
ಇನ್ನೂ ಕೆಲ ಕಾಫಿ ತೋಟಗಳ ಹಾಗೂ ಖಾಲಿ ಭೂಮಾಲೀಕರು ತಮ್ಮ ಭೂಮಿಯನ್ನು ಲೀಸ್‌ಗೆ ಕೊಟ್ಟು ಕೈಕಟ್ಟಿ ಕುಳಿತಿದ್ದಾರೆ. ಅವರು ಯಾರೂ ಕೂಡ ಪರಿಸರದ ಉಳಿವು, ಜಲಾಶಯದ ಹಿನ್ನೀರಿನ ಸೊಬಗು ಹಾಳಾದರೂ ಚಿಂತೆಯಿಲ್ಲದAತಿದ್ದಾರೆ. ಒಟ್ಟಾರೆ ಅತಿಯಾದ ಪ್ರವಾಸೋದ್ಯಮ ಸುಂದರ ಪರಿಸರವನ್ನು ಹಾಳು ಮಾಡುತ್ತಿದೆ ಎಂದು ಪರಿಸರ ಪ್ರೇಮಿಗಳು ನೋವು ತೋಡಿಕೊಂಡಿದ್ದಾರೆ. -ವರದಿ : ಕೆ.ಎಸ್.ಮೂರ್ತಿ